Monday, May 6, 2024
spot_imgspot_img
spot_imgspot_img

ಕೂಟ,ಆಯನಗಳಲ್ಲಿ ಗ್ರಾಮಸ್ಥರ ಬೆಸುಗೆಯಿದೆ – ರಾಧಾಕೃಷ್ಣ ಎರುಂಬು

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಟ್ಲ ಸೀಮೆಗೊಳಪಟ್ಟ ಅಳಿಕೆ ಗ್ರಾಮ ದೇವಸ್ಥಾನ ಎರುಂಬು ಶ್ರೀ ಶಂಕರನಾರಾಯಣ ದೇವಸ್ಥಾನ. ವಿಟ್ಲ ರಾಜಮನೆತನ ಎರುಂಬುವಿನಲ್ಲಿ ವಾಸ್ತವ್ಯವಿದ್ದಾಗ ಅರಸ/ಅರಸಿಯರಿಗೆ ಮಧ್ಯಾಹ್ನ ಭೋಜನಕ್ಕೆ ಮುನ್ನ ತೀರ್ಥ ಸ್ವೀಕಾರಕ್ಕಾಗಿ ನಿರ್ಮಿತವಾದುದು ಎಂಬ ಚರಿತ್ರೆ ಇದೆ. ದೇವಾಲಯವು ರಮಣೀಯವಾಗಿದ್ದು ಹಿಂಭಾಗಕ್ಕೆ ತಾಗಿಕೊಂಡು ಸ್ಥಳ ಪ್ರಸಿದ್ಧ ಮಾಯಿಲರ ಕೋಟೆಯ ತಪ್ಪಲಿದೆ. ಪಶ್ಚಿಮ ಭಾಗದಲ್ಲಿ ಒಂದು ಮಂಡಲದ ಪ್ರತೀಕವೋ ಎನ್ನುವಂತೆ ನೇರವಾದ 48 ಮೆಟ್ಟಿಲುಗಳು ವಿಶೇಷತೆ ಹೊಂದಿದೆ. ಪ್ರತೀ ವರ್ಷ ಜಾತ್ರೆಯ ದಿನ ದೇವರು ಆ ಮೆಟ್ಟಿಲುಗಳನ್ನು ಇಳಿದು ಹೋಗಿ ಪೂಜೆ ಸ್ವೀಕರಿಸುವುದು ಸಂಪ್ರದಾಯ. ಅಂಗಣದಲ್ಲಿ ಗುಳಿಗ ದೇವರ ಕೆಲಸಕ್ಕೆ ಚ್ಯುತಿ ಬಂದಾಗ ಎಚ್ಚರಿಸುವ ವೀರನಿದ್ದಾನೆ. ಒಳಭಾಗದಲ್ಲಿ ವಿಘ್ನವಿನಾಶಕನ ನೆಲೆ ಯಲ್ಲಿ ಹರಿಹರರು (ಶಂಕರನಾರಾಯಣ ) ನಮಗೆ ಸಿಗುವುದೇ ವಿರಳ.

ಸಾಮಾನ್ಯವಾಗಿ ಜನವರಿ ತಿಂಗಳ ಮೂರನೇ ದಿನಾಂಕದಂದು ಪ್ರತಿವರ್ಷ ಎರುಂಬು ಮಂಡಲ ಪೂಜಾ ಉತ್ಸವ ನಡೆಯುತ್ತದೆ. 48 ದಿನಗಳ ಹಿಂದೆ ಮಂಡಲ (ಸ್ವಸ್ತಿಕ)ಹಾಕಿ, ಉತ್ಸವ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಮಂಡಲ ಹಾಕಿದ ಬಳಿಕ ಗ್ರಾಮದಲ್ಲಿ ಶುಭ ಕಾರ್ಯಗಳು ನಡೆಯುವುದು ಸಮಂಜಸವಲ್ಲ ಎಂಬುದು ಹಿಂದಿನ ಸಾಂಪ್ರದಾಯಿಕ ಆಚರಣೆ. ಈಗಿನ ಆಧುನಿಕ ವ್ಯವಧಾನವಿಲ್ಲದ ಬದುಕಿಗೆ ದೇವರಿಗೆ ತಪ್ಪು ಕಾಣಿಕೆ ಇಟ್ಟು ಮುಂದುವರಿಯುತ್ತಾರೆ. ಹಿಂದೆ ಗ್ರಾಮಕ್ಕೊಂದು ದೇವಾಲಯ. ಹಸಿವಿನ ಕಾಲಕ್ಕೆ ಬಲಿವಾಡು ಕೂಟವೇ ಮೃಷ್ಟಾನ್ನವಿತ್ತು. ವಿಟ್ಲ ಅರಮನೆಯ ಅರಸರ ಪ್ರತಿನಿಧಿಗಳು, ಗ್ರಾಮದ ಗುರಿಕಾರರು, ತಂತ್ರಿವರ್ಯರು, ಅರ್ಚಕರು, ವಾದ್ಯ-ಕೊಂಬು, ಚಾಕರಿಯ ಸ್ಥಾನಿಕರು,ದೀಪ ಹಿಡಿಯುವವರು, ಛತ್ರದವರು, ಮೆಲ್ಕಾಪು ಕಟ್ಟುವ ಮಡಿವಾಳರು, ಕದಿನ -ಸಿಡಿಮದ್ದಿನವರು ಹೀಗೆಂದು ದೇವರ ಸೇವೆಗೆ ಅವರವರದ್ದೇ ಜವಾಬ್ದಾರಿ ಹಿಂದಿನವರು ನೀಡಿದ್ದರು. ಈಗಿನ ತರುಣರು ಸ್ಯಾಂಪಲ್ ಗಳನ್ನಷ್ಟೇ ನಡೆಸಿಕೊಂಡು ಬರುತಿದ್ದಾರೆ. ಸಗಣಿ ಸಾರಿಸಿದ ನೆಲದ ಮೇಲೆ ಊರ ಗ್ರಾಮದ ಸದಸ್ಯರ ಬಲಿವಾಡುಗಳಿಂದ ಹಂಚಿಕೆಯಾಗುತಿತ್ತು ಬಾಳೆ ಎಲೆಯ ಅನ್ನ ಪ್ರಸಾದ. ಅಂದಿನ ಘಮ್ಮನೆ ಮೆಣಸಿನ ಚಟ್ನಿ, ಕುಂಬಳಕಾಯಿ ಸಿಪ್ಪೆಯ ಪಲ್ಯದ ನೆನಪು ಇಂದು ಕೈಯನ್ನು ಪರಿಮಳಿಸುತ್ತದೆ. ಆದರೆ ಪ್ರಸ್ತುತ ಬಫೆಯ ಊಟ ಆಧುನಿಕ ಮತ್ತು ಸುಲಭ ಅಡುಗೆಯನ್ನಷ್ಟೇ ಉಣ ಬಡಿಸುವ ಅನಿವಾರ್ಯತೆ ತಂದೊಡ್ಡಿದೆ. ವರ್ಷದ ಆಯನಕ್ಕೆ ಊರ ಜನರ ಅಂಗಣಕ್ಕೆ ಕೊಟ್ಟಿಡುವುದು (ಶ್ರಮದಾನಕ್ಕೆ ಆರಂಭ)ಕೇವಲ ಸಂಪ್ರದಾಯಿಕ ಆಚರಣೆಯಷ್ಟೇ. ಕರ್ತವ್ಯವೆಂದು ಬರುವ ಕಾಲ ಹಿಂದೆ ಸರಿದು ಯಾವುದಾದರೂ ಆಮಿಷವೊಡ್ಡಿಯೋ , ಕೂಲಿಗಾಗಿಯೋ ಕೆಲಸ ಮಾಡಿಸುವ ಸ್ಥಿತಿ ತಂದೊದಗಿಸುತ್ತಿದೆ. ಯಾಕೆಂದರೆ ಎಲ್ಲರೂ ದೂರ ದೂರ ವೈಟ್ ಕಾಲರ್ ಜಾಬ್ ಹುಡುಕಿ ಹಣ ತರುತ್ತಾರೆ ಆದರೆ ಒಮ್ಮತದ ಮನ ಮಾರುತ್ತಾರೆ ಅಷ್ಟೇ .ಊರ ಜಾತ್ರೆಗೆಂದು ಸಿದ್ದವಾಗುತಿದ್ದ ಊರ ಯುವಕರ ಭಜನಾ ತಂಡಗಳು, ಊರ ಪರದೆ ನಾಟಕದ ಕಲಾವಿದರು ಆ ಸಾಹಸಕ್ಕೆ ತಲೆ ಕೊಡದೇ ಹಣ ಕೊಟ್ಟು ಪರವೂರ ಕಲಾವಿದರಿಗೆ ವಹಿಸುತ್ತೇವೆ. ಇಂದು ಹಣವಿದೆ ಶ್ರಮಿಸುವ ಮನವಿಲ್ಲ, ಸಮಾನ ಮನಸ್ಕರ ಸಹಬಾಳ್ವೆಗಳಿಲ್ಲ. ಎಲ್ಲವನ್ನು ಏನೋ ನುಂಗಿದೆ ಎನಿಸುತ್ತಿದೆ. ಆದರೆ ಆ ಹಿಂದಿನ ಕೂಟ, ಆಯನಗಳು ಗ್ರಾಮಸ್ಥರ ಬೆಸುಗೆಯಿಂದ ಮೆಳೈಸಲು ಇನ್ನು ಸಾಧ್ಯತೆ ಇದೆಯೇ? ಎಂಬುದು ಮಾರ್ಮಿಕ ಪ್ರಶ್ನೆ.

ಆದರೆ ಯಾವುದೇ ವ್ಯವಸ್ಥೆಗಳಿಗೆ ಕುಂದಿಲ್ಲ. ಹಿಂದಿನ ಚಪ್ಪರಗಳಿಲ್ಲದ ಜಾತ್ರೆಯ ಗದ್ದೆಗೂ ಶಾಮಿಯಾನ ಹೊದಿಸಿದೆ. ಮನೆಯಿಂದ ತೆಗೆದುಕೊಂಡು ಹೋಗಲಾಗುವ ಹೊದಿಕೆ ಬಟ್ಟೆಗೆ ಬದಲಾಗಿ ಸುಖಾಸೀನ ಕುರ್ಚಿಗಳಿವೆ, ಸಂತೆಯ ಸೋಜಿಯ ಬದಲಾಗಿ ಕೈಯಲ್ಲಿ ಒಯ್ದ ನೀರಿನ ಬಾಟಲಿ ಸಂತೆಯ ಆನಂದವನ್ನು ಸೆಳೆದುಕೊಂಡಿರುವುದು ಸ್ಪಷ್ಟ. ಆದರೂ ಅಂದು ಕಾಣದ ಒಪ್ಪ ಓರಣ ಸ್ವಚ್ಛತೆ, ಅಲಂಕಾರ, ಉತ್ತಮ ಕಲಾವಿದರ ಸುಶ್ರಾವ್ಯ ಚೆಂಡೆ, ವಾದ್ಯ ಸಂಗೀತ ದೇವರ ಸುತ್ತು ಬಲಿಗೆ ಹಿಂದಿಲ್ಲದ ಮೆರುಗು ಕೊಟ್ಟಿತ್ತು. ಬೆಳಕಿನ ಸಿಂಗಾರ ಮುದ ಕೊಟ್ಟಿದೆ. ಆದರೆ ಆನಂದಿಸುವ ನಮ್ಮ ಗ್ರಾಮದ ಸಂಸಾರಗಳು ಎಲ್ಲೋ ಹಣ ಕಳಿಸುವ ಇರಾದೆಯಲ್ಲಿದೆ.ವರ್ಷಕ್ಕೊಂದು ಬಾರಿಯಾದರೂ ಕಡ್ಡಾಯವಾಗಿ ನಮ್ಮೂರ ಜಾತ್ರೆಯಲ್ಲಿ ಸೇರುವ ಸಕ್ರೀಯತೆ ಬರಲಾರದೆ? ದೂರದಿಂದ ಬರುವ ನಮ್ಮವರನ್ನು ದೇವಾಲಯದ ಜಾತ್ರಾ ಸಂಭ್ರಮದೊಳಗೆ ಶ್ರಮಿಸುವಂತೆ ಮಾಡಬಾರದೆ ಎಂಬ ಪ್ರಶ್ನೆಯೇಳುತಿದೆ. ಮತ್ತೆ ಕಷ್ಟದ ದಿನಗಳು ಬಾರದೇ ಆಯನಗಳ ಮನ ಬೆಸುಗೆ ಬೆಸೆಯಲಾರದೆ? ಸೌಕರ್ಯಗಳು ಹೆಚ್ಚಾದಂತೆ ಜನರ ಆಸಕ್ತಿಗೇನು ಕೊರತೆ ಬಂತು ಎಂಬುದು ಪ್ರಶ್ನೆ?
ಅಂತೂ ಈ ವರ್ಷದ ಮಂಡಲ ಪೂಜೆಯು 3 ತಾರೀಕಿಗೆ ಬಲಿವಾಡು ಕೂಟ, ರಾತ್ರಿ ದೇವರ ಬಲಿ ಉತ್ಸವ, ಕಟ್ಟೆ ಪೂಜೆ ಹಾಗೂ ಕಟೀಲು ಮೇಳದ “ಶ್ರೀ ದೇವಿ ಮಹಾತ್ಮೆ “ಯಕ್ಷಗಾನ ನಡೆಯಿತು. ಇಂದು 4.1.2023 ರಂದು ಉತ್ಸವ ಬಲಿ , ದರ್ಶನ ಬಲಿ ಹಾಗೂ ಬಟ್ಲು ಕಾಣಿಕೆ ಕಣ್ಮನ ತಣಿಸಿತು. ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ಸಂಜೆ ರಂಗಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ನಡೆಯಲಿರುವುದು.

- Advertisement -

Related news

error: Content is protected !!