Monday, February 10, 2025
spot_imgspot_img
spot_imgspot_img

ವೀರಕಂಭ ಗುತ್ತಿಗೆದಾರ ನಾಗರಾಜನ ಕಾಮಗಾರಿಯ ಟ್ಯಾಂಕ್‌ನ ಸುತ್ತಲೂ ಸೋರುತ್ತಿದೆ ನೀರು

- Advertisement -
- Advertisement -

ಕಳಪೆ ಮಟ್ಟದ ಕಾಮಗಾರಿಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ

ಬಡಕುಟುಂಬಗಳ ಬದುಕಲ್ಲಿ ನೀರಿನ ಜೊತೆ ಚೆಲ್ಲಾಟವಾಡುತ್ತಿರುವ ನಾಗರಾಜ್ ವಿರುದ್ಧ ಮುಗಿಬಿದ್ದ ಗ್ರಾಮಸ್ಥರು

ವೀರಕಂಭ ಗ್ರಾಮ ಎಂದರೆ ಅತೀ ಹೆಚ್ಚು ಜನಸಂಖ್ಯೆಯನ್ನೊಳಗೊಂಡ ಉತ್ತಮ ಅಭಿವೃದ್ಧಿಯತ್ತ ಸಾಗುತ್ತಿರುವ ಮಾದರಿ ಗ್ರಾಮ. ಈ ಗ್ರಾಮದ ಮಂಗಲಪದವು ವ್ಯಾಪ್ತಿಯಲ್ಲಿ ಸುಮಾರು 150 ಕುಟುಂಬಗಳು ತಮ್ಮ ಜೀವನ ನಡೆಸುತ್ತಿದ್ದಾರೆ. ವಿಟ್ಲಕ್ಕೆ ಅತೀ ಹತ್ತಿರವಾದ ಈ ಪ್ರದೇಶವು ಮುಂದಿನ ದಿನಗಳಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಹೆಚ್ಚಿನ ಸಾಧ್ಯತೆಗಳಿರುವುದರಿಂದ ವೀರಕಂಭ ಗ್ರಾಮ ಪಂಚಾಯತ್‌ನಡಿಯಲ್ಲಿ ಈ ಪ್ರದೇಶಕ್ಕೆ ಸರಕಾರದಿಂದ ಸಿಗುವಂತಹ ಸಿಗಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲು ಶ್ರಮ ವಹಿಸುತ್ತಿದೆ.

ಇದೀಗ ಬೇಸಿಗೆ ಕಾಲ ಧಾವಿಸುತ್ತಿದ್ದಂತೆಯೆ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಜನರು ನೀರನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ ನೀರಿನ ಸಂಪೂರ್ಣ ಪೂರೈಕೆ ಜನರಿಗೆ ಸಿಗಬೇಕು. ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕೆಂದ್ರೀಯ ಜಲಜೀವನ್ ಮಿಷನ್ ಯೋಜನೆ ತರಲಾಗಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತುರವರ ಮುತುವರ್ಜಿಯಿಂದ ವೀರಕಂಭ ಗ್ರಾಮ ಪಂಚಾಯತ್‌ಗೆ ಈ ಯೋಜನೆ ಜಾರಿಯಾಗಿದೆ. ಎಲ್ಲಾ ಮನೆಗಳಿಗೆ ಸಮರ್ಪಕ ನೀರಿನ ಪೂರೈಕೆ ಮಾಡಬೇಕೆನ್ನುವ ಉದ್ದೇಶದಿಂದ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು ಈ ಯೋಜನೆಯನ್ನು ವೀರಕಂಭ ಗ್ರಾಮ ಪಂಚಾಯತ್‌ಗೆ ಒದಗಿಸಿದ್ದು ಆದರೆ ಈ ಯೋಜನೆಯ ಅಸಮರ್ಪಕ ಬಳಕೆ ನಡೆದಿದೆ ಎಂದು ಮಂಗಲಪದವು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕೇಂದ್ರೀಯ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ವೀರಕಂಭ ಗ್ರಾಮ ಪಂಚಾಯತ್‌ಗೆ ಸುಮಾರು 2.50 ಕೋಟಿ ಅನುದಾನ ಜಾರಿಯಾಗಿದೆ. ಇದರಲ್ಲಿ 7 ನೀರಿನ ಟ್ಯಾಂಕ್ ಮತ್ತು 7 ಬೋರ್‌ವೆಲ್‌ಗಳನ್ನು ಈ ಗ್ರಾಮಕ್ಕೆ ನೀಡಿ ಆ ಮೂಲಕ ಗ್ರಾಮಸ್ಥರಿಗೆ ನೀರಿನ ಸಮರ್ಪಕ ಪೂರೈಕೆಯನ್ನು ಒದಗಿಸಿಕೊಡಬೇಕು ಎನ್ನುವ ಉದ್ದೇಶ ಈ ಯೋಜನೆಯದು. ಇದೀಗ ಈ ಯೋಜನೆಯಡಿ ಮಂಗಲಪದವು ರಸ್ತೆ ಬದಿಯಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್ ನ ಕಾಮಗಾರಿ ಕಳಪೆ ಮಟ್ಟದಲ್ಲಿದ್ದು, ಮೂರು ಬಾರಿ ಈ ಟ್ಯಾಂಕ್‌ನ ಕಾಮಗಾರಿಯನ್ನು ದುರಸ್ಥಿಗೊಳಿಸಿದರೂ ಮತ್ತೆ ಅದೇ ಕಳಪೆ ಕಾಮಗಾರಿಯನ್ನು ಮಾಡಿ ಈ ಯೋಜನೆಯನ್ನು ಅಸಮರ್ಪಕವಾಗಿ ಬಳಸಿಕೊಂಡಿದ್ದಾರೆ.

ಇದಾಗಿಯೂ ಈ ಕಾಮಗಾರಿಯ ಸಬ್ ಕಾಂಟ್ರಾಕ್ಟರ್ ವಹಿಸಿಕೊಂಡವನು ಯಾರು ಅಂದು ಕೊಂಡಿದ್ದೀರಾ…? ಅವನೇ ನಾಗರಾಜ್..
ಪ್ರಮುಖ ಗುತ್ತಿಗೆದಾರರಿಂದ ನಾರಗಾಜ್ ಎಂಬಾತ ಸಬ್ ಗುತ್ತಿಗೆದಾರನಾಗಿ ಈ ಕಾಮಗಾರಿಯ ಜವಬ್ದಾರಿ ವಹಿಸಿಕೊಂಡಿದ್ದು, ಈ ನಾಗರಾಜ ಎಂಬಾತನೇ ಗ್ರಾಮಸ್ಥರ ಬದುಕಲ್ಲಿ ನೀರಿನ ಜೊತೆ ಆಟವಾಡುತ್ತಿರುವ ವ್ಯಕ್ತಿ. ಸರಕಾರದಿಂದ ಸಿಕ್ಕಿರುವ ಈ ಯೋಜನೆಯ ಕಾಮಗಾರಿಯನ್ನು ತೀರ ಕಳಪೆ ಮಟ್ಟದಲ್ಲಿ ಮಾಡಿದ್ದು , ತನ್ನ ಹೊಟ್ಟೆತುಂಬಿಸುವುದಕ್ಕಾಗಿ ಗ್ರಾಮಸ್ಥರ ಬಾಯಿಗೆ ನೀರಿಲ್ಲದಂತೆ ಆಟವಾಡುತ್ತಿದ್ದಾನೆ. ನೋಡಲು ಸುಂದರವಾಗಿ ನಿರ್ಮಿಸಿರುವ ಈ ಟ್ಯಾಂಕ್‌ನ ಸುತ್ತಲೂ ಬಿರುಕು ಬಿಟ್ಟಿದ್ದು, ಟ್ಯಾಂಕ್ ಉದ್ಘಾಟನೆಯಾಗುವ ಮೊದಲೇ ಟ್ಯಾಂಕ್‌ನಿಂದ ನೀರು ಸೋರುತ್ತಿದೆ. ಕಳಪೆ ಮಟ್ಟದ ಕಾಮಗಾರಿಯಿಂದ ಇದೀಗ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದು, ಈತನ ಈ ನೀಚ ಬುದ್ಧಿಯಿಂದ ಬಂಟ್ವಾಳ ಶಾಸಕರ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುವಂತಾಗಿದೆ.

ನಾಗರಾಜ್ ಈ ಹಿಂದೆ ಕೆಲಿಂಜ ಮೆಚ್ಚಿ ಜಾತ್ರೋತ್ಸವ ಸಂದರ್ಭ ಗ್ರಾಮಸ್ಥರ ಕುಡಿಯುವ ನೀರಿಗೆ ಕತ್ತರಿ ಹಾಕಿದ್ದು ಇದರಿಂದಾಗಿ ತೀರ್ವ ಆಕ್ರೋಶಗೊಂಡ ಸಾರ್ವಜನಿಕರು ಇದೀಗ ಈತ ಮಾಡಿದ ಈ ಕಳಪೆ ಕಾಮಗಾರಿಯನ್ನು ಕಂಡು ನಾಗರಾಜ್‌ನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು, ಶಾಸಕರು ಈ ಟ್ಯಾಂಕ್‌ನ ಕಳಪೆ ಕಾಮಗಾರಿಯನ್ನು ಪರಿಶೀಲಿಸಿ, ಕಾಮಗಾರಿಯ ಗುತ್ತಿಗೆದಾರ ನಾಗರಾಜ್‌ನನ್ನು ವಿಚಾರಿಸಿ ಮಂಗಲಪದವು ಗ್ರಾಮದ ಬಡಕುಟುಂಬಗಳಿಗೆ ಅದಷ್ಟು ಬೇಗನೇ ನೀರಿನ ಸಮರ್ಪಕ ವ್ಯವಸ್ಥೆಯನ್ನು ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!