



ನವದೆಹಲಿ: ನಮಗೆ ನಿಮ್ಮ ಮೇಲೆ ನಂಬಿಕೆಯಿದೆ, ದೇಶಕ್ಕೆ ನಿಮ್ಮ ಅಗತ್ಯವೂ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜೆನ್-ಝಿಗಳನ್ನುದ್ದೇಶಿಸಿ ಮಾತನಾಡಿದರು.
ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ 57 ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ಬಳಿಕ ಜೆನ್-ಝಿಗಳನ್ನು ಉದ್ದೇಶಿಸಿ ಮೊದಲ ಭಾಷಣ ಮಾಡಿದರು.
ಬದಲಾಗುತ್ತಿರುವ ತಾಂತ್ರಿಕತೆ ಮತ್ತು ಜಾಗತಿಕ ಚಲನಶೀಲತೆಗಳು ಕೈಗಾರಿಕೆ ಮತ್ತು ವೃತ್ತಿಗಳನ್ನು ಅಭೂತಪೂರ್ವ ವೇಗದಲ್ಲಿ ಬದಲಾಯಿಸುತ್ತಿವೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಕುತೂಹಲ ಮತ್ತು ಕಲಿಯುವ ಬಯಕೆಯನ್ನ ಜೀವಂತವಾಗಿರಿಸಿಕೊಳ್ಳಬೇಕು. ಹೊಸತನ್ನ ಕಲಿತು ಬದಲಾಗುತ್ತಿರುವ ಜಗತ್ತಿನಲ್ಲಿ ಯಶಸ್ವಿಯಾಗಬೇಕು. ಪರಿಹಾರ ಹುಡುಕಿಕೊಳ್ಳುವ ಧೈರ್ಯ ಇದ್ದವರಿಗೆ ಸವಾಲುಗಳೇ ಅವಕಾಶಗಳಾಗಬಹುದು ಎಂದರು.
ಇಂದು, ಜಗತ್ತು ವೇಗವಾಗಿ ಬೆಳೆಯುತ್ತಿದೆ, ಬದಲಾಗುತ್ತಿದೆ. ಮುಂದಿನ 20-30 ವರ್ಷಗಳ ನಂತರ ಏನಾಗುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ನಿಮ್ಮ ಕುತೂಹಲವನ್ನ ಜೀವಂತವಾಗಿರಿಸಿಕೊಳ್ಳಿ. ನಿಮ್ಮ ಕಲಿಕೆಯ ಪ್ರವೃತ್ತಿಯನ್ನ ಜೀವಂತವಾಗಿರಿಸಿಕೊಳ್ಳಿ. ಸದಾ ಕಲಿಯುವವರು ಗೆಲ್ಲುತ್ತಾರೆ ಎಂದು ಕಿವಿಮಾತು ಹೇಳಿದರು.
ಪ್ರತಿಯೊಂದು ಪೀಳಿಗೆಯೂ ತನ್ನದೇ ಆದ ಸವಾಲುಗಳನ್ನ ಎದುರಿಸುತ್ತಿದ್ದು, ಮುಂದಿನ 3-4 ದಶಕಗಳಲ್ಲಿ ಅವರ ನಿರ್ಧಾರಗಳು ಮತ್ತು ಕೊಡುಗೆಗಳು ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ನಿರ್ಧಾರ, ಜೀವನ ನಮ್ಮ `ವಿಕಸಿತ್ ಭಾರತ್’ ಗುರಿಯ ಮೇಲೆ ಪರಿಣಾಮ ಬೀರಲಿದೆ ಎಂದು ಜೆನ್-ಝಿಗಳನ್ನು ಕುರಿತು ಹೇಳಿದರು.
ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುವಾಗ ರಾಷ್ಟ್ರೀಯ ಹಿತಾಸಕ್ತಿಯನ್ನು ಪರಿಗಣಿಸಿ, ಜೊತೆಗೆ ದೇಶದ ಅಗತ್ಯಗಳನ್ನ ಪೂರೈಸಲು ನಿಮ್ಮ ಕೆಲಸವು ಹೇಗೆ ಕೊಡುಗೆ ನೀಡುತ್ತೆ ಅನ್ನೋದನ್ನ ನೀವೇ ಪ್ರಶ್ನಿಸಿಕೊಳ್ಳಿ ಎಂದು ಹೇಳಿದರು.
ಇಂದು ಜಾಗತಿಕ ಕಾರ್ಯತಂತ್ರದ ಸಮೀಕರಣವು ವೇಗವಾಗಿ ಬದಲಾಗುತ್ತಿದೆ. ಜಾಗತಿಕ ಶಕ್ತಿ ಸಮತೋಲನವು ಕ್ಷಣಾರ್ಧದಲ್ಲಿ ವಿಕಸನಗೊಳ್ಳುತ್ತಿದೆ. ಸ್ಪರ್ಧಾತ್ಮಕ ಜಗತ್ತಿಗೆ ಪ್ರವೇಶಿಸುವ ಪದವೀಧರರು ತಂತ್ರಜ್ಞಾನ, ಕೈಗಾರಿಕೆಗಳು ಮತ್ತು ವೃತ್ತಿ ಮಾರ್ಗಗಳಲ್ಲಿ ಪ್ರಮುಖ ಪರಿವರ್ತನೆಗಳಿಗೆ ಸಾಕ್ಷಿಯಾಗುತ್ತಾರೆ. ಕೆಲಸದ ಸ್ವರೂಪ ಗಮನಾರ್ಹವಾಗಿ ಬದಲಾಗಬಹುದಾದರೂ, ನಿರಂತರ ಕಲಿಕೆಯು ಪ್ರಸ್ತುತವಾಗಿರಲು ಮತ್ತು ಭವಿಷ್ಯದಲ್ಲಿ ಯಶಸ್ವಿಯಾಗಲು ನಿರ್ಣಾಯಕವಾಗಿರುತ್ತದೆ ಎಂದು ಹೇಳಿದರು.
ಭಾರತದ ಯುವ ಪ್ರತಿಭೆಗಳಿಗೆ ಸಂಶೋಧನೆ ಮತ್ತು ನಾವೀನ್ಯತೆಯು ಪ್ರಮುಖ ಅವಕಾಶವಾಗಿದೆ. ಹಾಗಾಗಿ ಪದವೀಧರರು ದೇಶದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ಕೊಡುಗೆ ನೀಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಶೋಧನೆ ಮುಂದುವರಿಸಲು ಅವಕಾಶ ಒದಗಿಸುವ ಪ್ರಧಾನ ಮಂತ್ರಿಗಳ ʻಸಂಶೋಧನಾ ಫೆಲೋಶಿಪ್ʼ ಸೇರಿದಂತೆ ಯುವ ಸಂಶೋಧಕರನ್ನ ಪ್ರೋತ್ಸಾಹಿಸುವ ಗುರಿ ಹೊಂದಿರುವ ಹಲವಾರು ಸರ್ಕಾರಿ ಉಪಕ್ರಮಗಳ ಬಗ್ಗೆ ಗಮನ ಸೆಳೆದರು.








