ಬಂಟ್ವಾಳ: ಬೈಕಿನಲ್ಲಿ ಹಿಂಬಾಳಿಸಿಕೊಂಡು ಬಂದ ದುಷ್ಕರ್ಮಿಗಳಿಂದ ಯುವಕನೋರ್ವನಿಗೆ ಚೂರಿ ಇರಿದು ಪರಾರಿಯಾದ ಘಟನೆ ಬಿ.ಸಿ ರೋಡಿನಲ್ಲಿ ನಡೆದಿದೆ.

ಬ್ರಹ್ಮರಕೋಟ್ಲು ವಳವೂರು ನಿವಾಸಿ ಮನೋಜ್ ಸಪಲ್ಯ (30) ಎಂಬಾತ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ.

ತುಂಬೆಯಿಂದ ಮನೋಜ್ ರವರು ಬಿಸಿರೋಡು ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿ ಗಳು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದರು.

ಇದನ್ನು ಗಮನಿಸಿದ ಮನೋಜ್ ಬಿಸಿರೋಡಿಗೆ ಆಗಮಿಸುತ್ತಿದ್ದಂತೆ ಅಜ್ಜಿಬೆಟ್ಟು ಕ್ರಾಸ್ ನೊಳಗೆ ಬೈಕನ್ನು ತಿರುಗಿಸಿ ಅಂಗಡಿಯೊಂದರ ಮುಂಭಾಗದಲ್ಲಿ ನಿಲ್ಲಿಸಿದರು. ಆದರೆ ಬೈಕಿನಲ್ಲಿ ಹಿಂಬಾಳಿಸಿಕೊಂಡು ಬಂದ ದುಷ್ಕರ್ಮಿಗಳು ನಿಲ್ಲಿಸದಲ್ಲೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.

ಗಾಯಗೊಂಡ ಮನೋಜ್ ರವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೋಜ್ ರವರು ವಿದೇಶದಲ್ಲಿ ಸಿವಿಲ್ ಇಂಜಿನಿಯರಿಂಗ್ ಉದ್ಯೋಗದಲ್ಲಿದ್ದು ಎರಡು ವಾರಗಳ ಹಿಂದೆಯಷ್ಟೆ ಊರಿಗೆ ಬಂದಿದ್ದರು.

ಘಟನಾ ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ನಗರ ಪೋಲೀಸ್ ಠಾಣಾ ಇನ್ಸ್ ಪೆಕ್ಟರ್ ಚೆಲುವರಾಜ್ ಬೇಟಿ ನೀಡಿ ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.










