Thursday, February 2, 2023
spot_imgspot_img
spot_imgspot_img

ಬಾಹ್ಯಕ್ಕೆ ನಿಲುಕದ ಸ್ವರೂಪ ಉಸಿರಲ್ಲಿದೆ – ಮಲ್ಲಿಕಾ ಜೆ ರೈ ಪುತ್ತೂರು

- Advertisement -G L Acharya G L Acharya
- Advertisement -

ಏತಚ್ಚ್ರು ತ್ವಾ ವಚನಂ ಕೇಶವಸ್ಯ
ಕೃತಾಂಜಲಿರ್ವೇಪಮಾನ: ಕಿರೀಟೀ |
ನಮಸ್ಕೃತ್ವಾ ಭೂಯ ಏವಾಹ ಕೃಷ್ಣಮ್
ಸಗದ್ಗದಂ ಭೀತಭೀತಃ ಪ್ರಣಮ್ಯ || 11- 35||

ಭಗವಾನ್ ಶ್ರೀ ಕೃಷ್ಣ ಪರಮಾತ್ಮನ ವಚನವನ್ನು ಕೇಳಿ ಅರ್ಜುನನು ಕೈಜೋಡಿಸಿ ನಡುಗುತ್ತ ನಮಸ್ಕರಿಸುತ್ತಾ ಮತ್ತೊಮ್ಮೆ ಅತ್ಯಂತ ಭಯಭೀತನಾಗಿ ಪ್ರಣಾಮ ಮಾಡಿ ಭಗವಾನ್ ಶ್ರೀ ಕೃಷ್ಣನಿಗೆ ಗದ್ಗದ ಸ್ವರದಿಂದ ಈ ರೀತಿಯಾಗಿ ಹೇಳುತ್ತಾನೆoದು ಇದರ ತಾತ್ಪರ್ಯ . ಇಲ್ಲಿ ಭಗವಂತನ ವಚನಗಳೆಂದರೆ, ಕೃಷ್ಣನ ಆ ಘೋರವಾದ ರೂಪವನ್ನು ನೋಡಿ ಅರ್ಜುನನು ಎಷ್ಟು ವ್ಯಾಕುಲನಾಗಿ ಹೋದನೆಂದರೆ – ಭಗವಂತನು ಹಲ ಪ್ರಕಾರವಾಗಿ ಆಶ್ವಾಸನೆ ಕೊಟ್ಟ ನಂತರವೂ ಅವನ ಹೆದರಿಕೆ ದೂರವಾಗಲಿಲ್ಲ. ಆದುದರಿಂದ ಅವನು ಅತೀವ ಹೆದರಿಕೆಯಿಂದ ನಡುಗುತ್ತಲೇ ಆ ರೂಪವನ್ನು ಮರೆಯಾಗಿಸುವಂತೆ ಭಗವಂತನನ್ನು ಪ್ರಾರ್ಥಿಸತೊಡಗಿದನೆಂಬ ಭಾವ ಇಲ್ಲಿ ಇದೆ. ಭಗವಂತನ ಸ್ತುತಿ ಮಾಡುವಾಗ ಏಕಾಗ್ರ ಚಿತ್ತದಿಂದ ಆಶ್ಚರ್ಯ ಮತ್ತು ಭಯ ಕೆಲವು ಸಲ ಇದ್ದೇ ಇರುತ್ತದೆ. ಆ ಕಾರಣದಿಂದ ಹೃದಯವು ಕರಗಿ ಕಣ್ಣುಗಳಲ್ಲಿ ನೀರು ಬರುವುದುoಟು . ಕೆಲವೊಮ್ಮೆ ಕಂಠ ಬಿಗಿದುಕೊಂಡು ಮಾತು ಗದ್ಗದಿತವಾಗುತ್ತದೆ.

ಆಗಲೆಲ್ಲ ಮೌನ ಕೆಲವೊಮ್ಮೆ ಹಲವು ಸಾಧನೆಗಳ ಮೂಲವಾಗುತ್ತದೆ. ಬರಿದೇ ಮಾತಾಡುವುದರಿಂದ ಕಾರ್ಯ ಸ್ಥಗಿತಗೊಳ್ಳುತ್ತವೆ. ದೃಷ್ಟಿ ಬೇರೆಡೆಗೆ ಸಾಗುತ್ತದೆ. ಆಲೋಚನೆಗಳು ತಮ್ಮದೇ ಸ್ವರಾಜ್ಯ ಎಂಬಂತೆ ಮುಂದೆ ಮುಂದೆಸಾಗುತ್ತಾ ಕುರಿ ಮಂದೆಯoತೆ ಅನಿಸುತ್ತದೆ. ಭಾವನೆಗಳು ಅಸಮಂಜಸವೆನಿಸುವುದು ಮಾಡಿದ ಕಾರ್ಯ ಕೆಲವೊಮ್ಮೆ ನೋವು ಕೊಡುವಂತಾದಾಗ ಮಾತ್ರ.

ಯಾಕೋ ಒಮ್ಮೊಮ್ಮೆ ಯೋಚನೆಗಳೇ ಹಾಗೆ ಥಟ್ ಅಂತ ಬರುವುದೇ ತಡ ಮುನ್ನುಗ್ಗಿ ತಮ್ಮ ಒಳಿತಿನ ಕಾರ್ಯಕ್ಕೆ ಇಳಿದೇ ಬಿಡುತ್ತದೆ. ಅದು ಒಮ್ಮೊಮ್ಮೆ ಕ್ರಿಕೆಟಿನ ಆರು ಚೆಂಡುಗಳ ಎಸೆತದ ಸಿಕ್ಸರ್ ನಂತೆ ಶೋಭಾಯಮಾನವಾಗಿ ಮೇಳಯಿಸಬೇಕೆಂಬ ತುಡಿತದಲ್ಲಿರುತ್ತದೆ. ಅದಕ್ಕೆ ಮನಸ್ಸು ಬೇಕು. ಜೊತೆ ಜೊತೆಗೆ ಬುದ್ಧಿ ಚುರುಕಾಗಿರಬೇಕು. ಭಾವನೆಗಳ ಏರಿಳಿತಗಳು ಹದ ತಪ್ಪದಂತೆ ಸ್ವಾಧೀನದಲ್ಲಿರಬೇಕು. ಒಂದು ನಿರ್ಧಾರ ಕೈಗೊಳ್ಳುವ ಮೊದಲು ನೂರು ಬಾರಿ ಯೋಚಿಸಬೇಕು. ಹಾಗೆಂದು ಸಣ್ಣಪುಟ್ಟ ಕಾರ್ಯಗಳಿಗೆ ಯೋಚಿಸುತ್ತಾ ಕುಳಿತರೆ ಸಮಯ ಮೀರಿ ಹೋಗಿರುತ್ತದೆ. ಜೊತೆಗೆ ಕಾರ್ಯಗಳು ಸಿಗದಂತೆ ಆಗಿರುತ್ತದೆ. ಕಳೆದು ಹೋದ ಸಮಯ ಎಂದಿಗೂ ಹಿಂದೆ ಬರುವಂತಹದಲ್ಲ. ಆದರೆ ಈಗ ಇರುವ ಸಮಯವನ್ನು ಉಪಯೋಗಿಸಬೇಕಲ್ಲ. ಒಳ ಮನಸ್ಸು ಯಾವಾಗಲೂ ಹುಡುಕಾಟದಲ್ಲಿಯೇ ತಲ್ಲೀನವಾಗಿರುತ್ತದೆ. ಮನಸ್ಸಿನ ಪ್ರಬುದ್ಧತೆಗೆ ಯೋಚಿಸತೊಡಗುತ್ತದೆ.

ನೀರು ಕಂಡಾಕ್ಷಣ ಪುಟ್ಟಪುಟ್ಟ ಮಕ್ಕಳು ಚಳಕ್ ಪಳಕ್ ಎಂದು ಕೈತಟ್ಟಿಯೋ ಇಲ್ಲವೇ ಕಾಲು ತಟ್ಟಿಯೋ ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಾರೆ. ಆಗಲೇ ಬ್ರಹ್ಮನು ಸೃಷ್ಟಿ ಕಾರ್ಯವನ್ನು ಅತ್ಯುತ್ಸಾಹದಿಂದ ಮಾಡಿದನೋ ಏನೋ ಎಂಬ ಒಳನುಡಿ ಚಿಂತನೆಯಲ್ಲೇ ಮೈಮರೆಯುವಂತಾಗುತ್ತದೆ. ಒಂದು ನಗು ಅಥವಾ ಉತ್ಸಾಹವು ಎಲ್ಲರ ಆರೋಗ್ಯಕ್ಕೆ ಮದ್ದು ಆಗಿರುತ್ತದೆ. ದುಡಿತದ ಪರಿಶ್ರಮವನ್ನು ಆ ಮುದ್ದು ಮಗುವಿನಂತೆ ಅನುಭವಿಸಿ ನೋಡಲು ಪ್ರಯತ್ನಿಸಬೇಕು. ಯಾವುದೇ ಕಪಟವಿಲ್ಲದೆ ದೇವರಂತೆ ಕಾಣುವ ಮಗು ಬರ ಬರುತ್ತಾ ತನ್ನೊಳಗೆ ಚಿಂತನೆಗಳನ್ನು ಬರಮಾಡಿಕೊಳ್ಳುವ ಮೂಲಕ ಮಾನವನಾಗುವ ಕಾರ್ಯಕ್ಕೆ ಹೆಜ್ಜೆ ಇಡುತ್ತದೆ. ಬೀಳುವುದು ಬಿದ್ದಲ್ಲಿಂದ ಏಳುವುದು ಅದರ ಸ್ವಭಾವ. ಆದರೆ ಬಿದ್ದುದನ್ನೇ ನೆವನ ಮಾಡಿಕೊಂಡು ಅಳುವ ಮಗು ಈ ಪ್ರಕೃತಿಯಲ್ಲಿ ಅವೆಷ್ಟೋ ಇವೆ. ಯಾರೋ ಮುನ್ನಡೆಸಲು ಅಥವಾ ಎಬ್ಬಿಸಲು ಬಾರದೇ ಇದ್ದಾಗ ತಾನೇ ಆಚೆ ಈಚೆ ನೋಡಿ ಪ್ರಯತ್ನಿಸುತ್ತದೆ. ಪ್ರಯತ್ನ ಎಂಬುದು ಅಲ್ಲಿಂದಲೇ ಹೆಜ್ಜೆಯೂರುತ್ತದೆ. ತನ್ನ ಪ್ರಯತ್ನದಿಂದಲೇ ಎದ್ದು ಬರುವಂತಾದಾಗ ಆ ಗೆಲುವಿನ ಮೊಗದ ನೋಟ ಇನ್ನಷ್ಟು ಅಪ್ಯಾಯಮಾನವಾಗುತ್ತದೆ.

ಇತ್ತೀಚಿನ ದಿನಮಾನಗಳಲ್ಲಿ ಕಡಿಮೆಗೊಂಡ ಮಾನವೀಯತೆಯನ್ನು ಮತ್ತೆ ಬೆಳೆಸಬೇಕಾಗಿದೆ. ಕಷ್ಟವೆಂಬುದು ಈಗ ಇಲ್ಲವೇ ಇಲ್ಲ. ಎಲ್ಲೆಲ್ಲೂ ಯಾವುದೇ ಕಾರ್ಯವಾದರೂ ಸರಿ ಯಂತ್ರಗಳು ಬಂದು ತಂಟೆ ತಕರಾರು ಇಲ್ಲದೇ ಮುಗಿಸಿಬಿಡುತ್ತವೆ. ಹಣ ಸುರಿದರೆ ಆಯಿತು. ಭೂಮಿಗೆ ಇಲ್ಲದ ಬೆಲೆ ಈ ದುಡ್ಡಿಗೆ ಇದೆ. ಭೂಮಿಯನ್ನು ತುಳಿಯುತ್ತೇವೆ, ಅಗೆಯುತ್ತೇವೆ ಮತ್ತು ಕೊರೆಯುತ್ತೇವೆ. ಕಸ ಬಿಸಾಡಿ ಚಿಂದಿ ಚಿತ್ರಾನ್ನ ಮಾಡುತ್ತೇವೆ. ಆದರೆ ದುಡ್ಡು ಅದನ್ನು ಜೋಪಾನವಾಗಿಡುತ್ತೇವೆ. ಕೆಳಗೆ ಬಿದ್ದರೆ ನೋವಾಗದ ರೀತಿಯಲ್ಲಿ ಮೇಲಕ್ಕೆ ಎತ್ತುತ್ತೇವೆ.
ಆ ದುಡ್ಡಿಗೋಸ್ಕರ ನಕ್ಕು ನಲಿಯಲು ಪ್ರೇರೇಪಿಸುವ ಈ ಭೂಮಿಯನ್ನು ಪಣವಾಗಿಡುತ್ತೇವೆ. ಹಿಂದೆ ಪಾಂಡವರು ಪಗಡೆಯಾಡಿ ಇಡೀ ರಾಜ್ಯವನ್ನು ಕಳೆದುಕೊಂಡುದು ಇಂತಹ ಆಸೆಗಳಿಂದ ಎಂದು ಅರಿತಿದ್ದರೂ ಅಂತಹ ಪಗಡೆಯಾಟ ಕ್ಷಣಕ್ಷಣವು ಮನಸ್ಸಿನೊಳಗೆ ಹುದುಗಿ ಇನ್ನಿಲ್ಲದ ಕ್ರೌರ್ಯಗಳನ್ನು ಮಾಡುತ್ತಿದೆ. ಜೀವನದ ರೀತಿ ನೀತಿ ಅರಿತುಕೊಂಡು ಬಾಳುವೆ ನಡೆಸಬೇಕಾಗಿದೆ. ಪರಮಾತ್ಮ ಎಲ್ಲರ ಒಳಗೂ ಇದ್ದಾನೆ. ಧರ್ಮ, ರೀತಿ, ನೀತಿ ಬೇರೆಯಾಗಿದ್ದರೂ ಅದಕ್ಕೆ ಚ್ಯುತಿ ಬರದಂತೆ ಆಚರಿಸಲು ಮನವು ಸಿದ್ಧವಾಗಬೇಕಿದೆ.

ಎಳೆಯ ಮನಸ್ಸುಗಳು ಬಾಹ್ಯ ಮೋಹಕ್ಕೆ ಒಳಗಾಗಿ ಮೋಸಕ್ಕೆ ಸಿಲುಕುವುದುಂಟು. ಎಳೆಯ ವಯಸ್ಸಿನಲ್ಲಿ ತಮ್ಮ ಜ್ಞಾನವನ್ನು ವಿಕಸಿಸುವುದರ ಕಡೆಗೆ ಗಮನ ನೀಡಬೇಕೇ ಹೊರತು ಬೇರೆ ಕೀಳು ಕಾರ್ಯಗಳನ್ನು ಮಾಡಲು ಎಂದೂ ಪ್ರಚೋದಿಸಬಾರದು. ಬದುಕು ದೇವರು ಕೊಟ್ಟದ್ದು. ಅದನ್ನು ಯಾವುದೇ ಮೋಸ ಅಪ ನಂಬಿಕೆಗಳಿಂದ ಚೆಲ್ಲಾಟ ಮಾಡಿಸಿಕೊಳ್ಳಬಾರದು. ಅವರವರ ಬೆನ್ನು ಅವರವರಿಗೆ ಪೂರ್ತಿಯಾಗಿ ಕಾಣುವುದಿಲ್ಲ. ಹಾಗಾಗಿ ಅರಿವಿನ ಆಳವನ್ನು ಕಾಣುವ ಪ್ರಯತ್ನಕ್ಕೆ ಸದಾ ಸಿದ್ಧವಾಗಬೇಕೇ ಹೊರತು ಬಾಹ್ಯದ ಸೆಳೆತಗಳನ್ನಲ್ಲ. ಮನೋನಿಯಂತ್ರಣವೆಂಬ ಪಾಶ ನಮ್ಮೊಳಗೇ ಇದೆ. ಲೋಕದಲ್ಲಿ ಮಾನವ ಜಾತಿಯೆಂಬುದು ಇದ್ದರೂ ಗಂಡು ಹೆಣ್ಣೆಂಬ ಲಿಂಗಭೇದ ಇರುವುದು. ಮನೋ ನಿಗ್ರಹವಿದ್ದಲ್ಲಿ ಸಾಮರಸ್ಯಕ್ಕೆ ಎಂದೂ ತೊಡಕಾಗದು. ದೈಹಿಕ ಆಕರ್ಷಣೆಗೆ ಒಳಗಾಗಿ ಜೀವನವನ್ನು ದುರಂತದೆಡೆಗೆ ಕೊಂಡೊಯ್ಯದೇ ಆತ್ಮನಿಗ್ರಹವೆಂಬ ಚೈತನ್ಯದೆಡೆಗೆ ಸಾಗುವ ಪ್ರಯತ್ನ ಆಗಬೇಕಾಗಿದೆ.

ಮನುಜರು ಆತ್ಮ ಪರಮಾತ್ಮ ತತ್ವ ಉಳ್ಳವರು. ಪಂಚೇಂದ್ರಿಯಗಳ ಆಕರ್ಷಣೆಯಿಂದ ಮಾಡಬಾರದುದನ್ನು ಮಾಡಲು ಉತ್ಸುಕರಾಗಿರುವುದು ಅಪಾಯದ ಲಕ್ಷಣವೇ ಹೌದು. ಮಾನವನ ಧಾರ್ಮಿಕ ಭಾವನೆಗಳನ್ನು ಎಂದು ಗೌರವದಿಂದ ಕಾಣುತ್ತೇವೋ ಅಂದು ರಾಮರಾಜ್ಯ ಕಾಣಲು ಸಾಧ್ಯ. ಹಾಗಾಗಿ ಪುಟ್ಟ ಮಕ್ಕಳಿಗೆ ಸುಜ್ಞಾನ ನೀತಿಯನ್ನು ಕಲಿಸಬೇಕಾಗಿದೆ. ನಮ್ಮ ತಾಯಿಯನ್ನು ಹೇಗೆ ಗೌರವದಿಂದ ಕಾಣುತ್ತೇವೋ ಅದೇ ಗೌರವ ಭಾವ ಪ್ರತಿಯೊಬ್ಬರಿಗೂ ನೀಡಬೇಕಾಗಿದೆ. ಅಣ್ಣ, ಅಕ್ಕ ಎಂಬ ಸಂಬೋಧನೆ ಕಳಶಪ್ರಾಯವಾಗಿದೆ. ಶುದ್ಧಾಚಾರ, ಸರಳತೆಗೆ ಬದ್ಧರಾಗಬೇಕಿದೆ. ನಡೆಯಂತೆ ನುಡಿಯಿರಬೇಕೆಂದಾದರೆ, ನುಡಿಯಂತೆಯೇ ನಡೆಯೂ ಇರಬೇಕು. ಅನ್ಯಾಯ ಮಾಡಿ ಕೊರಗುವುದಕ್ಕಿಂತ, ನ್ಯಾಯದಿಂದ ಜೀವಿಸಿ ಆತ್ಮತೃಪ್ತಿಪಟ್ಟುಕೊಳ್ಳಬೇಕಾದ ತೀವ್ರತೆಯಿದೆ . ಬೇಕುಗಳ ಪಟ್ಟಿಯನ್ನು ಕಡಿಮೆ ಮಾಡಿ ಆತ್ಮನ ಪ್ರೇರಣೆಯತ್ತ ಮುಖ ಮಾಡಿ ಆತ್ಮೋನ್ನತಿ ಹೊಂದಬೇಕಾಗಿದೆ.

ತಿಳಿದೂ ತಿಳಿದು ತಪ್ಪನ್ನು ಯಾವತ್ತೂ ಮಾಡಲು ಹೋಗಬಾರದು. ಕೆಲವೊಮ್ಮೆ ಮಾಡಿದ ತಪ್ಪು ತಿಳಿದಿದ್ದರೂ ಅದರಿಂದ ತಪ್ಪಿಸಿಕೊಳ್ಳುವ ಅನೇಕ ಸಂದರ್ಭಗಳು ಇವೆ. ಆದರೆ ಭಗವಂತ ದಯಾಮಯ. ಆತನಿಗೆ ಎಲ್ಲರ ಮೇಲಿನ ಹಕ್ಕು ಪತ್ರಗಳು ಏಕರೂಪವೇ ಆಗಿರುವುದು. ಭೂಮಿಯಲ್ಲಿ ಜನರು ಬಾಹ್ಯ ರೂಪದಲ್ಲಿ ಏಕರೂಪವೇ ಅಲ್ಲ ಅಷ್ಟೇ ಏಕೆ ಅಂತಸ್ತಿನಲ್ಲೂ ಸಾಮ್ಯತೆ ಇರುವುದಿಲ್ಲ. ಆದರೆ ಅಂತರ್ಯಾಮಿ ಭಾವದಲ್ಲಿ ಸೂಕ್ತ ಚೇತನವಾಗಿ ಹರಿಯುವಿಕೆಗೆ ನಾವೆಷ್ಟು ಬದ್ಧರಾಗಿದ್ದೇವೆ ಎಂಬುದು ಬಹು ಮುಖ್ಯವಾಗುತ್ತದೆ. ಭಗವಂತನು ಬಡತನ ಎಂದೂ ಕೊಡುವುದಿಲ್ಲ. ಮನಸ್ಸಿನೊಳಗಡೆ ಬಡತನ ಸಿರಿತನವೆಂಬುದು ಇಲ್ಲವೇ ಇಲ್ಲ. ಅಲ್ಲಿ ಭಕ್ತಿಯೇ ಮುಖ್ಯ ಹೊರತು ಬಾಹ್ಯಾಲಂಕಾರಗಳಲ್ಲ. ಉಸಿರು ಉಸಿರಿಗೂ ಮುನ್ನ ಹರಿನಾಮ ಸೂಕ್ತವೇ ಆಗಿರುವುದು. ಗಮನವಿಟ್ಟು ಉಸಿರಿನ ಕ್ರಿಯೆಗೆ ತೊಡಗಿದಾಗ ಭಗವಂತನ ಆಗಮನವಾಗಿ ಒಳಗೊಳಗೇ ಆವಿರ್ಭವಿಸುತ್ತಿರುತ್ತಾನೆ. ಅದನ್ನು ಹೊರಗಡೆ ಎಲ್ಲಿಯೂ ಯಾವುದೇ ರೀತಿಯಲ್ಲೂ ಪಡಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಭಗವಂತನ ವಿರಾಟ್ ವಿಶ್ವರೂಪಸಂದರ್ಶನವಾಗುವ ಮೊದಲು ಮನುಜ ಎಚ್ಚೆತ್ತುಕೊಂಡರೆ ಒಳಿತು.

✍️ಮಲ್ಲಿಕಾ ಜೆ ರೈ ಪುತ್ತೂರು
ಅಂಕಣಗಾರರು, ಕವಯಿತ್ರಿ.
ಮುಕ್ರಂಪಾಡಿ ದರ್ಬೆ ಅಂಚೆ
574202

- Advertisement -

Related news

error: Content is protected !!