ಭ್ರಷ್ಟಾಚಾರ ನಿಗ್ರಹ ದಳ’ ( ACB)ವನ್ನು ಹೈಕೋರ್ಟ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರ ಎಸಿಬಿಯ ಅಂತ್ಯಕ್ಕೆ ಕೊನೆಯ ಮೊಳೆ ಹೊಡೆದಿದ್ದು, 2016ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಎಸಿಬಿಯನ್ನು ರದ್ದುಪಡಿಸಿ ಸೆ.9ರಂದು ಅಧಿಕೃತ ಆದೇಶ ಹೊರಡಿಸಿದೆ. ಎಸಿಬಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಡೆ ಅಧಿನಿಯಮದಂತೆ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಸಂಪೂರ್ಣ ಅಧಿಕಾರವನ್ನು ಕೊಡಲಾಗಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಏನೆಲ್ಲಾ ಇದೆ?
2022ರ ಆಗಸ್ಟ್ 8ರಂದು ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿರುವ ಆದೇಶವನ್ನು ಅನುಷ್ಠಾನಗೊಳಿಸಿದೆ.
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರವನ್ನು ರದ್ದುಗೊಳಿಸಿ, ಹೈಕೋರ್ಟ್ ಹೊರಡಿಸಿದ ಆದೇಶದ ತತ್ಪರಿಣಾಮವನ್ನು ಜಾರಿಗೊಳಿಸಲಾಗಿದೆ.
ಹೈಕೋರ್ಟ್ ಆದೇಶದ ಅನ್ವಯ ಸರ್ಕಾರದ ಅಧಿಸೂಚನೆ ದಿನಾಂಕ 6.2.1991 ಮತ್ತು 8.5.2022 ಹಾಗೂ 5.12.2002ರಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ತಡೆ ಅಧಿನಿಯಮ 1988ರ ಉಪಬಂಧಗಳಡಿ ನೀಡಲಾಗಿದ್ದ ತನಿಖಾಧಿಕಾರವನ್ನು ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973ರ ಉಪಬಂಧ 2(ಎಸ್)ರನ್ವಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಪೊಲೀಸ್ ಠಾಣಾಧಿಕಾರವನ್ನು ನೀಡಿ ಆದೇಶಿಸಿದ್ದ ಸರ್ಕಾರದ ಅಧಿಸೂಚನೆಗಳನ್ನು ಪುನರುಜ್ಜೀವನಗೊಳಿಸಿ ಆದೇಶಿಸಿದೆ.
ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿರುವುದರಿಂದ ಹಾಗೂ ದಿನಾಂಕ 19.3.2016, 30.03.2016 ಹಾಗೂ 21.04.2016ರ ಸರ್ಕಾರದ ಅಧಿಸೂಚನೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಲಾಗಿದ್ದ ತನಿಖಾಧಿಕಾರ, ಪೊಲೀಸ್ ಠಾಣೆಗಳೆಂದು ಘೋಷಿಸಿ ರಾಜ್ಯವ್ಯಾಪಿ ಅಧಿಕಾರ ನೀಡಿರುವ ಆದೇಶಗಳನ್ನು ಹಿಂಪಡಿಯುವುದರಿಂದ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಸ್ತುತ ಬಾಕಿಯಿರುವ ತನಿಖೆಗಳು, ವಿಚಾರಣೆಗಳು ಮತ್ತು ಇತರೆ ಶಿಸ್ತಿನ ಪ್ರಕರಣಗಳು ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸುವುದು.
ಎಸಿಬಿಯನ್ನು ರದ್ದುಪಡಿಸಿ 2022ರ ಆ.11ರಂದು ಮಹತ್ವದ ತೀರ್ಪು ನೀಡಿದ್ದ ಹೈಕೋರ್ಟ್, ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಬೇಕು. ಲೋಕಾಯುಕ್ತಕ್ಕೆ ನೀಡಲಾಗಿದ್ದ ಪೊಲೀಸ್ ಠಾಣಾ ಅಧಿಕಾರವನ್ನು ಪುನರ್‌ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆ ಹಿನ್ನೆಲೆಯಲ್ಲಿ , ಎಸಿಬಿ ರಚಿಸಿ, ಅದಕ್ಕೆ ನೀಡಲಾಗಿದ್ದ ತನಿಖಾಧಿಕಾರ, ಪೊಲೀಸ್ ಠಾಣೆಗಳೆಂದು ಘೋಷಿಸಿ ಹಾಗೂ ರಾಜ್ಯವ್ಯಾಪಿ ಅಧಿಕಾರ ನೀಡಿ 2016ರಲ್ಲಿ ವಿವಿಧ ದಿನಾಂಕಗಳಂದು ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ಸರ್ಕಾರ ಹಿಂಪಡೆದಿದೆ.