ತಿಪಟೂರು: ಕ್ರಿಶ್ಚಿಯನ್ ಮಿಷನರಿಯ ಸದಸ್ಯರು ಸ್ಥಳೀಯರನ್ನು ಮತಾಂತರ ಮಾಡಲು ಆಮಿಷ ನೀಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರು ನೀಡಿದ್ದು ಸಭೆ ನಡೆಸುತ್ತಿದ್ದ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ತಿಪಟೂರಿನಲ್ಲಿ ನಡೆದಿದೆ.

ತಿಪಟೂರುನಗರದ ವಾರ್ಡ್ 31 ರ ಗೊರಗೊಂಡನ ಹಳ್ಳಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಹಿಂದುಳಿದ ವರ್ಗದವರು, ಕಡು ಬಡವರನ್ನು ಒಟ್ಟಾಗಿ ಸೇರಿಸಿ ಅವರಿಗೆ ಹಣ, ಆರೋಗ್ಯ, ಮನೆ, ಸೈಟು ಇತ್ಯಾದಿಗಳನ್ನು ನೀಡುವುದಾಗಿ ತಿಳಿಸಿ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂಬುದನ್ನು ಸ್ಥಳೀಯರು ವಿಡಿಯೋ ಮೂಲಕ ಹರಿಬಿಟ್ಟಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದವರ ವಿಡಿಯೋ ಚಿತ್ರೀಕರಣ ಮಾಡಿರುವ ಸ್ಥಳೀಯರು ಅವರಿಂದಲೇ ಯಾವ-ಯಾವ ಆಮಿಷಗಳನ್ನು ನೀಡಿದ್ದಾರೆ ಎಂಬುದನ್ನು ಹೇಳಿಸಿದ್ದಾರೆ. ಅಲ್ಲದೇ ಪೊಲೀಸರಿಗೂ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ನಗರಠಾಣೆಯ ಇನ್ಸ್‍ಪೆಕ್ಟರ್ ತಂಡ ಆಗಮಿಸಿ ಸಭೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.

ಸ್ಥಳೀಯರ ವಿಡಿಯೋದಲ್ಲಿ ಮನೊಯೊಂದರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ ಎಂಬುದಾಗಿ ತಿಳಿಸಿದ್ದು ಇಲ್ಲಿ ಹಿಂದೂಪುರದಿಂದ ವ್ಯಕ್ತಿಯೋರ್ವ ಆಗಮಿಸಿದ್ದು ಆತ ಹಣವನ್ನು ನೀಡಲು ಬಂದಿದ್ದ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಮನೆಗೆ ತೆರಳಿದ ಗ್ರಾಮಸ್ಥರಿಗೆ ಇಲ್ಲದ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೂ ಅವರನ್ನೆಲ್ಲಾ ದೂರು ನೀಡಿ ಪೊಲೀಸರ ವಶಕ್ಕೆ ನೀಡಿದ್ದಾರೆ.

