

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯ ಹಿಂದೆ ಬಿದ್ದ ವ್ಯಕ್ತಿಯೊಬ್ಬ ಹಣ ಕಳೆದುಕೊಂಡ ಘಟನೆ ನಡೆದಿದೆ. ಯುವತಿ ಸುಂದರವಾಗಿರುವುದನ್ನು ನೋಡಿ ಮರುಳಾದ ಯುವಕ ಆಕೆಯೊಂದಿಗೆ ಚಾಟಿಂಗ್ ಆರಂಭಿಸಿದ್ದಾನೆ. ವಿಡಿಯೋ ಕಾಲ್ ಸಹ ಮಾಡಿದ್ದಾನೆ. ಇಬ್ಬರ ನಡುವೆ ತುಂಬಾ ಸಲುಗೆ ಬೆಳೆದಾಗ ಯುವತಿಯೊಂದಿಗೆ ವ್ಯಕ್ತಿ ಅಶ್ಲೀಲ ವಿಡಿಯೋ ಕಾಲ್ ಸಹ ಮಾಡಿದ್ದಾನೆ. ಆದರೆ, ಆಕೆ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿರುವುದು ಆತನಿಗೆ ಗೊತ್ತೇ ಇಲ್ಲ. ಯುವತಿಯ ಸೌಂದರ್ಯಕ್ಕೆ ಮರುಳಾಗಿ ಬೆತ್ತಲಾದ ಸಂತ್ರಸ್ತನಿಗೆ ನಂತರ ಎದುರಾಗಿದ್ದು ಸಂಕಷ್ಟಗಳ ಸರಮಾಲೆ..!
ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಯುವತಿ, ವಿಡಿಯೋ ಲೀಕ್ ಮಾಡುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಸಾಕಷ್ಟು ಹಣ ನೀಡಿದ್ದ ಸಂತ್ರಸ್ತ ಒಂದು ಹಂತದಲ್ಲಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಆಕೆಯ ಜೊತೆಗಿದ್ದ ಸೈಬರ್ ಖದೀಮರು ಹಿಡಿದಿದ್ದು ಮಾತ್ರ ಬೇರೆ ದಾರಿ. ವಿಡಿಯೋ ಕಾಲ್ ಮಾಡಿದ್ದ ಸುಂದರಿ ಸಾವಿಗೀಡಾಗಿದ್ದಾಳೆ ಅನ್ನುವ ಕತೆ ಕಟ್ಟಿ ಸಾವಿಗೆ ನೀನೆ ಕಾರಣ ಎಂದು ಮತ್ತೆ ತಕರಾರು ತೆಗೆದಿದ್ದಾರೆ.

ಇಷ್ಟು ಮಾತ್ರವಲ್ಲದೆ ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಅಂತಾ ಸುಳ್ಳು ಹೇಳಿ ಗೂಗಲ್ನಲ್ಲಿ ಸಿಗುವ ಸಿಬಿಐನಲ್ಲಿ ದಾಖಲಾಗಿರುವ ಪ್ರಕರಣಗಳ ಲಿಸ್ಟ್ ತೆಗೆದು ಅದರಲ್ಲಿ ದೂರುದಾರನ ಹೆಸರು ಹಾಕಿ, ಅದನ್ನು ತೋರಿಸಿ ವಿಚಾರಣೆಗೆ ಬರುವಂತೆ ಹೇಳಿ ಹಂತ ಹಂತವಾಗಿ ಸಂತ್ರಸ್ತನಿಂದ 5 ಲಕ್ಷ ರೂಪಾಯಿಗು ಅಧಿಕ ಹಣ ವಸೂಲಿ ಮಾಡಿದ್ದಾರೆ. ನಿರಂತರ ಕಿರುಕುಳದಿಂದ ಬೇಸತ್ತ ಸಂತ್ರಸ್ತ ಕಡೆಗೆ ಸ್ನೇಹಿತರೊಬ್ಬರಿಗೆ ನಡೆದ ವಿಷಯವನ್ನೆಲ್ಲ ತಿಳಿಸಿ, ಆಗ್ನೇಯ ವಿಭಾಗದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಕ್ಷ ಲಕ್ಷ ಪೀಕಿರುವ ಸುಂದರಿ ಹಾಗೂ ಆಕೆಯ ಗ್ಯಾಂಗ್ಗಾಗಿ ಬಲೆ ಬೀಸಿದ್ದಾರೆ.

