Wednesday, April 24, 2024
spot_imgspot_img
spot_imgspot_img

ಕುಂದಾಪುರ: ಎಲ್‌ಪಿಜಿ ಸಿಲಿಂಡರ್‌ ತಪಾಸಣೆ ನೆಪದಲ್ಲಿ ಹಣ ವಸೂಲಿ; ಗ್ರಾಹಕರ ಆರೋಪ

- Advertisement -G L Acharya panikkar
- Advertisement -

ಕುಂದಾಪುರ: ಅಡುಗೆ ಅನಿಲ ಸಿಲಿಂಡರ್ ಮತ್ತು ಸಂಪರ್ಕಗಳನ್ನು ಪರಿಶೀಲಿಸುವ ನೆಪದಲ್ಲಿ ವಿವಿಧ ತಂಡಗಳು ಮನೆಗಳಿಗೆ ತೆರಳಿ ಹಣ ವಸೂಲಿ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ.

ಗ್ಯಾಸ್ ವಿತರಣಾ ಕಂಪನಿಗಳ ಆದೇಶದಂತೆ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಎಲ್ಲಾ ವಿವರಗಳನ್ನು ಕಂಪನಿಗೆ ಕಳುಹಿಸಲಾಗುತ್ತದೆ. ಗ್ರಾಹಕರಿಂದ ಸಂಗ್ರಹಿಸಿದ ಹಣಕ್ಕೆ ರಶೀದಿಯನ್ನೂ ನೀಡಲಾಗುತ್ತದೆ. ಯಾವುದೇ ದೂರುಗಳಿದ್ದಲ್ಲಿ, ಗ್ರಾಹಕರು ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಬಹುದು ಎಂದು ಗ್ಯಾಸ್ ವಿತರಕರು ಹೇಳುತ್ತಾರೆ.

ಅಲ್ಲದೆ ವಿತರಣಾ ಕಂಪನಿಗಳ ಪರವಾಗಿ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ಅಡುಗೆ ಅನಿಲ ಸಿಲಿಂಡರ್, ಪೈಪ್, ಸ್ಟೌ ಮತ್ತು ಸಿಲಿಂಡರ್ ಇರಿಸಿರುವ ಸ್ಥಳವನ್ನು ಪರಿಶೀಲಿಸಿ ಗ್ರಾಹಕರಿಂದ ಸಹಿ ತೆಗೆದುಕೊಂಡು 236 ರೂ. ಶುಲ್ಕ ಪಾವತಿಸಲು ಹೇಳುತ್ತಾರೆ. ಅಲ್ಲದೆ ಪೈಪ್ ಬದಲಾಯಿಸಿದರೆ ಹೆಚ್ಚುವರಿಯಾಗಿ 190 ರೂ. ಹೀಗೆ ಒಟ್ಟು 426 ರೂ.ಗಳನ್ನು ವಸೂಲಿ ಮಾಡುತ್ತಿದ್ದಾರೆ. ಮನೆಯ ಗ್ಯಾಸ್ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿದ್ದರೂ ಕಂಪನಿ ಸಿಬ್ಬಂದಿ ತಪಾಸಣೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಗ್ರಾಹಕರು ಗೊಂದಲ ವ್ಯಕ್ತಪಡಿಸಿದ್ದಾರೆ. ವಸೂಲಿ ಮಾಡಿದ ಹಣಕ್ಕೆ ರಶೀದಿ ನೀಡುತ್ತಿಲ್ಲ. ಯಾವುದೇ ವಿಷಯವನ್ನು ಪರಿಶೀಲಿಸದೆ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬೆಲ್ಲಾ ಆರೋಪಗಳೂ ಕೇಳಿ ಬಂದಿದೆ.

ಮನೆಗೆ ಪರಿಶೀಲನೆಗೆಂದು ಬಂದ ಸಿಬಂದಿಯ ಫೋಟೋಗಳನ್ನು ಕೆಲವು ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಮನೆಯ ಗ್ಯಾಸ್ ಪರಿಶೀಲನೆಗೆ ಅನುಮತಿ ನೀಡಬೇಡಿ ಎಂದು ಎಚ್ಚರಿಸುತ್ತಿದ್ದಾರೆ. ಆದರೆ ಗ್ಯಾಸ್ ಸರಬರಾಜು ಕಂಪೆನಿಗಳು ಈ ಪರಿಶೀಲನೆ ಕಡ್ಡಾಯ ಎನ್ನುತ್ತಿವೆ.

ಗ್ರಾಹಕರು ವಿಮೆಯ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ವಿತರಣಾ ಏಜೆನ್ಸಿಗಳು ಹೇಳುತ್ತವೆ. ಆದರೆ, ಯಾವುದೇ ಅವಘಡ ಸಂಭವಿಸಿದಲ್ಲಿ ವಿಮೆ ಪಡೆಯಲು ನಿಯಮಿತ ತಪಾಸಣೆ ಮಾಡಬೇಕೆಂಬ ನಿಯಮವಿಲ್ಲ. ವಿಮೆ ಮತ್ತು ನಡೆಯುತ್ತಿರುವ ತಪಾಸಣೆ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಏಜೆನ್ಸಿಗಳು ಹೇಳುತ್ತವೆ.

ಇನ್ನು ಈ ವಿಚಾರವಾಗಿ ಮಾತನಾಡಿರುವ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಗ್ಯಾಸ್ ಸಿಲಿಂಡರ್ ತಪಾಸಣೆಯ ಸಾಧಕ-ಬಾಧಕಗಳ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಅರಿವು ಮೂಡಿಸಬೇಕು. ಅವ್ಯವಸ್ಥೆಗೆ ಅವಕಾಶ ಇರಬಾರದು. ನಮ್ಮ ಆಹಾರ ನಿರೀಕ್ಷಕರ ಮೂಲಕ ಸಾರ್ವಜನಿಕರಿಗೆ ಈ ಬಗ್ಗೆ ಸ್ಪಷ್ಟ ವಿಚಾರ ತಿಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.

- Advertisement -

Related news

error: Content is protected !!