


ಹೆತ್ತವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ಯುವತಿಯೋರ್ವಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ.
ಅನಿತಾ ಮೃತ ಯುವತಿ, ಈಕೆ 7 ತಿಂಗಳ ಹಿಂದೆ ಹೆತ್ತವರ ವಿರೋಧದ ನಡುವೆ ಭದ್ರಾವತಿ ತಾಲೂಕಿನ ಸಂತೋಷ್‌ನನ್ನು ಪ್ರೀತಿಸಿ ಮದುವೆಯಾಗಿದ್ದರು.
ಕಳೆದ ಶುಕ್ರವಾರ ಅನಿತಾಳ ಆರೋಗ್ಯ ಹದಗೆಟ್ಟಿದೆ ಎಂದು ಸಂತೋಷ್ ಅನಿತಾರ ಹೆತ್ತವರಿಗೆ ವಿಷಯ ತಿಳಿಸಿದ್ದಾರೆ. ಆನಂತರ ಅನಿತಾರ ಪೋಷಕರು ಶಿವು ಎಂಬವರನ್ನ ಸಂತೋಷ್ ಮನೆಗೆ ಕಳುಹಿಸಿ ವಿಚಾರಿಸುವಂತೆ ತಿಳಿಸಿದ್ದಾರೆ. ಶಿವು ಮನೆಗೆ ಬಂದಾಗ ಅನಿತಾ ಸಾವನ್ನಪ್ಪಿರುವ ವಿಷಯ ಗೊತ್ತಾಗಿದೆ. ತಕ್ಷಣ ಅನಿತಾರ ಪೋಷಕರಿಗೆ ವಿಷಯ ತಿಳಿಸಿದ್ದಾರೆ.
ಇನ್ನೂ ವಿಷಯ ತಿಳಿದು ಸಂತೋಷ್ ಮನೆಗೆ ಬಂದ ಅನಿತಾ ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ವಿಚಾರ ತಿಳಿದು ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿ, ಸಂತೋಷ್‌ನನ್ನು ಬಂಧಿಸಿದ್ದಾರೆ. ಅನಿತಾರ ಪೋಷಕರು, ಸಂತೋಷ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದು, ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.