Saturday, April 27, 2024
spot_imgspot_img
spot_imgspot_img

ಮಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ತಾಯಿ ಸಹಿತ ಮೂವರಿಗೆ ಜೈಲು ಶಿಕ್ಷೆ

- Advertisement -G L Acharya panikkar
- Advertisement -
vtv vitla

ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್ಟಿಎಸ್‌ಸಿ-2 (ಪೋಕ್ಸೋ) ನ್ಯಾಯಾಲಯ ತೀರ್ಪು ನೀಡಿದೆ.

ಕೋಟೆಕಾರಿನ ಡೆರ್ವಿನ್‌ ಡಿಸೋಜಾ, ಸಂತ್ರಸ್ತೆ ಬಾಲಕಿಯ ತಾಯಿ ಮತ್ತು ಕಲ್ಲಾಪುವಿನ ಮೆಲ್ವಿನ್‌ ಡಿಸೋಜಾ ಶಿಕ್ಷೆಗೊಳಗಾದವರು.

ಪೈಂಟರ್‌ ವೃತ್ತಿಯ ಡೆರ್ವಿನ್‌ ಡಿಸೋಜಾ ಮಹಿಳೆಯೋರ್ವರ ಸ್ನೇಹ ಬೆಳೆಸಿಕೊಂಡು ಆಕೆಯ ಮನೆಗೆ ಹೋಗುತ್ತಿದ್ದ. ಆಕೆಗೆ ಆರ್ಥಿಕ ಸಹಾಯ ಮಾಡುತ್ತಿದ್ದ. ಬಳಿಕ ಮಹಿಳೆಯ ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಇದು ಸ್ಥಳೀಯರಿಗೆ ಗೊತ್ತಾಗಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅನಂತರ ಡೆರ್ವಿನ್‌ ಬಾಲಕಿಯನ್ನು ತನ್ನ ಸ್ನೇಹಿತ ಮೆಲ್ವಿನ್‌ನ ಮನೆಗೆ ಕರೆದೊಯ್ದು ಅಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದ. ಬಾಲಕಿ ಮನೆಯಿಂದ ಹೊರಗೆ ಹೋಗದಂತೆ ನೋಡಿಕೊಂಡಿದ್ದ. ಅಲ್ಲಿಯೂ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಬಗ್ಗೆ 2016ರ ಡಿಸೆಂಬರ್‌ನಲ್ಲಿ ಮಕ್ಕಳ ರಕ್ಷಣಾ ಘಟಕಕ್ಕೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ರಕ್ಷಣಾ ಘಟಕದವರು ಬಾಲಕಿಯನ್ನು ರಕ್ಷಿಸಿದ್ದರು. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ.ರಾಧಾಕೃಷ್ಣ ಅವರು ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ನ್ಯಾಯಾಧೀಶರು ಅಪರಾಧಿ ಡೆರ್ವಿನ್‌ ಡಿಸೋಜಾಗೆ ಪೋಕ್ಸೋ ಕಲಂ 6ರಡಿ 15 ವರ್ಷ ಕಠಿಣ ಸಜೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ವರ್ಷ ಹೆಚ್ಚುವರಿ ಸಜೆ, ಐಪಿಸಿ ಕಲಂ 366ರಂತೆ 7 ವರ್ಷ ಕಠಿಣ ಸಜೆ, 25,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 6 ತಿಂಗಳ ಸಜೆ, ಐಪಿಸಿ ಕಲಂ 343ರಂತೆ 2 ವರ್ಷ ಕಠಿಣ ಸಜೆ ವಿಧಿಸಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಮಹಿಳೆಗೆ ಪೋಕ್ಸೋ ಕಲಂ 17ರಡಿ 14 ವರ್ಷ ಕಠಿಣ ಸಜೆ, 25,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಸಜೆ ವಿಧಿಸಿದ್ದಾರೆ. ಮತ್ತೋರ್ವ ಅಪರಾಧಿ ಮೆಲ್ವಿನ್‌ಗೆ ಪೋಕ್ಸೋ ಕಲಂ 21ರಡಿ 6 ತಿಂಗಳ ಸಜೆ, 30,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಐದು ಲಕ್ಷ ರೂ. ಪರಿಹಾರ

ಸಂತ್ರಸ್ತ ಅಪ್ರಾಪ್ತ ಬಾಲಕಿಗೆ ಐದು ಲಕ್ಷ ರೂಪಾಯಿ ನೀಡುವಂತೆಯೂ ನ್ಯಾಯಾಧೀಶರು ಆದೇಶಿಸಿದ್ದಾರೆ. ಅದರಲ್ಲಿ 1 ಲ.ರೂ.ಗಳನ್ನು ತಕ್ಷಣ ನೀಡಬೇಕು. ಉಳಿದ 4 ಲ.ರೂ.ಗಳನ್ನು ಆಕೆಯ ಹೆಸರಿನ ರಾಷ್ಟ್ರೀಕೃತ ಬ್ಯಾಂಕ್‌ ಖಾತೆಗೆ ಜಮೆ ಮಾಡಿ ವಿದ್ಯಾಭ್ಯಾಸ ಮುಂದುವರಿಸಲು ಸಂದರ್ಭಾನುಸಾರ ವಿದ್‌ಡ್ರಾ ಮಾಡಲು ಅವಕಾಶ ನೀಡಬೇಕು ಎಂದು ನ್ಯಾಯಾಧೀಶರು ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದರು.

ಉಳ್ಳಾಲ ಠಾಣೆಯ ಇನ್ಸ್‌ಸ್ಪೆಕ್ಟರ್‌ ಸವಿತ್ರ ತೇಜಾ ಮತ್ತು ಕೆ.ಆರ್‌.ಗೋಪಿಕೃಷ್ಣ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

- Advertisement -

Related news

error: Content is protected !!