

ನೆಲಮಂಗಲ: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಸಿನಿಮಾದಲ್ಲಿ ನಟಿಸಲು ಚಾನ್ಸ್ ಕೊಡಿಸುವುದಾಗಿ ಹೇಳಿ ಯುವಕ ವಂಚಿಸಿದ ಘಟನೆ ನಡೆದಿದೆ. ಆತನಿಗೆ ಹಣದ ಮೋಹ..! ಬಾಲಕಿಗೆ ಫೇಮ್ ಗಳಿಸಬೇಕೆಂಬ ಆಸೆ. ಇದರಿಂದ ಬಾಲಕಿ ಯುವಕನಿಗೆ ಲಕ್ಷಾಂತರ ಹಣ, ಚಿನ್ನ ನೀಡಿ ವಂಚನೆಗೆ ಒಳಗಾಗಿದ್ದಾಳೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಓಂ ಸಾಯಿ ಮಹದೇವ (25) ಬಂಧಿತ ಆರೋಪಿ. ಬಾಲಕಿಯಿಂದ 3 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದು ಅರೋಪಿ ವಂಚಿಸಿರುವುದಾಗಿ ಹೇಳಲಾಗಿದೆ.

ನಟಿಯಾಗುವ ಆಸೆಗಾಗಿ ಮನೆಯಲ್ಲಿದ್ದ ಚಿನ್ನಾಭರಣ, ಹಣ ತೆಗೆದುಕೊಂಡು ಬಾಲಕಿಯು ಆರೋಪಿ ಮಹದೇವನಿಗೆ ಕೊಟ್ಟಿದ್ದಾಳೆ. ಆದರೆ ಕಾಲಾಂತರದಲ್ಲಿ ಹಣವೂ ಇಲ್ಲ, ನಟನೆಯೂ ಇಲ್ಲ ಎಂಬುದು ಸಂತ್ರಸ್ತ ಬಾಲಕಿಯ ಅರಿವಿಗೆ ಬಂದಿದೆ. ವಿಷಯ ತಿಳಿದು ಬಾಲಕಿಯ ಪೋಷಕರು ತಕ್ಷಣ ದಾಬಸ್ ಪೇಟೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಸಂತ್ರಸ್ತ ಬಾಲಕಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ದೂರಿನ ಆಧಾರದ ಮೇಲೆ ಪೊಲೀಸರು ಯುವಕನನ್ನ ಬಂಧಿಸಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

