


ತಿರುವನಂತಪುರಂ: ಶಬರಿಮಲೆ ಯಾತ್ರೆ ಕೈಗೊಳ್ಳುವ ಲಕ್ಷಾಂತರ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಯಾತ್ರಿಕರು ದೇಗುಲದಿಂದಲೇ ಅರವಣ, ಅಪ್ಪಂ ಹಾಗೂ ಇತರ ಪ್ರಸಾದಗಳನ್ನು ‘ಸ್ಪೀಡ್ ಪೋಸ್ಟ್’ ಮೂಲಕ ಮನೆ ಬಾಗಿಲಿಗೆ ಕಳುಹಿಸುವ ವಿಶೇಷ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ.
ಮುಂಬರುವ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಯ ವೇಳೆ ಈ ನೂತನ ಸೌಲಭ್ಯ ಜಾರಿಗೆ ಬರಲಿದೆ. ಸಾಮಾನ್ಯವಾಗಿ ಯಾತ್ರೆಯ ವೇಳೆ ಭಕ್ತರು ಪ್ರಸಾದದ ಡಬ್ಬಿಗಳನ್ನು ತಮ್ಮೊಂದಿಗೆ ಹೊತ್ತು ತರುವುದು ಕಷ್ಟಕರವಾಗಿತ್ತು. ಈ ಹೊಸ ವ್ಯವಸ್ಥೆಯಿಂದಾಗಿ ಭಕ್ತರು ದೇವಾಲಯದಲ್ಲೇ ಕಾಣಿಕೆ ಮತ್ತು ಪ್ರಸಾದವನ್ನು ಬುಕ್ ಮಾಡಬಹುದಾಗಿದೆ.
ಯಾತ್ರಿಕರು ತಮ್ಮ ಪ್ರವಾಸ ಮುಗಿಸಿ ಮನೆಗೆ ಹಿಂತಿರುಗುವ ಹೊತ್ತಿಗೆ, ಅಂಚೆ ಇಲಾಖೆಯ ಮೂಲಕ ಪ್ರಸಾದದ ಪಾರ್ಸೆಲ್‌ಗಳು ಸುರಕ್ಷಿತವಾಗಿ ಅವರ ಮನೆ ಬಾಗಿಲಿಗೆ ತಲುಪಲಿವೆ.
ಭಕ್ತರ ಅನುಕೂಲಕ್ಕಾಗಿ ಶಬರಿಮಲೆ ದೇವಸ್ಥಾನದ ಸಂಕೀರ್ಣದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿಯ ಅರವಣ ಮತ್ತು ಅಪ್ಪಂ ವಿತರಣಾ ಕೌಂಟರ್‌ಗಳ ಪಕ್ಕದಲ್ಲೇ ಈ ವಿಶೇಷ ಪಾರ್ಸೆಲ್ ಬುಕಿಂಗ್ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಭಕ್ತರು ಪ್ರಸಾದ ಖರೀದಿಸಿದ ತಕ್ಷಣ ಅಲ್ಲೇ ವಿಳಾಸ ನೀಡಿ ಪಾರ್ಸೆಲ್ ಬುಕ್ ಮಾಡಬಹುದಾಗಿದೆ ಎಂದು ತಿಳಿದುಬಂದಿದೆ.








