

ಮಕ್ಕಳಿಗಾಗಿ ತಾಯಿ ಎಂತಹ ಸವಾಲನ್ನು ಬೇಕಾದರೂ ಎದುರಿಸುತ್ತಾಳೆ. ತನ್ನ ಜೀವವನ್ನೇ ಒತ್ತಿಯಿಟ್ಟು ಮಕ್ಕಳನ್ನು ಕಾಪಾಡಿರುವ ಅದೆಷ್ಟೋ ಉದಾಹರಣೆಗಳಿವೆ. ಅದೇ ರೀತಿ ಮಹಿಳೆಯೊಬ್ಬರು ತನ್ನ ಎದುರು ಬಂದ ಚಿರತೆಯನ್ನು ಎದುರಿಸಿ, ತನ್ನ ಮಗಳನ್ನು ಸಾವಿನ ದವಡೆಯಿಂದ ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಖೈರಿಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗಿರ್ದಾ ಗ್ರಾಮದಲ್ಲಿ ನಡೆದಿದೆ.

6 ವರ್ಷದ ಬಾಲಕಿ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಚಿರತೆ ಏಕಾಏಕಿ ಆಕೆಯ ಮೇಲೆ ಎರಗಿತ್ತು. ಮಗಳ ಕಿರುಚಾಟ ಕೇಳಿದ ಮಹಿಳೆ ಓಡಿ ಬಂದು ನೋಡಿದಾಗ ಮಗಳ ಮೇಲೆ ಎರಗಿದ್ದ ಚಿರತೆಯನ್ನು ನೋಡಿ ಕಂಗಾಲಾದರು. ತಕ್ಷಣವೇ ಮಹಿಳೆ ಅಂಗಳದ ಬದಿಯಲ್ಲಿ ಬಿದ್ದಿದ್ದ ದೊಣ್ಣೆಯನ್ನು ಎತ್ತಿಕೊಂಡು ಚಿರತೆಗೆ ಹೊಡೆದಿದ್ದಾರೆ. ತನ್ನ ಮೇಲಾದ ದಾಳಿಯಿಂದ ಗಲಿಬಿಲಿಗೊಂಡ ಚಿರತೆ ಮಗುವಿನ ಮೇಲಿದ್ದ ತನ್ನ ಹಿಡಿತವನ್ನು ಸಡಿಲಗೊಳಿಸಿತ್ತು. ಆ ಕೂಡಲೇ ತನ್ನ ಮಗಳನ್ನು ತನ್ನತ್ತ ಎಳೆದುಕೊಂಡ ಆ ಮಹಿಳೆ ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.
ಆ ಮಹಿಳೆಯ ಸಮಯಪ್ರಜ್ಞೆಯಿಂದ ಮಗು ಸಾವಿನ ಅಂಚಿನಿಂದ ಪಾರಾಗಿದೆ. ಆದರೆ, ಚಿರತೆ ದಾಳಿಯಿಂದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೆ ಅರಣ್ಯ ಅಧಿಕಾರಿಗಳ ತಂಡವು ಸ್ಥಳಕ್ಕೆ ಆಗಮಿಸಿದೆ. ಗಾಯಗೊಂಡಿದ್ದ ಬಾಲಕಿಯನ್ನು ಶಿವಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಅಲ್ಲಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

