


ಬೆಂಗಳೂರು:ಶಿವಾಜಿನಗರದಲ್ಲಿ ಸಾರ್ವಜನಿಕರ ಕಾಲ್ನಡಿಗೆಗೆ ಅಡ್ಡಿಯಾಗಿದ್ದ ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸಲು ತೆರಳಿದ್ದ ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ / GBA) ಅಧಿಕಾರಿಗಳ ಮೇಲೆ ಪುಂಡರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.
ಕಾಲ್ನಡಿಗೆ ದಾರಿಯನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರ ವಿರುದ್ಧ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳನ್ನು ಕಂಡು ಕೆರಳಿದ ಸ್ಥಳೀಯ ವ್ಯಾಪಾರಿಗಳು ಹಾಗೂ ಪುಂಡರ ಗುಂಪು, ಅಧಿಕಾರಿಗಳ ಮೇಲೆ ಏಕಾಏಕಿ ಮುಗಿಬಿದ್ದಿದೆ. ಅಧಿಕಾರಿಗಳಿಗೆ ಕಪಾಳಮೋಕ್ಷ ಮಾಡಿ, ಗುದ್ದಿ, ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಕರ್ತವ್ಯನಿರತ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 10 ಜನರನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆಯಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪುಂಡಾಟಿಕೆ ನಡೆಸಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.








