Friday, March 29, 2024
spot_imgspot_img
spot_imgspot_img

ಜವಾಬ್ದಾರಿ, ನಿರೀಕ್ಷೆಗಳ ಒತ್ತಡಕ್ಕೆ ಸಿಲುಕಬೇಡಿ; ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ಮಕ್ಕಳಿಗೆ ಪ್ರಧಾನಿ ಮೋದಿ ಸಲಹೆ

- Advertisement -G L Acharya panikkar
- Advertisement -
suvarna gold

ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಬೆಳಗ್ಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತ ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ಬಾರಿ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದೆ. ಹಾಗೇ, ಗಣರಾಜ್ಯೋತ್ಸವಕ್ಕೆ ಇನ್ನೆರಡೇ ದಿನಗಳು ಬಾಕಿ ಇವೆ. ಇದೆಲ್ಲದರ ಮಧ್ಯೆ ಇಂದು ಪ್ರಧಾನಿ, ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರೊಟ್ಟಿಗೆ ಸಂವಾದ ನಡೆಸಿದ್ದಾರೆ. ಈ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರ ಇಲಾಖೆ ಸಚಿವೆ ಸ್ಮೃತಿ ಇರಾನಿ ಹಾಗೂ, ರಾಜ್ಯ ಸಚಿವ ಡಾ. ಮುಂಜಪರಾ ಮಹೇಂದ್ರಭಾಯಿ ಉಪಸ್ಥಿತರಿದ್ದರು.

ಸಂವಾದದ ವೇಳೆ ಸಾಧಕ ಮಕ್ಕಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದ ಅವರು, ನೀವೆಲ್ಲ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದೀರಿ. ಅದರ ಬೆನ್ನಲ್ಲೇ ನಿಮ್ಮ ಮೇಲಿನ ಜವಾಬ್ದಾರಿ ಹೆಚ್ಚುತ್ತದೆ. ನಿಮ್ಮ ಕುಟುಂಬ, ಸ್ನೇಹಿತರು, ಸಮಾಜ ನಿಮ್ಮಿಂದ ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತಾರೆ/ತ್ತದೆ. ಆದರೆ ನೀವು ಅವರಿಗೆಲ್ಲ ಸ್ಫೂರ್ತಿಯಾಗಿರಬೇಕೆ ಹೊರತು, ಅವರ ನಿರೀಕ್ಷೆಗಳ ಒತ್ತಡಕ್ಕೆ ಸಿಲುಕಬಾರದು. ನಿಮ್ಮ ಬಾಲ್ಯವನ್ನು ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇಂದು ಜಗತ್ತಿನ ಬಹುತೇಕ ದೊಡ್ಡದೊಡ್ಡ ಕಂಪನಿಗಳ ಸಿಇಒಗಳು ಭಾರತೀಯ ಮೂಲದವರಾಗಿದ್ದಾರೆ. ಇದನ್ನು ನೋಡಲು ತುಂಬ ಖುಷಿಯಾಗುತ್ತದೆ. ಜಗತ್ತಿನ ನವೋದ್ಯಮ ಕ್ಷೇತ್ರದಲ್ಲಿ ಭಾರತೀಯ ಯುವಜನರು ಅತ್ಯಂತ ಉತ್ಸಾಹದಿಂದ ಮುಂದುವರಿಯುತ್ತಿದ್ದಾರೆ. ಈ ಬಗ್ಗೆ ಹೆಮ್ಮೆಯೆನಿಸುತ್ತದೆ ಎಂದು ಹೇಳಿದರು.

ಹೆಣ್ಣು ಮಕ್ಕಳೂ ಕೂಡ ಎಲ್ಲ ಕ್ಷೇತ್ರಗಳಲ್ಲೂ ಅತ್ಯಂತ ಯಶಸ್ವಿಯಾಗಿ ಚಾಪು ಮೂಡಿಸುತ್ತಿದ್ದಾರೆ. ಮೊದಲು ಅವರಿಗೆ ಹೊರಗಿನ ಯಾವ ಕೆಲಸ ಮಾಡಲೂ ಅವಕಾಶ ಸಿಗುತ್ತಿರಲಿಲ್ಲ. ಹೆಣ್ಣುಮಕ್ಕಳಿಗೆ ಸಿಗುತ್ತಿರುವ ಹೇರಳ ಅವಕಾಶ ಕೂಡ ನವಭಾರತದ ಒಂದು ಗುರುತು ಎಂದು ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಸದ್ಯ ದೇಶದಲ್ಲಿ 15-18ವರ್ಷದವರಿಗೆ ನೀಡಲಾಗುತ್ತಿರುವ ಕೊವಿಡ್ 19 ಲಸಿಕೆ ಅಭಿಯಾನದ ಬಗ್ಗೆಯೂ ಇಲ್ಲಿ ಮಾತನಾಡಿದರು. ಕೊರೊನಾ ಲಸಿಕೆ ಅಭಿಯಾನದಲ್ಲಿ ಈ ವಯಸ್ಸಿನವರು ಮಾದರಿಯಾಗಿದ್ದಾರೆ. ಹಾಗೇ, ಸ್ವಚ್ಛತಾ ಅಭಿಯಾನ, ವೋಕಲ್ ಫಾರ್ ಲೋಕಲ್​ ಅಭಿಯಾನಗಳ​ಲ್ಲೂ ಮಕ್ಕಳೇ ತಮ್ಮ ಕುಟುಂಬಗಳಿಗೆ ಮಾದರಿಯಾಗಬೇಕು ಎಂದೂ ಹೇಳಿದ್ದಾರೆ.

ರಾಮಾಯಣ ಆವೃತ್ತಿ ಬರೆದ ಬಾಲಕನೊಂದಿಗೆ ಮಾತು: 11 ವರ್ಷದ ಅವಿ ಶರ್ಮಾ ತಮ್ಮದೇ ಆವೃತ್ತಿಯ ರಾಮಾಯಣ ‘ಬಾಲಮುಖಿ ರಾಮಾಯಣ’ ಬರೆದು ಖ್ಯಾತರಾಗಿದ್ದಾರೆ. ಈ ಬಾರಿ ಅವರಿಗೂ ಸಹ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ. ಇಂದಿನ ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವಿ ಶರ್ಮ ಜತೆ ಮಾತನಾಡಿ, ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀವು ಬಹುದೊಡ್ಡ ಸಾಧನೆ ಮಾಡಿದ್ದೀರಿ. ಇಷ್ಟೆಲ್ಲ ಬರೆಯಲು ಹೇಗೆ ಸಾಧ್ಯವಾಯಿತು? ರಾಮಾಯಣ ಬರೆಯುವ ಸಾಧನೆಯಲ್ಲಿ ನಿಮ್ಮ ಬಾಲ್ಯವನ್ನು ಉಳಿಸಿಕೊಂಡಿದ್ದೀರಾ? ಅಥವಾ ದೊಡ್ಡ ಜವಾಬ್ದಾರಿಯಲ್ಲಿ ಅದು ಕಳೆದು ಹೋಯಿತಾ ಎಂದು ಪ್ರಶ್ನಿಸಿದರು. ಪ್ರಧಾನಿಯವರಿಗೆ ಉತ್ತರಿಸಿದ ಬಾಲಕ ಅವಿ ಶರ್ಮಾ, ನಾನು 2020ರ ಲಾಕ್​ಡೌನ್​​ನಲ್ಲಿ ಬಾಲಮುಖಿ ರಾಮಾಯಣ ಬರೆದೆ. ಇದೆಲ್ಲ ಸಾಧ್ಯವಾಗಿದ್ದು ಶ್ರೀರಾಮನ ಆಶೀರ್ವಾದದಿಂದ. ಹಾಗೇ, ನನ್ನ ತಂದೆ-ತಾಯಿಯ ಆಶೀರ್ವಾದದಿಂದಲೂ ಇದು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಹೀಗೆ ಎಲ್ಲ ಮಕ್ಕಳೊಂದಿಗೂ ಪ್ರಧಾನಿ ನರೇಂದ್ರ ಮೋದಿ ಅವರದ್ದೇ ಆದ ಕ್ಷೇತ್ರದ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದಿದ್ದಾರೆ.

29 ಮಕ್ಕಳಿಗೆ ಪುರಸ್ಕಾರ: ಈ ಬಾರಿ 29 ಮಕ್ಕಳಿಗೆ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಬ್ಲಾಕ್​​​ಚೈನ್​ ತಂತ್ರಜ್ಞಾನದ ಮೂಲಕ ಅವರಿಗೆಲ್ಲ ಡಿಜಿಟಲ್​ ಸರ್ಟಿಫಿಕೇಟ್​ ನೀಡಲಾಗುತ್ತದೆ. ಹಾಗೇ, ಇವರಿಗೆ 1 ಲಕ್ಷ ರೂಪಾಯಿ ಮತ್ತು ಮೆಡಲ್ ಕೂಡ ಸಿಗಲಿದೆ. ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಮಂತ್ರಿ ಬಾಲ ಪುರಸ್ಕಾರವನ್ನು 5ವರ್ಷ ಮೇಲ್ಪಟ್ಟು-15ವರ್ಷ ಒಳಗಿನ ಸಾಧಕ ಮಕ್ಕಳಿಗೆ ನೀಡಲಾಗುತ್ತದೆ. ಅಸಾಧಾರಣ ಸಾಮರ್ಥ್ಯ ಪ್ರದರ್ಶಿಸಿದ, ನಾವೀನ್ಯತೆ, ಕ್ರೀಡೆ, ಕಲೆ, ಸಂಸ್ಕೃತಿ, ಸಮಾಜಸೇವೆ, ಶೌರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಮಕ್ಕಳನ್ನು ಆಯ್ಕೆ ಮಾಡಿ ಪ್ರತಿವರ್ಷವೂ ಪುರಸ್ಕಾರ ನೀಡಲಾಗುತ್ತದೆ.

- Advertisement -

Related news

error: Content is protected !!