ಈಗ ತ್ವಚೆ ಆರೈಕೆಗೆ ಸೆರಮ್ ಥೆರಪಿ ತುಂಬಾನೇ ಜನಪ್ರಿಯತೆ ಗಳಿಸುತ್ತಿದೆ. ದೊಡ್ಡ-ದೊಡ್ಡ ಸೆಲೆಬ್ರಿಟಿಗಳು ಸೆರಮ್ ಥೆರಪಿ ಮಾಡಿಸುತ್ತಿದ್ದಾರೆ. ಸೆರಮ್ ಥೆರಪಿಯ ಪ್ರಮುಖ ಪ್ರಯೋಜನವೆಂದರೆ ಇದು ತ್ವಚೆಯ ಆರೋಗ್ಯ ವೃದ್ಧಿಸಿ ನಮ್ಮ ಸೌಂದರ್ಯ ಮಾಸದಂತೆ ರಕ್ಷಣೆ ಮಾಡುತ್ತದೆ. ಅಲ್ಲದೆ ಇದರಿಂದ ಅಡ್ಡಪರಿಣಾಮವಿಲ್ಲದ ಕಾರಣ ಹೆಚ್ಚಿನವರು ತಮ್ಮ ಸೌಂದರ್ಯ ರಕ್ಷಣೆಗೆ ಸೆರಮ್ ಥೆರಪಿ ಮೊರೆ ಹೋಗುತ್ತಿದ್ದಾರೆ.
ಸೆರಮ್ ಥೆರಪಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳನ್ನು ಸೇರಿಸುವುದರಿಂದ ಇದರ ಫಲಿತಾಂಶ ನಿಮ್ಮ ಮುಖದ ಕಾಂತಿ ಮೂಲಕ ಕಾಣಬಹುದಾಗಿದೆ. ತ್ವಚೆ ಆರೈಕೆಗೆ ವಿಟಮಿನ್ ಸಿ, ವಿಟಮಿನ್ ಇ, ಫೆರುಲಿಕ್ ಆಮ್ಲ, ಗ್ರೀನ್ ಟೀಯಿಂದ ಪ್ರತ್ಯೇಕಿಸಿದ ಪಾಲಿಫೀನೋಲ್ಸ್, ರೆಸ್ವೆರಾಟ್ರೋಲ್, ರೆಟಿನಾಲ್ ಮತ್ತು ನಿಯಾಸಿನಾಮೈಡ್ ಹೀಗೆ ಅನೇಕ ಬಗೆಯ ಆ್ಯಂಟಿಆಕ್ಸಿಡೆಂಟ್‌ಗಳನ್ನು ಸೇರಿಸಲಾಗುವುದು. ಅದರಲ್ಲಿ ವಿಟಮಿನ್ ಸಿ ಹೆಚ್ಚಾಗಿ ಸೇರಿಸಲಾಗುವುದು.
ವಿಟಮಿನ್ ಸಿ ಇರುವ ಸೆರಮ್ ಬಳಸುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ನಮ್ಮ ತ್ವಚೆಗೆ ವಿಟಮಿನ್ ಸಿ ಅವಶ್ಯಕವಾಗಿದೆ. ಆಗ ಮಾತ್ರ ಅದು ಕೂಡ ಆರೋಗ್ಯವಾಗಿರುತ್ತೆ, ಇಲ್ಲದಿದ್ದರೆ ಮುಖದಲ್ಲಿ ಕಲೆ, ಬ್ಲ್ಯಾಕ್ ಹೆಡ್ಸ್ ಈ ಬಗೆಯ ಸಮಸ್ಯೆ ಹೆಚ್ಚುವುದು, ಮುಖದ ಕಾಂತಿ ಮಂಕಾಗುವುದು. ಇನ್ನು ಹೊರಗಡೆ ಹೆಚ್ಚು ಓಡಾಡುತ್ತಿದ್ದರೆ ಸನ್‌ಟ್ಯಾನ್ ಉಂಟಾಗಿರುತ್ತದೆ. ತ್ವಚೆಯ ಆರೈಕೆ ಮಾಡದಿದ್ದರೆ ಬೇಗನೆ ಅಕಾಲಿಕ ನೆರಿಗೆ ಉಂಟಾಗುವುದು, ಪಿಗ್ಮೆಂಟೇಷನ್ ಸಮಸ್ಯೆ ಕಾಣಿಸುವುದು. ಇನ್ನು ಸೂರ್ಯನ ಉರಿ ಬಿಸಿಲು ಮೈ ಮೇಲೆ ಬಿದ್ದಾಗ ಅದರ ನೇರಳಾತೀತ ಕಿರಣಗಳು ಚರ್ಮಕ್ಕೆ ತಾಗಿದರೆ ತ್ವಚೆ ಕ್ಯಾನ್ಸರ್ ಬರಬಹುದು. ಇವೆಲ್ಲದರಿಂದ ತ್ವಚೆ ರಕ್ಷಣೆ ಮಾಡುವಲ್ಲಿ ವಿಟಮಿನ್ ಸಿ ಆ್ಯಂಟಿ ಆಕ್ಸಿಡೆಂಟ್ ಇರುವ ಸೆರಮ್ ಪ್ರಯೋಜನಕಾರಿಯಾಗಿದೆ
ವಿಟಮಿನ್ ಸಿ ಸೆರಮ್ ಬಳಸುವುದರಿಂದ ತ್ವಚೆಗೆ ದೊರೆಯುವ ಪ್ರಯೋಜನಗಳು
ಕೊಲೆಜಿನ್ ಉತ್ಪತ್ತಿ ಹೆಚ್ಚಿಸುತ್ತೆ
ಕೊಲೆಜಿನ್ ಉತ್ಪತ್ತಿ ಕಡಿಮೆಯಾದರೆ ತ್ವಚೆ ಸಡಿಲವಾಗಿ ನೆರಿಗೆಗಳು ಬೀಳುವುದು. ಕೊಲೆಜಿನ್ ಉತ್ಪತ್ತಿ ಚೆನ್ನಾಗಿದ್ದರೆ ತ್ವಚೆಯನ್ನು ಬಿಗಿಯಾಗಿ ಇಡುತ್ತೆ, ಇದರಿಂದ ಯೌವನ ಕಳೆ ವಯಸ್ಸು 40 ದಾಟಿದರೂ ಮಾಸುವುದಿಲ್ಲ.
ಹೈಪರ್ ಪಿಗ್ಮೆಂಟೇಷನ್ ಕಡಿಮೆ ಮಾಡುತ್ತೆ
ಹೈಪರ್ ಪಿಗ್ಮೆಂಟೇಷನ್ ತಡೆಯುವಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಅವಶ್ಯಕ. ಇದು ಹೈಪರ್ ಪಿಗ್ಮೆಂಟೇಷನ್ ಸಮಸ್ಯೆ ಕಡಿಮೆ ಮಾಡುವುದು ಮಾತ್ರವಲ್ಲ, ಕಲೆಯನ್ನು ಹೋಗಲಾಡಿಸುತ್ತೆ, ತ್ವಚೆ ಕಾಂತಿ ಹೆಚ್ಚುವುದು.
ಮೊಡವೆ, ಕಲೆಗಳನ್ನೂ ಹೋಗಲಾಡಿಸುತ್ತೆ
ಮುಖದಲ್ಲಿ ಮೊಡವೆಗಳ ಬಂದರೆ ಎದುರಾಗುವ ಪ್ರಮುಖ ಸಮಸ್ಯೆಯಂದರೆ ಕಲೆಗಳು ಬೀಳುವುದು, ಮುಖದಲ್ಲಿ ರಂಧ್ರಗಳು ಬೀಳುವುದು. ವಿಟಮಿನ್ ಸಿ ಮತ್ತು ವಿಟಮಿನ್ ಇ ಆ್ಯಂಟಿಆಕ್ಸಿಡೆಂಟ್ ಮೊಡವೆ ಕಡಿಮೆ ಮಾಡುತ್ತೆ, ಕಲೆಗಳನ್ನು ತಡೆಗಟ್ಟುತ್ತೆ, ತ್ವಚೆಯನ್ನು ಬಿಗಿಯಾಗಿ ರಂಧ್ರಗಳನ್ನು ಮರೆ ಮಾಚುತ್ತೆ.
ವಿಟಮಿನ್ ಸಿ + ವಿಟಮಿನ್ ಇ = ಹೆಚ್ಚಿನ ಪ್ರಯೋಜನ
ಈ ಎರಡು ಕಾಂಬಿನೇಷನ್ ತ್ವಚೆ ಮೇಲೆ ತುಂಬಾನೇ ಪ್ರಭಾವ ಬೀರುತ್ತೆ. ವಿಟಮಿನ್ ಸಿ ನೀರಿನಂಶವಾದರೆ ವಿಟಮಿನ್ ಇ ಎಣ್ಣೆಯಂಶ, ಇವೆರಡು ಸೇರಿದರೆ ತ್ವಚೆ ಮೇಲೆ ಮ್ಯಾಜಿಕ್ ಮಾಡುತ್ತೆ. ಇವುಗಳನ್ನು ಬಳಸುವುದರಿಂದ ತ್ವಚೆ ತುಂಬಾ ಮೃದುವಾಗುವುದು,ಕಲೆ ರಹಿತವಾಗುವುದು, ಮೊಡವೆ ಸಮಸ್ಯೆ ದೂರಾಗುವುದು. ಇವುಗಳನ್ನು ಬಳಸಿದರೆ ಯಾವ ಫೇಶಿಯಲ್ ಬೇಕಾಗಿಲ್ಲ ತ್ವಚೆ ಫಳ-ಫಳ ಅಂತ ಹೊಳೆಯುವುದು ನೋಡಿ.