

ಬೆಂಗಳೂರು: ಪ್ರೀತಿ ನಿರಾಕರಿಸಿದ್ದ ಕಾರಣಕ್ಕೆ ಯುವತಿಯ ಮೇಲೆ ಆಸಿಡ್ ದಾಳಿ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ಮತ್ತು ಇಡೀ ರಾಜ್ಯದ ಮನಕಲಕುವಂತೆ ಮಾಡಿದ ಆಸಿಡ್ ದಾಳಿ ಪ್ರಕರಣದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಪ್ರೀತಿಸಲು ಒಪ್ಪಲಿಲ್ಲ ಎಂಬ ಒಂದೇ ಕಾರಣಕ್ಕೆ ಮುಖಕ್ಕೆ ಆಸಿಡ್ ಎರಚಿ ತಲೆಮರೆಸಿಕೊಂಡಿದ್ದ ನಾಗೇಶ್‌ನನ್ನು ಪೊಲೀಸರು ತಮಿಳುನಾಡಿನಲ್ಲಿ ಇಂದು ಬಂಧಿಸಿದ್ದಾರೆ.


ಕೃತ್ಯ ನಡೆಸಿದ ತಕ್ಷಣ ಬೆಂಗಳೂರಿಂದ ಕಾಲು ಕಿತ್ತಿದ್ದ ನಾಗೇಶ್ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸ್ವಾಮೀಜಿಯ ವೇಶ ಧರಿಸಿಕೊಂಡಿದ್ದ. ಪೊಲೀಸರಿಗೆ ತಮಿಳುನಾಡಿನಲ್ಲಿ ಈತ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆದರೆ ಆತ ಕಾವಿಧಾರಿಯ ರೂಪದಲ್ಲಿ ಇದ್ದಾನೆ ಎಂಬ ಮಾಹಿತಿ ಇರಲಿಲ್ಲ. ಆದರೆ ಅಲ್ಲಿನ ಸ್ಥಳೀಯರಿಗೆ ನಾಗೇಶ್ ಹಾವಭಾವಗಳು ಮತ್ತು ಚಲನವಲನಗಳನ್ನು ನೋಡಿ ಸಂಶಯ ಬಂದಿತ್ತು. ಕರ್ನಾಟಕ ಪೊಲೀಸರು ಹೋದಾಗ, ಸ್ಥಳೀಯರು ಮಾಹಿತಿ ನೀಡಿದರು. ಮಾಹಿತಿ ಬೆನ್ನು ಹತ್ತಿದ ಪೊಲೀಸರು ನಾಗೇಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
