

“ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹದಲ್ಲಿ ವಾಸಿಸುತ್ತದೆ ” ಸುದೃಢ ಆರೋಗ್ಯದ ನಿರ್ವಹಣೆಗೆ ಸಾಂದರ್ಭಿಕ ಆಹಾರ-ಪಾನಿಯಗಳಷ್ಟೇ ಪ್ರಾಮುಖ್ಯತೆ ವ್ಯಾಯಾಮಕ್ಕೂ ಇದೆ. ವ್ಯಾಯಾಮ ವಯೋಮಾನಕ್ಕೆ ಅನುಗುಣವಾಗಿ ವಿಭಿನ್ನತೆ ಹೊಂದಿದೆ. ಇವೆಲ್ಲವೂ ಕೆಲವರಿಗೆ ದಿನಚರಿಯಾದರೆ ಹಲವರಿಗೆ ದೇಹದ ಸಮತೋಲನಕ್ಕೆ ವೈದ್ಯರು, ಸ್ನೇಹಚಾರಿಗಳ ಸಲಹೆಯ ಮೇರೆಗೆ ನಡೆಯುತ್ತದೆ.


ಆಹಾರ ನಿಯಂತ್ರಣ ಒಂದು ರೀತಿಯ ದೇಹ ದಂಡನೆಯಾದರೆ, ವ್ಯಾಯಾಮದ ಮೂಲಕ ದೇಹಕ್ಕೆ ತ್ರಾಸು ನೀಡಿ ಬೊಜ್ಜು ಕರಗಿಸುವುದು ಅನಿವಾರ್ಯವಾಗಿ ಮಾಡಲೇ ಬೇಕಾದ ಶ್ರಮವಾಗಿಬಿಡುತ್ತದೆ. ಇದಕ್ಕಾಗಿ ಮಾಮೂಲಿ ವಾಕಿಂಗ್, ಎಕ್ಸರ್ಸೈಜ್, ಡಯಟ್, ಯೋಗ, ಪ್ರಾಣಾಯಾಮ ಗಳನ್ನು ಮಾಡಿಬಿಡುತ್ತೇವೆ. ಕೆಲವೊಮ್ಮೆ ನಿಗದಿತವಾಗಿ ನೀರು ಕುಡಿಯುವುದು, ಹಣ್ಣು ಹಂಪಲು, ಡ್ರೈಫ್ರುಟ್ಸ್, ಇತ್ಯಾದಿ ಫುಡ್ ಕಂಟ್ರೋಲ್ ಎಂಬ ನವೀನ ರೀತಿಯ ದಂಡನೆಯನ್ನು ಮಾಡುತ್ತಾರೆ. ಇಷ್ಟು ವಯೋಮಾನದವರ ವಿಷಯವಾದರೆ, ವಿದ್ಯಾರ್ಥಿಗಳ ಶಾರೀರಿಕ ಮಾನಸಿಕ ದಂಡನೆ ಬೇರೆಯೇ ರೀತಿ.

ವರ್ಷಪೂರ್ತಿ ಶಾಲೆಯೆಂಬ ದಿನಚರಿ ಮಾತ್ರ ಇದ್ದ ಎಳೆಯ ದೇಹ- ಮನಸುಗಳಿಗೆ ಬೇಸಿಗೆ ರಜೆ ನಿಜವಾಗಿಯೂ ವಿಶ್ರಾಂತ ದಿನಗಳು. ಆ ದಿನಗಳನ್ನು ಕಳೆಯುವುದು ಅಜ್ಜ -ಅಜ್ಜಿ, ನೆಂಟರಿಷ್ಟರ ಮನೆಗಳಲ್ಲಿ. ಮಾವು, ಹಲಸು, ನೇರಳೆ, ಮುರುಗಲ ಹಣ್ಣು, ಹೀಗೆ ಮರದಡಿಗಳಲ್ಲೇ ಚಿನ್ನಿಕೋಲು, ಕ್ರಿಕೆಟ್, ಕಬಡ್ಡಿ ಎನ್ನುತ್ತಾ ಅಕ್ಕ ಪಕ್ಕದ ಮನೆಮಕ್ಕಳ ಜೊತೆ ಮಣ್ಣು, ಗುಡ್ಡ, ಬೈಲು ಎಂದು ಬೆಳ್ಳಗಿನಿಂದ ರಾತ್ರಿ ವರೆಗೆ ಎಲ್ಲೋ ಸುತ್ತಾಡಿ 2 ತಿಂಗಳ ರಜೆ ಕ್ಷಣದಂತೆ ಸರಿಯುತಿದ್ದ ದಿನಗಳನ್ನು ಈಗ ಬೇಸಿಗೆ ಶಿಬಿರಗಳು ನುಂಗಿ ಹಾಕಿ ಬಿಟ್ಟಿದೆ. ವರ್ಷ ಪೂರ್ತಿ ಓದು -ಪರೀಕ್ಷೆ – ಮಾರ್ಕ್ಸ್ ಎಂದು ಶಾಲೆಯೆಂಬ ನಾಲ್ಕು ಗೋಡೆಗಳ ಮಧ್ಯೆ ಕಳೆದರೆ ಕಡಿತಗೊಂಡ ಬೇಸಿಗೆ ರಜೆ ಯಾವುದಾದರೂ ಸಭಾಭವನದೊಳಗೆ ಶಿಬಿರ ಎಂಬ ಗೋಡೆಗಳ ಮಧ್ಯೆ ನಡೆಯುತ್ತದೆ ಅಷ್ಟೇ. ಆದರೆ ವಿಠಲ ವಿದ್ಯಾವರ್ಧಕ ಸಂಘದ ವತಿಯಿಂದ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ವಾರ್ಷಿಕ ಬೇಸಿಗೆ ಶಿಬಿರ ಇದಕ್ಕಿಂತ ವಿಭಿನ್ನ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಬೇಸಿಗೆ ಶಿಬಿರ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ರೀಡಾಳುಗಳನ್ನು ಕೊಟ್ಟಿದೆ ಎನ್ನುವುದಕ್ಕೆ ಇತ್ತೀಚೆಗೆ ಮಲೇಷಿಯಾದಲ್ಲಿ ನಡೆದ ನೆಟ್ಬಾಲ್ ಪಂದ್ಯಾಟದ ಭಾರತೀಯ ತಂಡದ ಉಪನಾಯಕ ಸ್ಥಾನದಲ್ಲಿ ಮಿಂಚಿ ಏಕಲವ್ಯ ಪ್ರಶಸ್ತಿಗೆ ಭಾಜನರಾದ ನಿತಿನ್ ಪೂಜಾರಿಯವರೇ ಸಾಕ್ಷಿ. 50 ವರ್ಷಗಳ ಇತಿಹಾಸವಿರುವ ಈ ವಿದ್ಯಾಸಂಸ್ಥೆಯ ಕ್ರೀಡಾ ಪ್ರೋತ್ಸಾಹ, ಅಸಂಖ್ಯಾತ ಶ್ರೇಷ್ಟ ಕ್ರೀಡಾಳುಗಳನ್ನು ಕೊಡುವುದಕ್ಕೆ ಇಲ್ಲಿ ನಡೆಯುವ ಬೇಸಿಗೆ ಶಿಬಿರಗಳು, ಬೆಳಿಗ್ಗೆ ಮತ್ತು ಸಂಜೆಯ ತರಬೇತಿಗಳು ಕಾರಣವಾಗಿದೆ. ಅಲ್ಲದೆ ವಿಶಾಲ ಹೊರ – ಒಳ ಕ್ರೀಡಾ ಮೈದಾನಗಳು, ಅಗಲಿದ ದೈಹಿಕ ಶಿಕ್ಷಕ ದಿ. ಸುಚೇತನ್ ಜೈನ್ ರವರ ಅವಿಶ್ರಾಂತ ಶ್ರಮ ಇಲ್ಲಿಯವರೆಗಿನ ಸಾಧನೆಗೆ ಪೂರಕವಾಗಿದೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.


2022ರ ಬೇಸಿಗೆ ಶಿಬಿರವು ಫಿಟ್ನೆಸ್, ವಾಲಿಬಾಲ್ ಮತ್ತು ಶಟ್ಲ್ ಬ್ಯಾಡ್ಮಿಂಟನ್ ತರಬೇತಿ ಶಿರೋನಾಮೆಯಡಿಯಲ್ಲಿ ಪ್ರಸ್ತುತ ದೈಹಿಕ ಶಿಕ್ಷಕರಾದ ಶ್ರೀನಿವಾಸ ಗೌಡರವರ ನೇತೃತ್ವದಲ್ಲಿ ವಿಶ್ವನಾಥ್ ರಾಠೋಡ್ ಹಾಗೂ ಭಾನುಪ್ರಕಾಶ್ ರವರ ಸಹಕಾರದಲ್ಲಿ ನಡೆಯುತ್ತಿದೆ. ಶಿಬಿರವು ದಿನಾಂಕ 14.04.2022ರಂದು ಹಳೆವಿದ್ಯಾರ್ಥಿ ಹಾಗೂ ಏಕಲವ್ಯ ಪ್ರಶಸ್ತಿಗೆ ಭಾಜನರಾದ ನಿತಿನ್ ಪೂಜಾರಿಯವರಿಂದ ಉದ್ಘಾಟನೆಗೊಂಡು ಸುಮಾರು 75 ಶಿಬಿರಾರ್ಥಿಗಳನ್ನೊಳಗೊಂಡು ದಿನಾಂಕ 21.4.2022ರ ವರೆಗೆ ನಡೆಯಲಿದೆ. ದಿನಂಪ್ರತಿ 7.30ಕ್ಕೆ ಆರಂಭವಾಗಿ ಸುಮಾರು 3ಗಂಟೆಗಳ ಅವಧಿವರೆಗೂ ಸಾಮೂಹಿಕ ಫಿಟ್ನೆಸ್ ಕೌಶಲ್ಯ ತರಬೇತಿ, ಶಾರೀರಿಕ ಅಭ್ಯಾಸ, ಶಟಲ್ ಅಭ್ಯಾಸದ ಕೌಶಲ್ಯಗಳು, ವಾಲಿಬಾಲ್ ಮೂಲ ಕೌಶಲ್ಯ ತರಬೇತಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನುರಿತ ತರಬೇತುದಾರರಿಂದ ಕಬಡ್ಡಿ ತರಬೇತಿಯನ್ನು ನೀಡುವ ಯೋಜನೆಯನ್ನೊಳಗೊಂಡಿದೆ. ಯುವ ದೈಹಿಕ ಶಿಕ್ಷಕ ಶ್ರೀನಿವಾಸ ಗೌಡರವರ ಶ್ರಮಕ್ಕೆ ಪೋಷಕರಿಂದ, ಶಿಬಿರಾರ್ಥಿಗಳಿಂದ ಸಿಗುತ್ತಿರುವ ಉತ್ತಮ ಪ್ರಶಂಸೆ ಹಾಗೂ ಪ್ರೋತ್ಸಾಹ ಶ್ಲಾಘನೀಯ. ಇವರ ಶ್ರಮವು ಇನ್ನಷ್ಟು ಕ್ರೀಡಾಳುಗಳನ್ನು ಸಮಾಜಕ್ಕೆ ನೀಡಲೆಂದು ಹಾರೈಸುತ್ತೇನೆ.
ಲೇಖನ :- ಮುಕ್ತರಾಧಾಕೃಷ್ಣ ರಾಮ್ದೇವ್ ವಿಟ್ಲ.

