



ಚಿಕ್ಕಮಗಳೂರು: ದತ್ತ ಜಯಂತಿ ಹಿನ್ನಲೆಯಲ್ಲಿ ದತ್ತಪೀಠಕ್ಕೆ ಭಕ್ತರು ಸಾಲು ಸಾಲಾಗಿ ಆಗಮಿಸುತ್ತಿದ್ದು, ಭಕ್ತಾದಿಗಳ ಪ್ರಯಾಣಕ್ಕೆ ಕಿಡಿಗೇಡಿಗಳು ಅಡ್ಡಿಪಡಿಸುವ ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯೆ ರಸ್ತೆ ಉದ್ದಕ್ಕೂ ಮೊಳೆಗಳನ್ನು ಹಾಕಲಾಗಿದ್ದು , ವಾಹನ ಪಂಕ್ಚರ್ , ಅಪಘಾತಕ್ಕೀಡಾಗುವ ರೀತಿಯಲ್ಲಿ ಸಂಚು ರೂಪಿಸಿದ್ದಾರೆ ಎಂದು ಭಕ್ತಾದಿಗಳು ಆರೋಪಿಸಿದ್ದಾರೆ.
ದರ್ಶನಕ್ಕೆ ಅಡ್ಡಿಪಡಿಸುವ ಹಿನ್ನೆಲೆ ದತ್ತಪೀಠಕ್ಕೆ ತೆರಳುವ ರಸ್ತೆ ಉದ್ದಕ್ಕೂ ಮೊಳೆಗಳನ್ನು ಹಾಕಿ ಅಪಘಾತ ಸೃಷ್ಠಿಸುವ ಹುನ್ನಾರ ನಡೆದಿತ್ತು. ಕೈಮರ ಚೆಕ್ ಪೋಸ್ಟ್ ನಿಂದ ದತ್ತಪೀಠದ ರಸ್ತೆಯ ಉದ್ದಕ್ಕೂ ಮೊಳೆಗಳನ್ನು ಹಾಕಲಾಗಿದ್ದು, ಕಿಡಿಕೇಡಿಗಳ ಕೃತ್ಯಕ್ಕೆ ಶಾಸಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದಿನಿಂದ ದತ್ತ ಜಯಂತಿ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು ಭಕ್ತರು ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ದತ್ತ ಜಯಂತಿಯ ಮೊದಲ ದಿನವಾದ ಇಂದು ಅನುಸೂಯ ಜಯಂತಿ ನಡೆಯಲಿದ್ದು, ಮಹಿಳೆಯರು ದತ್ತಪೀಠಕ್ಕೆ ತೆರಳಿ ಅನುಸೂಯ ಜಯಂತಿಯ ಆಚರಣೆ ನಡೆಯಲಿದೆ.