




ನವದೆಹಲಿ: ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇ22 (ಎಥೆನಾಲ್ 22% ಮತ್ತು ಪೆಟ್ರೋಲ್ 78% ಮಿಶ್ರಿತ ಇಂಧನ), ಇ25, ಇ27 ಮತ್ತು ಇ30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ತೆಗೆದುಹಾಕಲಾಗಿದೆ.
ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ
ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕಂಡಿದೆ. ಕಳೆದ ತಿಂಗಳು 11 ದಿನಗಳ ಅಂತರದಲ್ಲಿ ಭಾರತದಲ್ಲಿ ಪೆಟ್ರೋಲ್ ದರವನ್ನು 7.5 ರೂ. ಹೆಚ್ಚಳ ಮಾಡಲಾಯಿತು. ಇದರಿಂದ ವಾಹನ ಸವಾರರ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ.
ಭಾರತವು ತನಗೆ ಅಗತ್ಯವಿರುವ ಶೇ.87ರಷ್ಟು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ. ಈ ಹಿನ್ನೆಲೆ ದೇಶೀಯವಾಗಿ ತಯಾರಾಗುವ ಎಥೆನಾಲ್ ಬಳಕೆಯನ್ನು ಹೆಚ್ಚಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿರುವುದಾಗಿ ತಿಳಿದುಬಂದಿದೆ.







