Monday, November 16, 2026
spot_imgspot_img
spot_imgspot_img

ಜಾತಿ-ಧರ್ಮದ ಭೇದ ಮರೆತು ಅಬ್ದುಲ್ ಅಝೀಝ್ ಜನ್ಮದಿನ ಆಚರಣೆ: ಆಶ್ರಮದಲ್ಲಿ ಅನ್ನದಾನ, ಸಾರ್ವಜನಿಕರಿಗೆ ಪಾನೀಯ ವಿತರಣೆ

- Advertisement -
- Advertisement -

ಉಳ್ಳಾಲ: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಅಬ್ದುಲ್ ಅಝೀಝ್ (ಮೈಸೂರು ಬಾವ) ಅವರ 53ನೇ ಜನ್ಮದಿನವನ್ನು ಅವರ ಹಿಂದೂ ಗೆಳೆಯರು ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅದ್ದೂರಿಯಾಗಿ ಆಚರಿಸಿದರು.

ಸಾಯಿ ಫ್ರೆಂಡ್ಸ್ ಅಸೈಗೋಳಿ ಅಧ್ಯಕ್ಷ ಅಶ್ರಫ್‌ ನಾಟೆಕಲ್ ಅವರ ಆಶಯದಂತೆ ಸಾಯಿ ಫ್ರೆಂಡ್ಸ್ ಮತ್ತು ಓಂ ಫ್ರೆಂಡ್ಸ್ ಅಸೈಗೋಳಿ ತಂಡದ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ನಾಟೆಕಲ್‌ನಿಂದ ದೇರಳಕಟ್ಟೆವರೆಗೆ ಶುಭಾಶಯದ ಬ್ಯಾನರ್‌ಗಳನ್ನು ಅಳವಡಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಸಾರ್ವಜನಿಕರಿಗೆ ಸಿಹಿ ಪಾನೀಯ ವಿತರಿಸುವುದರೊಂದಿಗೆ ಬಸ್ಸಿನೊಳಗೂ ಪ್ರಯಾಣಿಕರಿಗೆ ಪಾನೀಯ ಹಂಚಿ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು. ಹುಟ್ಟುಹಬ್ಬದ ಅಂಗವಾಗಿ ಮಧ್ಯಾಹ್ನ ಬೆಳ್ಳಸೇವಾಶ್ರಮದಲ್ಲಿ ಹಿರಿಯ ನಾಗರಿಕರು ಹಾಗೂ ಆಶ್ರಮವಾಸಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.

ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಹಸಿದವರಿಗೆ ಅನ್ನ ನೀಡುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉದಯ್ ಅಂಚನ್ ಕಲ್ಕಟ್ಟ “ದೇರಳಕಟ್ಟೆಯಿಂದ ನಾಟೆಕಲ್‌ವರೆಗೆ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಅಬ್ದುಲ್ ಅಝೀಝ್ ಅವರ ಹುಟ್ಟುಹಬ್ಬ ಆಚರಿಸುತ್ತಿರುವುದು ಸಂತಸದ ಸಂಗತಿ. ನಮ್ಮ ನಡುವೆ ಸೌಹಾರ್ದತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಆಚರಣೆಯೇ ಸಾಕ್ಷಿ. ಮಂಗಳೂರು ಹಿಂದಿನಂತೆಯೇ ಸರ್ವಧರ್ಮಗಳ ಜನರು ಪ್ರೀತಿ, ವಿಶ್ವಾಸದಿಂದ ಬದುಕುವ ನೆಲೆಯಾಗಬೇಕು. ಎಲ್ಲ ಧರ್ಮದ ಹಬ್ಬಗಳಿಗೂ ಪರಸ್ಪರರ ಮನೆಗಳಿಗೆ ತೆರಳಿ ಸಂಭ್ರಮಿಸುವ ವಾತಾವರಣ ಮತ್ತೆ ನಿರ್ಮಾಣವಾಗಬೇಕು” ಎಂದರು.

ಗಣೇಶ್‌ ಅಸೈಗೋಳಿ ಮಾತನಾಡಿ, “ಅಬ್ದುಲ್ ಅಝೀಝ್ ಅವರು ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಾಯಿ ಫ್ರೆಂಡ್ಸ್ ಮತ್ತು ಓಂ ಫ್ರೆಂಡ್ಸ್ ತಂಡಗಳ ಮೂಲಕ ಕೊರೊನಾ ಸಂಕಷ್ಟದ ಸಂದರ್ಭದಲ್ಲೂ, ಹಬ್ಬಹರಿದಿನಗಳ ಸಂದರ್ಭದಲ್ಲೂ ಬಡ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ. ವರ್ಷದಲ್ಲಿ ಹಲವು ಬಾರಿ ಅಗತ್ಯ ವಸ್ತುಗಳನ್ನು ಮನೆಗಳಿಗೆ ತಲುಪಿಸುವ ಸೇವಾಕಾರ್ಯ ನಡೆಯುತ್ತಿದೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಬೆಂಬಲ ನೀಡುವ ಅಬ್ದುಲ್ ಅಝೀಝ್ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ” ಎಂದು ಹೇಳಿದರು.

ನಿವೃತ್ತ ಮುಖ್ಯೋಪಾಧ್ಯಾಯ ಆನಂದ್ ಕೆ. ಅಸೈಗೋಳಿ ಮಾತನಾಡಿ, “ಅಬ್ದುಲ್ ಅಝೀಝ್ ಅವರು ಹುಟ್ಟುವಾಗಲೇ ಬಂಗಾರದ ಚಮಚ ಹಿಡಿದುಕೊಂಡು ಬಂದವರಲ್ಲ. ಕಷ್ಟದ ಬದುಕು ಏನೆಂಬುದನ್ನು ಅರಿತವರು. ಸಮಾಜದಲ್ಲಿ ನೊಂದವರು, ನಿರ್ಗತಿಕರು ಹಾಗೂ ವಿವಿಧ ಸಮಸ್ಯೆಗಳಿಂದ ಆಶ್ರಮ ಸೇರಿರುವ ಹಿರಿಯ ಜೀವಿಗಳಿಗೆ ಅನ್ನದಾನ ಮಾಡುವ ಮೂಲಕ ಅವರ ಹಸಿವು ನೀಗಿಸುವ ಕಾರ್ಯ ಶ್ಲಾಘನೀಯ. ಶ್ರೀಮಂತಿಕೆ ಎಂದರೆ ಆಡಂಬರ ಪ್ರದರ್ಶಿಸುವುದಲ್ಲ; ಕಷ್ಟದಲ್ಲಿರುವವರನ್ನು ಮೇಲೆತ್ತಿ, ಸಮಾಜದೊಂದಿಗೆ ಬೆರೆತು ಬದುಕುವುದಾಗಿದೆ. ಹಿರಿಯ ಜೀವಿಗಳನ್ನು ತಾಯಿಯ ಮಮತೆಯಿಂದ ಸಂತೈಸುವ ಹೃದಯವಂತಿಕೆ ಎಲ್ಲರಲ್ಲೂ ಇರುವುದಿಲ್ಲ. ಅಂತಹ ಮಾತೃ ಹೃದಯ ಅಬ್ದುಲ್ ಅಝೀಝ್ ಅವರಲ್ಲಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಉದ್ಯಮ ನಡೆಸುತ್ತಾ ಬೆಳೆದಿರುವ ಅಬ್ದುಲ್ ಅಝೀಝ್ ಅವರು ಎಲ್ಲರೊಂದಿಗೆ ಬೆರೆಯುವ ಸ್ವಭಾವದವರು. ‘ತನ್ನ ಧರ್ಮವನ್ನು ಪ್ರೀತಿಸು, ಇತರ ಧರ್ಮಗಳನ್ನು ಗೌರವಿಸು’ ಎಂಬ ಉದಾತ್ತ ಆಶಯದೊಂದಿಗೆ ಬದುಕುತ್ತಿರುವ ಅವರು, ಧರ್ಮಗಳ ನಡುವಿನ ಪರಸ್ಪರ ಗೌರವ ಮತ್ತು ಸೌಹಾರ್ದತೆಗೆ ಆದ್ಯತೆ ನೀಡುವವರಾಗಿದ್ದಾರೆ.

ಈ ಸಂದರ್ಭದಲ್ಲಿ ಪ್ರೀತಮ್ ಕುಂಪಲ, ರವಿಶಂಕರ್, ಉದಯ್ ಅಂಚನ್ ಕಲ್ಕಟ್ಟ, ಧೀರಜ್ ಪೂಜಾರಿ, ಸುಜಿತ್ ಅಸೈಗೋಳಿ, ಮಧುರಾಜ್ ಅಸೈಗೋಳಿ, ಚೇತನ್ ಕೊಂಚಾಡಿ, ಹರೀಶ್ ಅಸೈಗೋಳಿ, ಪ್ರದೀಪ್ ಕುಮಾರ್, ಸುನಿಲ್ ರಾವ್, ಪ್ರೇಮದಾಸ್ ಕರ್ಕೇರ, ಸುನಿಲ್ ಪೂಜಾರಿ, ಉದಯ ಮಂಜನಾಡಿ, ಮನೋಜ್ ಅಸೈಗೋಳಿ ಸೇರಿದಂತೆ ಸಾಯಿ ಫ್ರೆಂಡ್ಸ್ ಹಾಗೂ ಓಂ ಫ್ರೆಂಡ್ಸ್‌ನ ಸದಸ್ಯರು ಮತ್ತು ಬಂಧುಮಿತ್ರರು ಉಪಸ್ಥಿತರಿದ್ದರು.

- Advertisement -

Related news

error: Content is protected !!