Thursday, September 17, 2026
spot_imgspot_img
spot_imgspot_img

ಉಧಂಪುರ್‌ನಲ್ಲಿ ಭದ್ರತಾ ಪಡೆ – ಉಗ್ರರ ನಡುವೆ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

- Advertisement -
- Advertisement -

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ್‌ನಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಈ ಭಾಗದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಜಲ್ಟಾ ಪ್ರದೇಶದಲ್ಲಿ ಶಂಕಿತರ ಚಲನವಲನದ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದಿವೆ. ಶೋಧ ಕಾರ್ಯಾಚರಣೆ ವೇಳೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.

ಇತ್ತೀಚೆಗೆ ರಾಜೌರಿಯಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೈಬಾ ಸಂಘಟನೆಗೆ ಸಂಬಂಧಿಸಿದ ‘ಓವರ್‌ಗ್ರೌಂಡ್ ವರ್ಕರ್’ ಜಾಲವನ್ನು ಪತ್ತೆಹಚ್ಚಿತ್ತು. ಬಳಿಕ ಪಿರ್ ಪಂಜಾಲ್ ಪ್ರದೇಶದಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಸೆ.15 ರಂದು ರಾಜೌರಿ ಪೊಲೀಸರು ಪಿರ್ ಪಂಜಾಲ್ ಪ್ರದೇಶದಲ್ಲಿ ಶಂಕಿತ ಭಯೋತ್ಪಾದಕ ಜಾಲವೊಂದಕ್ಕೆ ಸಂಬಂಧಿಸಿ ಜಾಕಿರ್ ಹುಸೇನ್, ಮೊಹಮ್ಮದ್ ಅಜಮ್ ಮತ್ತು ಮೊಹಮ್ಮದ್ ಮುಷ್ತಾಕ್ ಎಂಬ ಮೂವರನ್ನು ಬಂಧಿಸಿದ್ದರು.

ಆ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಲು ಮತ್ತು ಉಳಿದ ಉಗ್ರರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಶ್ವಾನದಳ (ಸ್ನಿಫರ್ ಡಾಗ್ಸ್) ಮತ್ತು ವೈಮಾನಿಕ ಕಣ್ಗಾವಲು ಬಳಸಿ ಶೋಧ ಕಾರ್ಯವನ್ನು ತೀವ್ರಗೊಳಿಸಿವೆ. ಉಧಂಪುರ್-ರಿಯಾಸಿ ವ್ಯಾಪ್ತಿಯ ಪ್ರಮುಖ ಮಾರ್ಗಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ವಾಹನ ತಪಾಸಣೆ ಮತ್ತು ಭಾರೀ ಭದ್ರತೆ ಕೈಗೊಳ್ಳಲಾಗಿದೆ.

ದುರ್ಗಮ ಪ್ರದೇಶಗಳಲ್ಲಿ ಪಾಕಿಸ್ತಾನಿ ಉಗ್ರರ ಚಲನವಲನಗಳು ವರದಿಯಾಗಿರುವುದರಿಂದ, ಉಧಂಪುರ್, ರಿಯಾಸಿ, ರಾಂಬನ್, ಕಥುವಾ, ಪೂಂಚ್ ಮತ್ತು ರಾಜೌರಿ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳ ಮೇಲೆ ಭದ್ರತಾ ಪಡೆಗಳು ವಿಶೇಷವಾಗಿ ನಿಗಾ ವಹಿಸಿವೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!