Monday, July 7, 2025
spot_imgspot_img
spot_imgspot_img

ವಿಟ್ಲ: ಕಾಮಗಾರಿ ಉದ್ಘಾಟನೆಗೆ ಬಂದಿದ್ದ ಶಾಸಕರ ಮುಂದೆಯೇ ಮಾತಿನ ಚಕಮಕಿ; ವೀಡಿಯೋ ವೈರಲ್

- Advertisement -
- Advertisement -

ವಿಟ್ಲ: ರಸ್ತೆ ಕಾಮಗಾರಿ ನಡೆಯದ ಬಗ್ಗೆ ಆಕ್ರೋಶಗೊಂಡ ಬಿಜೆಪಿ ಸ್ವಪಕ್ಷದ ಕಾರ್ಯಕರ್ತರು ಸೇತುವೆ ಉದ್ಘಾಟನೆಗೆ ಆಗಮಿಸಿದ ಶಾಸಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದ ಹಾಗೂ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದು, ಹೊಡೆದಾಟದ ಹಂತ ತಲುಪಿದ ಘಟನೆ ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡಮಜಲು ಸೇತುವೆ ಸಮೀಪ ನಡೆದಿದೆ.

ಮಾ.1 ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರು ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಎಡಮಜಲು ಎಂಬಲ್ಲಿ ಸೇತುವೆ ನಿರ್ಮಾಣಗೊಂಡಿದ್ದು, ಅದರ ಉದ್ಘಾಟನೆ ನಿಗದಿಯಾಗಿತ್ತು. ಸೇತುವೆಯ ಮುಂದುವರೆದ ಭಾಗದ ರಸ್ತೆ ಕಾಂಕ್ರೀಟೀಕರಣಗೊಳ್ಳಬೇಕಿದ್ದು, ಈಗಾಗಲೇ 20 ಲಕ್ಷ ಅನುದಾನ ಮೀಸಲಾಗಿ, ಮಂಜೂರುಗೊಂಡಿತ್ತು. ಈ ನಡುವೆ ಈ ರಸ್ತೆ ಸಾಗುವ ಮಧ್ಯೆ ಖಾಸಗಿ ವ್ಯಕ್ತಿಯೋರ್ವರ ಜಮೀನು ಇದ್ದು, ತನ್ನ ಜಾಗದ ಮೂಲಕ ರಸ್ತೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ದೈವಸ್ಥಾನದವರೆಗೆ ರಸ್ತೆ ನಿರ್ಮಾಣ ಮಾಡಿದ ಬಳಿಕವೇ ಸೇತುವೆ ಉದ್ಘಾಟಿಸುವಂತೆ ಒತ್ತಾಯಿಸಿದ್ದು, ಇದೇ ವೇಳೆ ಎರಡೂ ಬಣದ ಬಿಜೆಪಿ ಕಾರ್ಯಕರ್ತರ ನಡುವೆ ಶಾಸಕರ ಎದುರೇ ಮಾತಿಗೆ ಮಾತು ಬೆಳೆದು ಹೊಡೆದಾಟದ ಹಂತ ತಲುಪಿತ್ತು.

ಮಧ್ಯಪ್ರವೇಶಿಸಿದ ಶಾಸಕರು ಎರಡೂ ಕಡೆಯವರನ್ನು ಸಮಾಧಾನಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಮುಖಂಡರಿಗೆ ಸೂಚನೆ ನೀಡಿದ್ದು, ಬಳಿಕ ಸೇತುವೆ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್ ರವರು ಪ್ರತಿಕ್ರಿಯೆ ನೀಡಿ, ಸಣ್ಣ ಗೊಂದಲವಿದೆ ಅದನ್ನು ಮಾತುಕತೆಯಲ್ಲಿ ಪರಿಹರಿಸಿ, ಆ ಭಾಗದ ಅಭಿವೃದ್ಧಿ ಕಾರ್ಯಗಳನ್ನ ಮುಂದುವರೆಸುತ್ತೇವೆ. ಕಾರ್ಯಕರ್ತರಿಗೆ ಯಾವುದೇ ರೀತಿಯ ನೋವಾಗದ ರೀತಿಯಲ್ಲಿ ಗೊಂದಲವನ್ನು ಪರಿಹರಿಸುತ್ತೇವೆ ಎಂದರು.

- Advertisement -

Related news

error: Content is protected !!