Friday, May 3, 2024
spot_imgspot_img
spot_imgspot_img

ಬಂಟ್ವಾಳ: ವರದಕ್ಷಿಣೆ ತರುವಂತೆ ಪೀಡಿಸಿ ದೈಹಿಕ ಹಲ್ಲೆ; ಪತಿ ಸಹಿತ ಐವರ ವಿರುದ್ದ ದೂರು ದಾಖಲು

- Advertisement -G L Acharya panikkar
- Advertisement -
vtv vitla

ಪುಂಜಾಲಕಟ್ಟೆ: ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪದಲ್ಲಿ ಪತಿಯ ಕುಟುಂಬದ ವಿರುದ್ಧ ಯುವತಿಯೋರ್ವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಕಾಪಿಗುಡ್ಡೆ ನಿವಾಸಿ ದಿ.ವಿನ್ಸೆಂಟ್ ಲೋಬೋ ಅವರ ಪುತ್ರ ಕಿರಣ್ ಲೋಬೊ(32)ನೊಂದಿಗೆ ಮೂಲತಃ ಅಸ್ಸಾಂ ಮೂಲದವರಾದ ಶಿಲ್ಪಿ ಚಾಸಾ(25) ಅವರಿಗೆ 2021 ಜ.2ರಂದು ಸಿದ್ದಕಟ್ಟೆಯಲ್ಲಿ ವಿವಾಹವಾಗಿತ್ತು. ವಿವಾಹ ನಂತರ ಪತಿಯ ಮನೆಯಲ್ಲಿ ವಾಸವಿದ್ದು, ಮದುವೆಯಾದ ಮರುದಿನದಿಂದ ಪತಿ ಕಿರಣ್ ಲೋಬೋ ಸಹಿತ ಪತಿಯ ಮನೆಯವರಾದ ರೀಟಾ ಲೋಬೊ, ಹಿಲ್ಡಾ ಲೋಬೊ, ಐಡಾ ಲೊಬೊ, ವಾಲ್ಟರ್ ಲೋಬೊ ಅವರು ತನ್ನ ಮನೆಯಿಂದ ಹಣ ಮತ್ತು ಚಿನ್ನಾಭರಣವನ್ನು ವರದಕ್ಷಿಣೆಯಾಗಿ ತಂದು ಕೊಡಲಿಲ್ಲ ಎಂಬುದಾಗಿ ಪೀಡಿಸುತ್ತಿದ್ದಲ್ಲದೆ ದೈಹಿಕವಾಗಿ ಹಲ್ಲೆ ನಡೆಸಿ, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಶಿಲ್ಪಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮದುವೆಯ 2 ತಿಂಗಳ ನಂತರ ಪತಿ ಕಿರಣ್ ಲೋಬೊ ವರದಕ್ಷಿಣೆ ತರುವಂತೆ ನಿರಂತರ ಮಾನಸಿಕ ಹಿಂಸೆಯನ್ನು ನೀಡಲು ಪ್ರಾರಂಭಿಸಿದ್ದ. ಮದುವೆ ಬಳಿಕ ಶಿಲ್ಪಿ ಅವರ ಸ್ವಂತ ಊರಾದ ಅಸ್ಸಾಂನಲ್ಲಿ ಅವರ ಪೋಷಕರು ಔತಣ ಕೂಟ ಏರ್ಪಡಿಸಿದ್ದು, ಶಿಲ್ಪಿ ಅವರು ತನ್ನ ಗಂಡನ ಮನೆಯವರನ್ನು ಬರುವಂತೆ ಕೋರಿಕೊಂಡಾಗ ಆರೋಪಿಗಳು ಔತಣಕೂಟಕ್ಕೆ ಬರಬೇಕಾದರೆ 50 ಸಾವಿರ ರೂ.ಹಣವನ್ನು ನೀಡುವಂತೆ ಪೀಡಿಸಿದ್ದರು. ಈ ಸಮಯದಲ್ಲಿ ಹಣವನ್ನು ಹೊಂದಿಸಲು ಅನಾನೂಕೂಲವಾಗುತ್ತಿರುವ ಬಗ್ಗೆ ತಿಳಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ. ಆದರೂ ಶಿಲ್ಪಿ ಅವರು ತನ್ನ ತಾಯಿ ಹಾಗೂ ಅಕ್ಕನಿಂದ ಹಣವನ್ನು ಪಡೆದು ಗಂಡನಿಗೆ ನೀಡಿದ್ದರು. ಔತಣ ಕೂಟವಾದ ಬಳಿಕವೂ ಆರೋಪಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಯನ್ನು ನೀಡುವುದನ್ನು ಮುಂದುವರೆಸಿದ್ದಲ್ಲದೇ, ಅನಾರೋಗ್ಯ ಪೀಡಿತಳಾದ ಸಮಯ ಚಿಕಿತ್ಸೆಯನ್ನು ಕೂಡ ಕೊಡಿಸದೇ ತೊಂದರೆ ನೀಡಿದ್ದರು. ಕೆಲವು ಸಮಯ ಶಿಲ್ಪಿ ಅವರನ್ನು ಮನೆಯೊಳಗೆ ಗೃಹಬಂಧನದಲ್ಲಿರಿಸಿ ಆರೋಪಿಗಳು ಹೊರಗಡೆ ಹೋಗುತ್ತಿದ್ದರು. ಈ ವೇಳೆ ಆರೋಪಿಗಳಲ್ಲೋರ್ವನಾದ ವಾಲ್ಟರ್ ಲೋಬೋ ಎಂಬಾತನು ಶಿಲ್ಪಿ ಅವರಿಗೆ ಕರೆ ಮಾಡಿ ನಗ್ನ ವಿಡಿಯೋ ಕಳುಹಿಸುವಂತೆ ಪೀಡಿಸುತ್ತಾ ತೊಂದರೆ ನೀಡುತ್ತಿದ್ದು, ಈ ವಿಷಯವನ್ನು ತನ್ನ ಗಂಡ, ಅತ್ತೆಯವರ ಬಳಿ ತಿಳಿಸಿದರೂ ಸ್ಪಂದಿಸಿಲ್ಲ ಎಂದು ಶಿಲ್ಪಿ ಅವರು ಆರೋಪಿಸಿದ್ದಾರೆ.

ಶಿಲ್ಪಿ ಅವರು 2021ನೇ ಮಾರ್ಚ್ ಹಾಗೂ 2022ನೇ ಫೆಬ್ರವರಿ ತಿಂಗಳಲ್ಲಿ, ಗರ್ಭವತಿಯಾದಾಗ ಆರೋಪಿಗಳು ಅವರನ್ನು ಸಿದ್ದಕಟ್ಟೆಯ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಮಾತ್ರೆ ನೀಡಿದ್ದು ಈ ಕಾರಣದಿಂದ ಗರ್ಭಪಾತವಾಗಿರುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ನಂತರದ ದಿನಗಳಲ್ಲಿ ಆರೋಪಿಗಳು ವರದಕ್ಷಿಣೆಯನ್ನು ನೀಡುವಂತೆ ಪದೇ ಪದೇ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆಯನ್ನು ಮುಂದುವರೆಸಿದ್ದಲ್ಲದೇ, ಸೆ.26, ಅ.4 ಮತ್ತು ಅ.5ರಂದು ವಿಪರೀತವಾಗಿ ದೈಹಿಕವಾಗಿ ಹಲ್ಲೆ ನಡೆಸಿದ್ದು ಜೀವಬೆದರಿಕೆಯನ್ನು ಒಡ್ಡಿರುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ಈ ವಿಚಾರವನ್ನು ಶಿಲ್ಪಿ ತನ್ನ ತಾಯಿ ಮತ್ತು ಅಕ್ಕನಿಗೆ ತಿಳಿಸಿದ್ದು, ಅವರು ಅಸ್ಸಾಂನಿಂದ ಆಗಮಿಸಿ ಅ.7ರಿಂದ ಅ.9ರವರೆಗೆ ದೈಹಿಕ ಹಲ್ಲೆಯಿಂದಾಗಿ ಬಳಲಿದ ಶಿಲ್ಪಿ ಅವರನ್ನು ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಈ ಬಗ್ಗೆ ಅ.12ರಂದು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು, ಠಾಣಾಧಿಕಾರಿ ಸುತೇಶ್ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!