ಕಾರ್ಕಳ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಮ್ಮನು ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ಘಟನೆ ನಿಟ್ಟೆ ಬಜಕಳದಲ್ಲಿ ನಡೆದಿದೆ. ಪರಿಶಿಷ್ಟ ಜಾತಿಗೆ ಸೇರಿದ ಶೇಖರ್ (50) ಕೊಲೆಯಾದವರು. ಅವರ ಕಿರಿಯ ಸಹೋದರ ರಾಜು (35) ಕೊಲೆ ಮಾಡಿದ ಆರೋಪಿ.
ಜಾಗದ ತಕರಾರಿಗೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎನ್ನಲಾಗಿದೆ. ಶೇಖರ್ ಮತ್ತು ರಾಜು ಸಹೋದರರು ಪ್ರತ್ಯೇಕವಾಗಿ ವಾಸಿಸುತ್ತಿದರು. ಶೇಖರ್ ತನ್ನ ತಾಯಿಗೆ ಮಂಜೂರಾದ ಜಮೀನಿನಲ್ಲಿ ವಾಸವಾಗಿದ್ದರು. ಈ ಹಿಂದೆ ಶೇಖರ್ ಜತೆ ವಾಸವಾಗಿದ್ದ ರಾಜು ಇಬ್ಬರ ನಡುವೆ ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗಿ ಶೆಡ್‌ನಲ್ಲಿ ವಾಸಿಸಲು ಆರಂಭಿಸಿದ್ದರು. ಶೇಖರ್ ತನ್ನ ಮನೆ ಅಂಗಳದಲ್ಲಿ ಕೆಲಸದಲ್ಲಿ ನಿರತನಾಗಿದ್ದರು ಮತ್ತು ಮೂವರು ಕಾರ್ಮಿಕರ ಸಹಾಯದಿಂದ ಜಲ್ಲಿಕಲ್ಲನ್ನು ತನ್ನ ಮನೆಗೆ ಸಾಗಿಸುತ್ತಿದ್ದರು. ಅಲ್ಲಿಗೆ ಕುಡಿದ ಮತ್ತಿನಲ್ಲಿ ಆಗಮಿಸಿದ ರಾಜು ದುರಸ್ತಿ ಕೆಲಸ ಮಾಡದಂತೆ ತಡೆಯೊಡ್ಡಿದ್ದಾನೆ.. ಅದಕ್ಕೆ ಶೇಖರ್ ಕಿವಿಗೊಡದೆ ತನ್ನ ಪಾಡಿಗೆ ಕೆಲಸ ಮುಂದುವರಿಸಿದ್ದರು.
ಈ ವೇಳೆ ಬೆದರಿಕೆ ಹಾಕಿ ಚೂರಿಯಿಂದ ಅಣ್ಣ ಶೇಕರ್‌ನ ಕುತ್ತಿಗೆ ಮತ್ತು ಹೊಟ್ಟೆಗೆ ತಿವಿದಿದ್ದಾನೆ. ಗಂಭೀರ ಗಾಯಗೊಂಡು ಅತೀವ ರಕ್ತಸ್ರಾವದಿಂದ ಶೇಖರ್ ಮೃತಪಟ್ಟಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.