
ಮಂಗಳೂರು: ಮೊನ್ನೆಯಷ್ಟೇ ಶಂಕಾಸ್ಪದ ತುರಾಯಾ ಸ್ಯಾಟಲೈಟ್ ಫೋನ್ ಕರೆಗಳು ಕರಾವಳಿ, ಮಲೆನಾಡು ಭಾಗದಲ್ಲಿ ಸಂಪರ್ಕಗೊಂಡ ಕೆಲ ದಿನಗಳಲ್ಲೇ ಕರಾವಳಿಯನ್ನು ಬೆಚ್ಚಿ ಬೀಳಿಸುವ ಮತ್ತೊಂದು ಸುದ್ದಿ ಹೊರಬಿದ್ದಿದೆ.
ಮುಂಬರುವ ಉತ್ಸವ ದಿನಗಳಲ್ಲಿ ಕರಾವಳಿಯನ್ನು ಕೇಂದ್ರವಾಗಿರಿಸಿ ಲಂಚ್ ಬಾಕ್ಸ್ ಬಾಂಬ್ ಸ್ಫೋಟಗೊಳಿಸುವುದಕ್ಕೆ ಉಗ್ರ ಸಂಘಟನೆಗಳು ಸಂಚು ಹೂಡುತ್ತಿರುವುದಾಗಿ ಗುಪ್ತಚರ ವರದಿಗಳು ಎಚ್ಚರಿಸಿವೆ. ಅದರಲ್ಲೂ ಪಾಕ್‌ನ ಐಎಸ್‌ಐ ಕುಮ್ಮಕ್ಕಿನಲ್ಲಿ ಈ ರಹಸ್ಯ ಸಿದ್ಧತೆಗಳು ನಡೆಯುತ್ತಿರುವುದಾಗಿ ವರದಿಗಳು ತಿಳಿಸಿದ್ದು, ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚಿಸಿದೆ

ರಾಜ್ಯದಲ್ಲಿ ಮುಂದೆ ನವರಾತ್ರಿ, ದೀಪಾವಳಿ… ಹೀಗೆ ಪ್ರಮುಖ ಹಿಂದು ಹಬ್ಬಗಳು ಬರುತ್ತಿವೆ. ಇದೇ ವೇಳೆ ಹೆಚ್ಚು ಜನಸಂದಣಿ ಇರುವುದನ್ನು ನೋಡಿಕೊಂಡು ಪ್ಲಾಸ್ಟಿಕ್ ಲಂಚ್ ಬಾಕ್ಸ್‌ಗಳಲ್ಲಿ ಸ್ಫೋಟಕವನ್ನಿರಿಸಿ ವಿನಾಶವನ್ನುಂಟು ಮಾಡುವುದು ಉಗ್ರರ ಗುರಿ ಎನ್ನಲಾಗಿದೆ.
ಸ್ವಾತಂತ್ರ್ಯೋತ್ಸವದ ಕೆಲ ದಿನಗಳ ಹಿಂದೆಯಷ್ಟೇ ಪಂಜಾಬ್‌ನ ಅಮೃತಸರದ ಬಳಿಯೂ ಟಿಫಿನ್ ಬಾಕ್ಸ್‌ನಲ್ಲಿ 2 ಕೆಜಿ ಆರ್‌ಡಿಎಕ್ಸ್ ತುಂಬಿ ಇರಿಸಿದ್ದ ಪ್ರಕರಣ ಪತ್ತೆಯಾಗಿತ್ತು. ಈ ಬಾರಿ ಕರಾವಳಿಯಲ್ಲೂ ಅಂತಹ ಕೃತ್ಯಕ್ಕೆ ಉಗ್ರರು ಸ್ಕೆಚ್ ಹಾಕುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಬಹಿರಂಗಪಡಿಸಿದೆ. ಅಲ್ಲದೆ ಉಗ್ರರ ಸಿದ್ಧತೆಗಳು, ಅವರಿಗೆ ಬೇಕಾದ ಮಾನವ ಸಂಪನ್ಮೂಲ, ಆರ್ಥಿಕ ಶಕ್ತಿ ಎಲ್ಲವೂ ಉನ್ನತ ಶ್ರೇಣಿಯಲ್ಲಿದೆ. ಹಾಗಾಗಿ ಎಲ್ಲ ದೊಡ್ಡ, ಸಣ್ಣ ಬಂದರುಗಳು, ಮೀನುಗಾರಿಕಾ ಜೆಟ್ಟಿಗಳಲ್ಲೂ ಭದ್ರತೆ ಹೆಚ್ಚಿಸುವ ಅವಶ್ಯಕತೆ ಇದೆ ಎಂದು ಗುಪ್ತಚರ ಇಲಾಖೆ ಪೊಲೀಸರಿಗೆ ಸೂಚನೆ ನೀಡಿದೆ.












