Tuesday, April 16, 2024
spot_imgspot_img
spot_imgspot_img

ಉಕ್ರೇನ್‌ನಲ್ಲಿ ಯುದ್ಧ ಮಧ್ಯೆಯೇ ಕರೆಯುತ್ತಿದೆ ಕಾಲೇಜು; ಆತಂಕದಲ್ಲಿ ವಿದ್ಯಾರ್ಥಿಗಳು

- Advertisement -G L Acharya panikkar
- Advertisement -

ಮಂಗಳೂರು: ಉಕ್ರೇನ್‌ನಲ್ಲಿ ಇನ್ನೂ ಯುದ್ಧ ಪರಿಸ್ಥಿತಿ ಸುಧಾರಿಸಿಲ್ಲ, ಆಗಲೇ ಅಲ್ಲಿನ ಹಲವು ವಿಶ್ವವಿದ್ಯಾನಿಲಯಗಳು ಭಾರತವೂ ಸೇರಿದಂತೆ ವಿವಿಧ ದೇಶಗಳಿಂದ ತಮ್ಮಲ್ಲಿ ನೋಂದಾಯಿಸಿಕೊಂಡ ವಿದ್ಯಾರ್ಥಿಗಳನ್ನು ಮರಳಿ ಬರುವಂತೆ ಸೂಚಿಸಿವೆ.

ಸರಕಾರದ ನೆರವು ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಈಗ ಏನು ಮಾಡುವುದು ಎಂಬ ಕಳವಳಕ್ಕೆ ಸಿಲುಕಿದ್ದಾರೆ. ಕಾರಣ ಉಕ್ರೇನ್‌ನಲ್ಲಿ ಪರಿಸ್ಥಿತಿ ಸುಧಾರಣೆಯೇ ಆಗಿಲ್ಲ. ಮನೆಯಲ್ಲೇ ಕುಳಿತು ಆನ್‌ಲೈನ್‌ ಕ್ಲಾಸ್‌ಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ಸರಕಾರದ ಮೇಲೆ ಇರಿಸಿದ್ದ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಅನೇಕ ಮಂದಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್‌ ಈಗಾಗಲೇ ಅಂತಿಮ ವರ್ಷದ ಮೆಡಿಕಲ್‌ ವಿದ್ಯಾರ್ಥಿಗಳಿಗೆ ಭಾರತದಲ್ಲೇ ಎರಡು ವರ್ಷ ಇಂಟರ್ನ್ ಶಿಪ್‌ ಪೂರ್ಣಗೊಳಿಸುವುದಕ್ಕೆ ಅನುಮತಿ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಇತರ ವರ್ಷಗಳ ವಿದ್ಯಾರ್ಥಿಗಳಿಗೂ ಭಾರತದಲ್ಲೇ ಶಿಕ್ಷಣ ಮುಂದುವರಿಸಲು ಅವಕಾಶ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದಾರೆ.

ಒಮ್ಮೆ ಜೀವ ಸಹಿತ ಬಂದಿದ್ದೇವೆ, ಅಲ್ಲಿನ ವಿಶ್ವವಿದ್ಯಾನಿಲಯಗಳು ಹೇಗಾದರೂ ಮಾಡಿ ಬನ್ನಿ ಎಂದು ಹೇಳುತ್ತಿದ್ದಾರೆ, ಇನ್ನೂ ಉಕ್ರೇನ್‌ನ ವಿಮಾನ ನಿಲ್ದಾಣಗಳು ಕಾರ್ಯಾರಂಭಿಸಿಲ್ಲ, ನಾವು ಹತ್ತಿರದ ದೇಶಗಳಿಗೆ ಹೋಗಿ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ತೆರಳಬೇಕಾಗುತ್ತದೆ, ಅವರಿಗೆ ಅವರ ಸಂರಕ್ಷಣೆಯೇ ಸಾಧ್ಯವಾಗುತ್ತಿಲ್ಲ, ಇನ್ನು ನಮ್ಮ ರಕ್ಷಣೆ ಹೇಗೆ ಸಾಧ್ಯ ಎನ್ನುತ್ತಾರೆ ಮಂಗಳೂರಿನಲ್ಲಿರುವ ಉಕ್ರೇನ್‌ ವೈದ್ಯಕೀಯ ವಿದ್ಯಾರ್ಥಿ ಪೃಥ್ವಿರಾಜ್‌. ಹೆತ್ತವರಿಗೂ ಮಕ್ಕಳನ್ನು ಪುನಃ ಕಳುಹಿಸುವ ಧೈರ್ಯ ಇಲ್ಲ. ಸದ್ಯ ಆನ್‌ಲೈನ್‌ ತರಗತಿ ಮುಂದುವರಿಸಬೇಕಷ್ಟೆ. ನಾವು ಕೇಳಿದ ಪ್ರಶ್ನೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಉತ್ತರಗಳನ್ನು ಕೊಟ್ಟಿದೆ. ಆದರೆ ನಮ್ಮೆಲ್ಲ ಆಕಾಂಕ್ಷೆಗಳಿಗೂ ಅದು ವಿರುದ್ಧವಾಗಿದೆ ಎನ್ನುತ್ತಾರೆ ಪೃಥ್ವಿ.

ಉಕ್ರೇನ್‌ನಲ್ಲಿ ಅಂತಿಮ ವರ್ಷ ಪೂರೈಸಿದ್ದ ವಿದ್ಯಾರ್ಥಿಗಳು ಭಾರತದಲ್ಲಿ ಎರಡು ವರ್ಷ ಇಂಟರ್ನ್ ಶಿಪ್‌ ಮಾಡಿ ಬಳಿಕ ಇಲ್ಲಿ ಎಫ್‌ಎಂಜಿಇ (ಫಾರಿನ್‌ ಮೆಡಿಕಲ್‌ ಗ್ರಾಜ್ಯುಯೇಟ್‌ ಎಕ್ಸಾಂ) ಬರೆಯಲು ಅವಕಾಶ ಸಿಕ್ಕಿದೆ, ಆದರೆ 2ರಿಂದ 5 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ಆಯ್ಕೆ ಸದ್ಯ ಇಲ್ಲ. ಮನೆಯಲ್ಲಿರುವ ವಿದ್ಯಾರ್ಥಿಗಳಲ್ಲಿ ಕೆಲವರು ಕೋರ್ಟ್‌ ಮೇಲೆ ನಿರೀಕ್ಷೆ ಇರಿಸಿಕೊಂಡು ಆನ್‌ಲೈನ್‌ ಶಿಕ್ಷಣವನ್ನೇ ಮುಂದುವರಿಸುವ ಇರಾದೆ ಹೊಂದಿದ್ದಾರೆ. ಕೆಲವರು ಸಾಕಷ್ಟು ಕಾದದ್ದಾಯಿತು, ಇನ್ನು ಬೇರೆ ದೇಶಕ್ಕೆ ವರ್ಗಾವಣೆ ಪಡೆಯುತ್ತೇವೆ ಎಂದು ಆ ದಾರಿ ಹಿಡಿಯುತ್ತಿದ್ದಾರೆ.

ನಾನು ನಮ್ಮ ಏಜೆನ್ಸಿ ಮೂಲಕ ಜಾರ್ಜಿಯಾ ದೇಶಕ್ಕೆ ಟ್ರಾನ್ಸ್‌ಫರ್‌ ಪಡೆಯುವ ಪ್ರಯತ್ನದಲ್ಲಿದ್ದೇನೆ ಎನ್ನುತ್ತಾರೆ ಖಾರ್ಕಿವ್‌ ವಿ.ವಿ.ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿನಿಯಾಗಿದ್ದ ಉಜಿರೆಯ ಹೀನಾ ಫಾತಿಮಾ.

ಮೊದಲ ವರ್ಷದವರ ಸ್ಥಿತಿ ಮಾತ್ರ ಅತಂತ್ರ. ಯಾಕೆಂದರೆ 2021ರ ನವೆಂಬರ್‌ 18ರೊಳಗೆ ಪ್ರವೇಶ ಪಡೆದವರಿಗೆ ಎಂದರೆ 2ನೇ ಹಾಗೂ ಮೇಲ್ಪಟ್ಟ ವರ್ಷಗಳ ವಿದ್ಯಾರ್ಥಿಗಳಿಗೆ ಬೇರೆ ದೇಶದ ಕಾಲೇಜಿಗೆ ವರ್ಗಾವಣೆ ಅವಕಾಶವನ್ನು ಎನ್‌ಎಂಸಿ ನೀಡಿದೆ. ಆದರೆ 1ನೇ ವರ್ಷದವರಿಗೆ ಇದಕ್ಕೆ ಅವಕಾಶವಿಲ್ಲ. ಅವರು ಯುದ್ಧ ಮುಗಿಯುವವರೆಗೆ ಕಾಯಬೇಕು, ಅಥವಾ ಅಪಾಯದ ಮಧ್ಯೆಯೇ ಉಕ್ರೇನ್‌ಗೆ ತೆರಳಬೇಕು. ನಮ್ಮನ್ನು ಕಷ್ಟಪಟ್ಟು ತಾಯ್ನಾಡಿಗೆ ಕರೆತಂದಿದ್ದಾರೆ, ಈಗ ಅಲ್ಲಿ ಯುದ್ಧ ನಡೆಯುತ್ತಿದೆ, ಹಾಗಿರುವಾಗ ನಮಗೆ ಮಾತ್ರ ಟ್ರಾನ್ಸ್‌ಫರ್‌ ಸೌಲಭ್ಯ ಇಲ್ಲ, ನಾವು ಈಗ ಮತ್ತೆ ಅಪಾಯಕರ ಸನ್ನಿವೇಶದಲ್ಲೇ ಅಲ್ಲಿಗೆ ತೆರಳುವ ಪರಿಸ್ಥಿತಿಯನ್ನು ಸರಕಾರ ತಂದಿರುವುದು ಸರಿಯಲ್ಲ ಎನ್ನುತ್ತಾರೆ ಖಾರ್ಕಿವ್‌ ನ್ಯಾಶನಲ್‌ ಯುನಿವರ್ಸಿಟಿಯ ಮೊದಲ ವರ್ಷ ವಿದ್ಯಾರ್ಥಿನಿ ಮೂಡುಬಿದಿರೆಯ ನೈಮಿಷಾ.

ಉಕ್ರೇನ್‌ನ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 25 ಮಂದಿ ಮೆಡಿಕಲ್‌ ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ ದ.ಕ.ದ 18 ಮತ್ತು ಉಡುಪಿ ಜಿಲ್ಲೆಯ 7 ಮಂದಿ ಇದ್ದಾರೆ.

vtv vitla
- Advertisement -

Related news

error: Content is protected !!