Wednesday, April 24, 2024
spot_imgspot_img
spot_imgspot_img

ಅಂಕದ ಪರದೆ ಬೀಳುವ ಮುನ್ನ ಒಳ್ಳೆಯ ಅಂಕ ಪಡೆದುಕೊಳ್ಳಬೇಕು

- Advertisement -G L Acharya panikkar
- Advertisement -
vtv vitla
vtv vitla
vtv vitla

ಕಾರಿನ ಪ್ರಯಾಣವು ಸುಖದ ಕಲ್ಪನೆ ತಂದರೆ ಬಸ್ಸಿನ ಪ್ರಯಾಣವು ಕೊಂಚ ತ್ರಾಸದಾಯಕವೆಂದೆನಿಸುತ್ತದೆ. ಆದರೆ ಎರಡೂ ಒಂದೇ ಆಗಲು ಸಾಧ್ಯವಿಲ್ಲ. ಬಸ್ಸಿನ ಪ್ರಯಾಣ ಹೇಳುವುದಾದರೆ ಸೇವೆ ಎನ್ನಬಹುದು. ಆ ಪ್ರಯಾಣಕ್ಕೆ ಒಗ್ಗಿಕೊಂಡರೆ ದೇಶದ ಸೇವೆಯ ಕಿಂಚಿತ್ ಫಲವೂ ಒದಗಬಹುದು. ಅಲ್ಲಿ ಸ್ವಾರ್ಥದ ಸುವಾಸನೆಯಿರುವುದಿಲ್ಲ.

vtv vitla

ಒಬ್ಬರೇ ಕುಳಿತು ಕಾರಿನಲ್ಲಿ ಚಲಿಸುವುದಕ್ಕೂ ನಲುವತ್ತು ಅಥವಾ ಅದಕ್ಕೂ ಹೆಚ್ಚು ಮಂದಿ ಬಸ್ಸಿನಲ್ಲಿ ಪ್ರಯಾಣಿಸುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ಸಮಾಜದೊಳಗೆ ಇಂತಹ ಸೇವೆಯೂ ಮುಖ್ಯವಾಗುತ್ತದೆ. ಸಮಾಜದ ಒಳಿತಿಗಾಗಿ ಮನವು ಹಾತೊರೆಯುತ್ತಿರಬೇಕು. ಸಂತೋಷದಿಂದ ಮನಸ್ಸು ಇರಬೇಕಾದರೆ ಹಿತವಾದುದನ್ನು ಮೊದಲು ಕಾಣುವ ಮನವಿರಬೇಕು, ಹಿತವನ್ನೇ ಮಾಡಬೇಕು ಹಾಗೂ ಬಯಸಬೇಕು. ಆಗ ಎಲ್ಲರಿಗೂ ಒಳಿತೆ ಆಗುವುದು.

vtv vitla
vtv vitla

ಆತ್ಮೀಯರನ್ನು ಕಂಡಾಗ ಮನಸ್ಸಿನ ಭಾವನೆಗಳು ಕನ್ನಡಿಯ ಹಾಗೆ ಮುಖದಲ್ಲಿ ವ್ಯಕ್ತವಾಗುತ್ತದೆ. ಜೀವನದಲ್ಲಿ ಬರುವ ಉತ್ಸಾಹಕ್ಕೆ ಎರಡು ಕಾರಣಗಳನ್ನು ತಿಳಿಸಬಹುದು. ಒಂದು ಇತರರ ಏಳಿಗೆಯ ದಾರಿಯನ್ನು ನೋಡಿ ಹರ್ಷಿಸಿ ಧನಾತ್ಮಕವಾಗಿ ತಾವೂ ಆ ದಾರಿಯಲ್ಲಿ ಕ್ರಮಿಸುವುದು. ಎರಡನೆಯದಾಗಿ ಸ್ವಂತ ಪರಿಶ್ರಮದಿಂದ ಚಿಂತನೆಯೊಂದಿಗೆ ಬದುಕನ್ನು ಸದೃಢಗೊಳಿಸುವುದು. ಬುದ್ಧಿಯನ್ನು ವಿವೇಕದೊಂದಿಗೆ ಹರಿಯಬಿಟ್ಟು ಒಳಿತು ಕೆಡುಕುಗಳನ್ನು ಪರಿಶೀಲಿಸಿಕೊಂಡು ಮುನ್ನಡೆದು ಬಾಳಿನಲ್ಲಿ ಅಂತರಂಗದ ಬೆಳಕನ್ನು ಕಾಣಬಹುದು.

ಒಂದರ್ಥದಲ್ಲಿ ಜೀವನಕ್ಕೆ ಪರಮಗುರಿ ದೇವರ ಸಾಕ್ಷಾತ್ಕಾರವೇ ಆಗಿರುತ್ತದೆ. ಆಗ ಬದುಕಿನ ಯಾವ ದಾರಿಗಳೂ ಕಷ್ಟಕರವೆಂದೆನಿಸುವುದಿಲ್ಲ. ಅನುಭವಗಳ ಮೂಟೆಗಳನ್ನು ಅಲ್ಲಲ್ಲಿ ಇಳಿಸುತ್ತ ಇನ್ನು ಕೆಲವು ಕರ್ಮದ ಹೊರೆಗಳನ್ನು ಏರಿಸುತ್ತ ಸಾಗುವ ಈ ಬದುಕಿನ ಪ್ರಯಾಣವು ಯಾವ ತಟದಲ್ಲಿ ವಿರಾಮವಾಗುವುದೋ ಯೋಚನೆಗೆ ನಿಲುಕದ ವಿಷಯವಾಗಿದೆ. ಅದರೆಡೆಗೆ ಗಮನ ಕೊಟ್ಟಷ್ಟು ಜೀವನ ಭಾರವಾಗುತ್ತದೆ. ನಲುಗಲು ಪ್ರಾರಂಭಿಸುತ್ತದೆ. ಭಾರವಾದ ವಸ್ತುಗಳನ್ನು ಕೆಲ ಹೊತ್ತು ಹಿಡಿದಿಟ್ಟುಕೊಳ್ಳಬಹುದಷ್ಟೆ.

ನಿರಂತರವಾದರೆ ಆ ಭಾರವೇ ಒಂದು ದೊಡ್ಡ ಹೊರೆಯಾಗುತ್ತದೆ. ಅಂತೆಯೇ ಈ ಜೀವನವೆಂಬ ಗಾಡಿಯ ಪಯಣದಲ್ಲಿ ಆದಷ್ಟು ಹೊರೆಯನ್ನು ಕಡಿತಗೊಳಿಸಿ ಸಾಗಿಸಿದರೆ ಹಗುರವಾದ ಅನುಭವಗಳಿoದ ತುಂಬಿ ಹಕ್ಕಿಗಳoತೆ ಮೇಲ ಮೇಲಕ್ಕೆ ಹಾರಬಹುದು. ಮೀನಿನಂತೆ ನೀರಿನಲ್ಲಿ ಸುಲಲಿತವಾಗಿ ಈಜಬಹುದು. ವೀರ ಹನುಮನಂತೆ ಸಾಗರವನ್ನೇ ಲಂಘಿಸಬಹುದು. ಯಾವುದೇ ಇರಲಿ ದೇಹಬಲಕ್ಕಿಂತ ಹೆಚ್ಚು ಮನೋಬಲವು ಸಾಧನೆಗೆ ಮೂಲವಾಗುವುದು.

vtv vitla
vtv vitla

ಮನಸ್ಸಿನ ನೆಮ್ಮದಿ ಬಯಸುವುದಾದರೆ ಇತರರ ಯಾವುದೇ ಮಾತನ್ನು ಅತಿಯಾಗಿ ಹಚ್ಚಿಕೊಳ್ಳಬಾರದು, ಉತ್ಪ್ರೇಕ್ಷೆ ಮಾಡಲೂ ಬಾರದು. ಉಳಿದಂತೆ ಸರಾಗವಾಗಿ ಸಾಗುವ ಈ ಪಯಣಕ್ಕೆ ಕಿವಿ ತೂತoತೂ ಆಗಲೇಬಾರದು! ಕಿವಿ ತೂತು ಆದಷ್ಟು ನಿರುತ್ಸಾಹ, ದ್ವೇಷ, ನಿರಾಸೆಗಳು ಮೂಡುತ್ತವೆ . ಬದುಕಿನ ಪಲ್ಲವಗಳು ಆಗ ಹಿಂದೇಟು ಹಾಕುತ್ತವೆ. ಸುತ್ತಲಿರುವ ವ್ಯಕ್ತಿಗಳ ಹಾವ ಭಾವ ವೀಕ್ಷಿಸುತ್ತ ದಿನ ಕಳೆಯುವವರಿಗೇನೂ ಬರವಿಲ್ಲ. ಆದರೆ ತಮ್ಮದೇ ಅಂತರಂಗದ ಹಾವ ಭಾವ ವೀಕ್ಷಿಸಲು ಪುರುಸೊತ್ತು ಎಂಬುದು ದೊರಕುವುದೇ ಇಲ್ಲ.

ಇದು ಬಲು ದೊಡ್ಡ ಕೊರತೆಯೇ ಹೌದು. ಯಾರೂ ಯಾರನ್ನೂ ಮುಂದೆ ಬನ್ನಿ ಎನ್ನುವುದಿಲ್ಲ. ಅಂತರಂಗದ ಮಾತನ್ನು ಆಲಿಸಿ ಮುಂದಕ್ಕೆ ಸಾಗುತ್ತಿರಬೇಕು. ದೇವರು ಸದಾ ಪ್ರೇರಣೆ ನೀಡುವನೆಂದು ಭಾವಿಸಿ ಸಣ್ಣ ಪ್ರಯತ್ನದಲ್ಲಿ ಖುಷಿ ಕಾಣಬೇಕು. ಹೆಗಲು ಭಾರ ಹೊರುವುದೆಂದು ಹೊಲಸು ಎತ್ತಿಕೊಂಡು ಹೋಗಲುಂಟೇ? ಹಾಗೆಯೇ ಒಳಿತು ಕಾಣಬೇಕೆಂದರೆ ಎಲ್ಲರಿಗೂ ಒಳಿತಾಗುವಂತಹ ಕಾರ್ಯ ಮಾಡಬೇಕು. ಮುಖ್ಯವಾಗಿ ಅಂತರಾತ್ಮ ಪರಿಶುದ್ಧವಾಗಿರಬೇಕು. ಆಗ ನೆಮ್ಮದಿಯನ್ನು ಹುಡುಕುತ್ತ ಎಲ್ಲೆಂದರಲ್ಲಿ ಅಲೆಯಬೇಕಾಗಿಲ್ಲ. ತಾನಾಗಿ ಮನದೊಳಗೆ ಒದಗಿ ಬರುತ್ತದೆ.

vtv vitla
vtv vitla

ಮಾಡಬೇಕಾದ ಕಾರ್ಯಗಳು ಅವೆಷ್ಟೋ ಇದ್ದರೂ ಸುಮ್ಮನೆ ಕುಳಿತು ಕಾಲ ಹರಣ ಮಾಡುವುದು ಒಂದು ರೀತಿಯಲ್ಲಿ ಅನುಭವಗಳನ್ನು ಕಳೆದುಕೊಳ್ಳುವುದೇ ಆಗಿದೆ. ಈ ಬದುಕು ಅನುಭವಗಳ ರಸಪಾಕ. ಆ ಪಾಕವು ಗಟ್ಟಿಯಾದಾಗ ಅದಕ್ಕೊಂದು ನಿರ್ದಿಷ್ಟ ರೂಪ ದೊರಕುತ್ತದೆ. ಅನುಭವಗಳೇ ಆಗದಿದ್ದರೆ ರೂಪ ಪಡೆಯುವುದೆಂತು? ಆವೆ ಮಣ್ಣು ಸುಂದರ ರೂಪು ಹೊಂದಬೇಕಾದರೆ ಅದು ಹಲವು ಪಾಕಗಳಿಗೆ ಒಗ್ಗಿಕೊಳ್ಳುತ್ತದೆ. ಆಮೇಲೆ ಸುಂದರವಾಗಿ ನೋಡುಗರ ಕಣ್ಣಿಗೆ ಆಕರ್ಷಿಸಲ್ಪಡುತ್ತದೆ. ವಿಶಾಲ ಮನಸ್ಸು ಹೊಂದುವ ಪರಿಯೂ ಹೀಗೆಯೇ.

ಅನುಭವಗಳ ಮೊತ್ತಗಳು ಏರಿದಷ್ಟು ಜೀವನದ ಅರಿವಿನ ದಾರಿ ಸರಳವಾಗುವುದು. ಕಪ್ಪೆಯೊಂದು ಕುಪ್ಪಳಿಸಿ ಜಿಗಿಯಲು ತ್ರಾಸ ಪಟ್ಟರೆ ಸುಲಭವಾಗಿ ಹಾವಿಗೆ ಆಹಾರವಾಗುತ್ತದೆ. ಅಂತೆಯೇ ಜಿಂಕೆಯು ವೇಗವಾಗಿ ಓಡದಿದ್ದರೆ ಇತರ ಪ್ರಾಣಿಗಳ ಬಾಯಿಗೆ ಸುಲಭವಾಗಿ ಸಿಗುತ್ತದೆ. ಮನುಷ್ಯನು ವಿದ್ಯೆ ಕಲಿತು ಬುದ್ದಿವಂತನಾದಾಗ ಒಳಿತು ಕೆಡುಕುಗಳ ಮೂಲ ಅರ್ಥೈಸಿಕೊಳ್ಳಬಲ್ಲವನಾಗುತ್ತಾನೆ. ಅನ್ಯರ ವಸ್ತು ವಿಷಯಗಳಿಗೆ ಆಸೆಪಡದೆ ತನ್ನೊಳಗಿನ ಭಾವನೆಗಳನ್ನು ದೇವರ ಮುಂದೆ ಅರಿಕೆ ಮಾಡಿ ಆತ ತೋರಿಸುವ ದಾರಿಯಲ್ಲಿ ಮುಂದುವರಿದಾಗ ದೇಶದಲ್ಲಿ ಶಾಂತಿ, ನೆಮ್ಮದಿ ದೊರಕಬಹುದು.

vtv vitla
vtv vitla

ಶ್ರೀ ಕೃಷ್ಣ ಪರಮಾತ್ಮ ಹೇಳಿದಂತೆ ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಅದರ ಫಲಾಫಲಗಳನ್ನು ನಿರೀಕ್ಷಿಸಬಾರದು. ಫಲ ದೊರಕಿತೋ ಸಂತೋಷ. ದೊರಕಲಿಲ್ಲವೋ ಇನ್ನೊಂದು ಒಳ್ಳೆಯ ಕಾರ್ಯ ಮಾಡಲು ಅನುಭವ ಪಡೆದoತಾಯಿತು. ಜೀವನದ ಸಂಧ್ಯಾ ಕಾಲದಲ್ಲಿ ಆದಷ್ಟೂ ಕೊರಗುವ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳದಿರಬೇಕಾದರೆ ಮಧ್ಯಾಹ್ನದಲ್ಲಿ ಗಾಢ ನಿದ್ದೆ ಮಾಡಬಾರದು. ಏನೇ ಕಾರ್ಯಗಳಿರಲಿ ಸಮಾಜಕ್ಕೆ ದೇಶಕ್ಕೆ ಒಳಿತು ಆಗುವುದಾದರೆ ಹಿಂದಡಿ ಇಡಬಾರದು.

ಋಣ ಮುಕ್ತರಾಗಬೇಕಾದರೆ ಪಡಕೊಂಡಿದ್ದರ ಎರಡು ಪಟ್ಟು ಸಮಾಜದ ಒಳಿತಿಗೆ ನೀಡುವ ನಿಯಮ ಬದ್ಧತೆ ಪಾಲಿಸಬೇಕು. ಈ ಭೂಮಿ ನಮದಲ್ಲ. ಬರುವಾಗಲೇ ಇತ್ತು. ಹೋಗುವಾಗಲೂ ಇರುತ್ತದೆ. ಮಧ್ಯೆ ಪ್ರವೇಶ ಮಾಡಿದ ನಾಟಕದ ಪಾತ್ರಧಾರಿಗಳು ಮಾತ್ರ ನಾವು. ಅಂಕದ ಪರದೆ ಎಳೆಯುವವರೆಗೆ ಅವರವರ ಪಾತ್ರ ಆದಷ್ಟೂ ಒಳ್ಳೆಯ ರೀತಿಯಲ್ಲಿ ನಿರ್ವಹಿಸಿ ತೆರಳಿದರೆ ದೇಶ ಸುಭೀಕ್ಷವಾದೀತು. ಹಾಗಾಗಿ ಅಂಕದ ಪರದೆ ಬೀಳುವ ಮುನ್ನವೇ ಒಳ್ಳೆಯ ಅಂಕ ಪಡೆಯುವ ಪ್ರಯತ್ನ ಪ್ರತಿಯೊಬ್ಬ ಭಾರತೀಯನಿಗಿರಲಿ.

✍️ ಮಲ್ಲಿಕಾ ಜೆ.ರೈ ಗುಂಡ್ಯಡ್ಕ ಪುತ್ತೂರು. ಕವಯಿತ್ರಿ, ಲೇಖಕರು, ಅಂಕಣಕಾರರು.

vtv vitla
vtv vitla
- Advertisement -

Related news

error: Content is protected !!