Monday, April 29, 2024
spot_imgspot_img
spot_imgspot_img

ಪುತ್ತೂರು: ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ, ಹಿರಿಯ ಪತ್ರಕರ್ತ ಬಿ.ಟಿ. ರಂಜನ್ ನಿಧನ

- Advertisement -G L Acharya panikkar
- Advertisement -

ಪುತ್ತೂರು: ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ , ಹಿರಿಯ ಪತ್ರಕರ್ತ, ಹೊಸದಿಂಗತ ಪತ್ರಿಕೆಯ ವರದಿಗಾರ ಬಿ.ಟಿ‌. ರಂಜನ್ ಎಂದೇ ಖ್ಯಾತರಾಗಿದ್ದ ಉಪ್ಪಿನಂಗಡಿ ರಥಬೀದಿ ನಿವಾಸಿ ಬಂಟ್ವಾಳ ತೋನ್ಸೆ ಶೆಣೈ (60) ಫೆ. 5 ರಂದು ಬೆಳಿಗ್ಗೆ ಇಹಲೋಕ ತ್ಯಜಿಸಿದರು. ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕಳೆದ ಎರಡು –ಮೂರು ದಿನಗಳಿಂದ ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ರಂಜನ್ ಅವರಿಗೆ ನಿನ್ನೆ ( ಫೆ. 4) ಬೆಳಿಗ್ಗೆಯಿಂದ ಜ್ವರವು ಕಾಣಿಸಿಕೊಂಡು ಆರೋಗ್ಯದಲ್ಲಿ ವಿಪರೀತ ಏರುಪೇರು ಕಾಣಿಸಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಮಧ್ಯಾಹ್ನದ ವೇಳೆ ಆರೋಗ್ಯ ಇನ್ನಷ್ಟು ವಿಷಮಿಸಿದ ಹಿನ್ನಲೆಯಲ್ಲಿ ಅವರು ಅಂಬ್ಯುಲೆನ್ಸ್ ಸಹಾಯದಿಂದ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ‌ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ.

vtv vitla
vtv vitla

ಮೂರು ದಶಕಕ್ಕೂ ಅಧಿಕ ಕಾಲದಿಂದ ಪತ್ರಿಕಾ ರಂಗದಲ್ಲಿ ವ್ಯವಸಾಯ ಮಾಡುತ್ತಿದ್ದ ರಂಜನ್ ರವರು ಪತ್ರಿಕಾ ರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಪುತ್ತೂರಿನ ಅಗ್ರಗಣ್ಯ ಪತ್ರಕರ್ತ. ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹತ್ತು ಹಲವು ಪುರಸ್ಕಾರ, ಪ್ರಶಸ್ತಿ ಸನ್ಮಾನಗಳು ಸಂದಿವೆ.

ಬಿ.ಟಿ. ರಂಜನ್ ರವರು ಕರಾವಳಿಯ ಪತ್ರಿಕಾ ಲೋಕದ ಪ್ರಖ್ಯಾತ ಹೆಸರಾದ ವಡ್ಡರ್ಸೆ ರಘುರಾಮ ಶೆಟ್ಟಿಯವರ ಒಡೆತನದ ಮುಂಗಾರು ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸುವ ಮೂಲಕ ಒಡ್ಡರ್ಸೆ ಗರಡಿಯಲ್ಲಿ ಪಳಗಿ, ಬಳಿಕ ವೃತ್ತಿ ಜೀವನವನ್ನು ಮಂಗಳೂರು ಮಿತ್ರ, ಹೊಸ ದಿಂಗತ ಪತ್ರಿಕೆಯಲ್ಲಿ ಒಂದಷ್ಟು ವರ್ಷ ಮುಂದುವರಿಸಿದವರು. 26 ವರ್ಷಗಳ ಸುದೀರ್ಘ ಕಾಲ ಉದಯವಾಣಿ ಪತ್ರಿಕೆಯಲ್ಲಿ ವಿವಿಧ ಸ್ಥರದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದ ಹೆಗ್ಗಳಿಕೆ ಅವರದು. ಈ ಸಂದರ್ಭ ಉದಯವಾಣಿಯ ಸುದಿನ ಪುತ್ತೂರು ಆವೃತ್ತಿಯನ್ನು ಪರಿಣಾಮಕಾರಿಯಾಗಿ ಕಟ್ಟಿ ಬೆಳೆಸುವ ಮೂಲಕ ಸುಳ್ಯ ಪುತ್ತೂರಿನ ನಂಬರ್ 1 ಪತ್ರಿಕೆಯನ್ನಾಗಿಸಲು ಕಾರಣೀಭೂತರಾಗಿದ್ದರು. 2017ರಲ್ಲಿ ಉದಯವಾಣಿಗೆ ರಾಜೀನಾಮೆ ನೀಡಿದ ಬಳಿಕ ಮತ್ತೆ ಹೊಸದಿಂಗತ ಪತ್ರಿಕೆಯಲ್ಲಿ ವರದಿಗಾರರಾಗಿ ದುಡಿಯುತ್ತಿದ್ದರು.

ಜನಪರ ಕಾಳಜಿಯ ವರದಿಗಾರ:

ಶೋಷಿತರಿಗೆ, ಬಡವರಿಗೆ, ಕೃಷಿಕರಿಗೆ, ಅಟೋ ಚಾಲಕರಿಗೆ ಹೀಗೆ ನಾನಾ ಸ್ಥರದ, ವಿವಿಧ ವೃತ್ತಿ ನಿರ್ವಹಿಸುವ ಜನರ ಸಮಸ್ಯೆ ಸಂಕಟ ಅಸಹಯಕತೆಗಳಿಗೆ ತಮ್ಮ ವರದಿಯ ಮೂಲಕ ಧ್ವನಿಯಾದವರು. ಪುತ್ತೂರಿನ ಸಾಮಾನ್ಯ ಜನತೆಯ ಅಹವಾಲುಗಳನ್ನು ತನ್ನ ಪ್ರಖರ ಹಾಗೂ ತೀಕ್ಷ್ಣ ವರದಿಯ ಮೂಲಕ ಆಳುವ ವರ್ಗಕ್ಕೆ ಹಾಗೂ ಆಡಳಿತಶಾಹಿಗೆ ಎಚ್ಚರಿಸಿ ಕೆಲಸ ಆಗುವಂತೆ ನೋಡಿಕೊಂಡವರು.

ಸರಳ ಪದಗಳ ಮೂಲಕ ನಿಖರತೆಯಿಂದ ಬರೆಯುತ್ತಿದ ರಂಜನ್ ಅವರ ವರದಿಗಾರಿಕೆ ಓದುಗರನ್ನು ಸಮ್ಮೋಹನಗೊಳಿಸುವ ಗುಣ ಹೊಂದಿತ್ತು. ತನ್ನ ವಿದ್ವತ್ ಪ್ರದರ್ಶನಕ್ಕೆ ಶಬ್ಧ ಬಂಡಾರದಿಂದ ಕಠಿಣ ಶಬ್ದಗಳನ್ನು ತಂದು ವರದಿಗಳನ್ನು ಕಬ್ಬಿಣದ ಕಡಲೆಯಾಗಿಸುವ ವರದಿಗಾರರಿಗಿಂತ ಭಿನ್ನವಾದ ಸಾಮಾನ್ಯ ಓದುಗನಿಗೂ ಒಂದೇ ಓದಿನಲ್ಲಿ ಅರ್ಥವಾಗುವ ರೀತಿಯಲ್ಲಿ ಸರಳ ಪದಗಳನ್ನು ಬಳಸಿ ತೀಕ್ಷ್ಣವಾಗಿ ಬರೆಯುವ ರಂಜನ್ ಶೈಲಿಗೆ ಓದುಗರು ಮಾರು ಹೋಗಿದ್ದರು. ರಾಜಕೀಯ ಪಕ್ಷಗಳ ಒಳ ಹೊರಗನ್ನು ಸೂಕ್ಷ್ಮವಾಗಿ ಗಮನಿಸಿ, ಪಕ್ಷದೊಳಗಿನ ಭಿನ್ನ ಮತ, ಒಳ ಸುಳಿ ಮರ್ಮಗಳನ್ನು ಚತುರತೆಯಿಂದ ಅರಿತುಕೊಂಡು ಅವರು ಮಾಡುತ್ತಿದ್ದ ರಾಜಕೀಯ ವರದಿಗಾರಿಕೆ ಚಾಣಾಕ್ಷ್ಯತೆಯಿಂದ ಕೂಡಿತ್ತು ಮಾತ್ರವಲ್ಲದೆ ಪ್ರಭಾವಶಾಲಿಯಾಗಿ ಮೂಡಿ ಬರುತ್ತಿತ್ತು. ಇವರ ವರದಿಗಾರಿಕೆಯಿಂದಲೇ ಹಲವು ಬಾರಿ ರಾಜಕೀಯ ಪಲ್ಲಟಗಳು ನೆಡೆಯುತ್ತಿದ್ದವು.


ಸಾಮಾಜಿಕ ಸಮಸ್ಯೆಗಳ ಹಾಗೂ ಧಾರ್ಮಿಕ ವಿಚಾರಗಳ ವರದಿಗಾರಿಕೆಗೂ ಅವರದು ಎತ್ತಿದ ಕೈ. ದೇವಾಲಯಗಳ ಉತ್ಸವ ಸಂದರ್ಭ ಆಯಾಯ ದೇಗುಲಗಳ ಐತಿಹ್ಯ ಕಾರಣಿಕತೆ ಹಾಗೂ ಅದರ ನಿರ್ಮಾಣದ ಬಗ್ಗೆ ಅವರು ಬರೆಯುತ್ತಿದ್ದ ಅಧ್ಯಯನಪೂರ್ಣ ವರದಿಗಳು ಅಲ್ಲಿನ ಭಕ್ತರಿಗೆ, ಓದುಗರಿಗೆ ಸಂಗ್ರಹಯೋಗ್ಯ ಎನಿಸಿಕೊಳ್ಳುತ್ತಿತ್ತು. ವರದಿಯಲ್ಲಿನ ನಿಖರತೆ ಹಾಗೂ ಶಬ್ದಗಳ ಆಯ್ಕೆಯಿಂದಾಗಿ ದೇವಾಲಯದ ಮಟ್ಟಿಗೆ ನಿಶ್ಚಿತ ದಾಖಲೆಯಾಗಿ ಉಳಿಯುತ್ತಿತ್ತು. ಸಮಾಜ ಎದುರಿಸುತ್ತಿದ ಜ್ವಲಂತ ಸಮಸ್ಯೆಗಳ ಬಗ್ಗೆ ಸರಣಿಯಾಗಿ ಫಾಲೋ ಅಪ್ ವರದಿಗಳನ್ನು ಮಾಡುವ ಮೂಲಕ ಇಲಾಖೆಗಳನ್ನು ಬೆಂಡೆತ್ತಿ ಜನರಿಗೆ ಉಪಕಾರಿಯಾಗಿದ್ದರು. ತನ್ಮೂಲಕ ಸಾಮಾಜಿಕ ಸಮಸ್ಯೆಗಳ ವರದಿಗಾರಿಕೆಗೆ ಹೊಸ ಆಯಾಮವನ್ನೇ ಒದಗಿಸಿದರು. ರಂಜನ್ ಅವರ ಅದ್ಬುತ ಜ್ಞಾಪಕ ಶಕ್ತಿ ಎಂತವರೂ ಮಾರುಹೋಗಲೇಬೇಕು. ಯಾವುದೇ ಒಂದು ವಿಷಯ ಪ್ರಸ್ತಾಪಿಸಿದರೆ ಇಸವಿ, ದಿನಾಂಕ ಸಹಿತ ಹರಾರುವಕ್ಕಾಗಿ ವಿವರಿಸುವುದು ಅವರ ಜ್ಞಾಪಕ ಶಕ್ತಿಗೆ ಹಿಡಿದ ಕೈಗನ್ನಡಿ.

ರಂಜನ್’ರವರ ಕ್ರೈಂ ವರದಿಗಾರಿಕೆ ಅವರ ಪತ್ರಕರ್ತ ಜೀವನದ ವಿಶಿಷ್ಟ ಮಜಲು. ಕೊಲೆ, ದರೋಡೆ, ಕಳ್ಳತನ ಇತ್ಯಾದಿ ಪ್ರಕರಣಗಳಾದಾಗ ಅದರಲ್ಲಿನ ನಿಗೂಢತೆಯನ್ನು ತನ್ನ ಒಳನೋಟದ ಮೂಲಕ ಗ್ರಹಿಸಿ, ಅದನ್ನು ಅಷ್ಟೇ ರೋಚಕವಾಗಿ ಓದುಗರಿಗೆ ಉಣಬಡಿಸುವ ಕಲೆ ಅವರಿಗೆ ಕರಗತವಾಗಿದೆ. ಅವರ ವರದಿ ತನಿಖಾಧಿಕಾರಿಗೂ ಪ್ರಕರಣ ಭೇದಿಸಲು ಸಹಕರಿಸುತಿತ್ತು.

vtv vitla
vtv vitla
- Advertisement -

Related news

error: Content is protected !!