Friday, May 10, 2024
spot_imgspot_img
spot_imgspot_img

ಜ್ಞಾನವಾಪಿ ಮಸೀದಿ ವಿವಾದ; ನವೆಂಬರ್ 14ಕ್ಕೆ ವಿಚಾರಣೆ ಮುಂದೂಡಿಕೆ

- Advertisement -G L Acharya panikkar
- Advertisement -

ವಾರಣಾಸಿ: ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯ ಆವರಣದ ಒಳಗೆ ಶಿವಲಿಂಗ ಪತ್ತೆಯಾದ ಹಿನ್ನೆಲೆಯಲ್ಲಿ ಆರಾಧನೆಗೆ ಅವಕಾಶ ನೀಡಬೇಕೆಂದು ಹಿಂದೂ ಸಂಘಟನೆಗಳು ಮಾಡಿರುವ ಮನವಿ ಹಿನ್ನಲೆಯಲ್ಲಿ ಎದ್ದಿರುವ ವಿವಾದ ಕುರಿತು ವಾರಣಾಸಿಯ ತ್ವರಿತ ನ್ಯಾಯಾಲಯ ಮಂಗಳವಾರ ನವೆಂಬರ್ 14ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಸಂಬಂಧಪಟ್ಟ ನ್ಯಾಯಾಧೀಶರು ಇಂದು ತ್ವರಿತ ನ್ಯಾಯ ವಿಲೇವಾರಿ ಕೋರ್ಟ್‌ನಲ್ಲಿ ಹಾಜರಿರದ ಕಾರಣ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಲಾಗಿದೆ. ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರರ ಆರಾಧನೆಗೆ ಕೂಡಲೇ ಅನುಮತಿ ನೀಡಬೇಕು, ಇಡೀ ಜ್ಞಾನವಾಪಿ ಸಂಕೀರ್ಣವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಮತ್ತು ಮುಸಲ್ಮಾನರನ್ನು ಜ್ಞಾನವಾಪಿ ಸಂಕೀರ್ಣದೊಳಗೆ ಬಿಡಬಾರದು ಎಂಬ ಪ್ರಮುಖ ಮೂರು ಬೇಡಿಕೆಗಳಿಗೆ ಸಂಬಂಧಪಟ್ಟಂತೆ ತ್ವರಿತ ನ್ಯಾಯಾಲಯ ಇಂದು ತೀರ್ಪು ನೀಡಬೇಕಾಗಿತ್ತು. ಪ್ರಸ್ತುತ ಮುಸ್ಲಿಮರಿಗೆ ಮಸೀದಿಯೊಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಕಳೆದ ತಿಂಗಳು ಅಕ್ಟೋಬರ್ ನಲ್ಲಿ ನಡೆಸಿದ ವಿಚಾರಣೆ ವೇಳೆ ಶಿವಲಿಂಗವನ್ನು ವೈಜ್ಞಾನಿಕ ತಪಾಸಣೆ ನಡೆಸಲು ವಾರಣಾಸಿ ಕೋರ್ಟ್ ಅವಕಾಶ ನೀಡಲು ನಿರಾಕರಿಸಿತು.

ಮಸೀದಿಯೊಳಗಿನ ಕಟ್ಟಡ ರಚನೆಗಳ ಮೇಲೆ ಕಾರ್ಬನ್ ಡೇಟಿಂಗ್ ನಡೆಸಲು ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಜ್ಞಾನವಾಪಿ ಮಸೀದಿಯ ವಾಝುಖಾನ ಒಳಗೆ ಶಿವಲಿಂಗವಿದೆ ಎಂಬುದು ಅವರ ವಾದವಾಗಿದೆ. ಆದರೆ ಅಲ್ಲಿ ಶಿವಲಿಂಗವಿಲ್ಲ, ಅದೊಂದು ನೀರಿನ ಬುಗ್ಗೆಯಾಗಿದೆ ಎಂದು ಮುಸಲ್ಮಾನರ ವಾದವಾಗಿದೆ. ಶಿವಲಿಂಗವಿದೆ, ಹೀಗಾಗಿ ಮಸೀದಿಯನ್ನು ಕೆಡವಿ ದೇವಾಲಯಕ್ಕೆ, ಪೂಜೆ-ಪುನಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಹಿಂದೂ ಸಂಘಟನೆಗಳು ಸೆಪ್ಟೆಂಬರ್ 22ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಶಿವಲಿಂಗವಿದೆ ಎಂದು ಹೇಳುವ ಜಾಗದಲ್ಲಿ ಕಾರ್ಬನ್ ಡೇಟಿಂಗ್ ಮಾಡಬೇಕೆಂಬುದು ಹಿಂದೂ ಸಂಘಟನೆಗಳ ವಾದವಾಗಿದೆ. ಒಂದು ವೇಳೆ ಶಿವಲಿಂಗದ ಕಾರ್ಬನ್ ಡೇಟಿಂಗ್ ಮಾಡಲು ನಿರಾಕರಿಸಿದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಕೂಡ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ. ಕಾರ್ಬನ್ ಡೇಟಿಂಗ್ ಎಂಬುದು ವೈಜ್ಞಾನಿಕ ಪ್ರಕ್ರಿಯೆಯಾಗಿದ್ದು ಪುರಾತತ್ವ ವಸ್ತುಗಳು ಅಥವಾ ಪುರಾತತ್ವ ರಚನೆಗಳು, ಪಳೆಯುಳಿಕೆಗಳು ಪತ್ತೆಯಾದರೆ ಅವುಗಳು ಎಷ್ಟು ವರ್ಷ ಹಳೆಯದು, ಎಷ್ಟು ವರ್ಷಗಳಾಗಿವೆ ಎಂದು ಪತ್ತೆ ಹಚ್ಚುತ್ತದೆ.

- Advertisement -

Related news

error: Content is protected !!