Saturday, April 20, 2024
spot_imgspot_img
spot_imgspot_img

ಮಂಗಳೂರು: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣ; ಆರೋಪಿಗಳಿಗೆ ಜೀವಾವಧಿ ಶಿಕ್ಷೆ

- Advertisement -G L Acharya panikkar
- Advertisement -

ಮಂಗಳೂರು: ಪ್ರಿಯಕರನೊಂದಿಗೆ ಸ್ವಂತ ಪತಿಯನ್ನೇ ಭೀಕರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ತೀರ್ಪು ಪ್ರಕಟಿಸಿದೆ.

ಮೂಡುಬಿದಿರೆ ಕುಕ್ಕುದಕಟ್ಟೆ ಮೂಡುಕೊಣಾಜೆ ಗ್ರಾಮದ ಅಶ್ವಿನಿ, ಅದೇ ಗ್ರಾಮದ ಆನಂದ ಮೇರ ಶಿಕ್ಷೆಗೊಳಗಾದ ಅಪರಾಧಿಗಳು. ಜಯರಾಜ್ ಎಂಬವರೇ ಮೃತ ದುರ್ದೈವಿ.

ಏನಿದು ಪ್ರಕರಣ?

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪೇರಮೊಗರಿನ ಜಯರಾಜ್ ಎಂಬವರು ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. 2014ರಲ್ಲಿ ಅಶ್ವಿನಿ ಜೊತೆಗೆ ಜಯರಾಜ್ ಅವರ ವಿವಾಹ ನೆರವೇರಿಸಲಾಗಿತ್ತು. ಮೂಡುಬಿದಿರೆಯಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. 2015ರಲ್ಲಿ ಅಶ್ವಿನಿ ಗರ್ಭವತಿಯಾದಳು. ತವರು ಮನೆಗೆ ಹೆರಿಗೆಗೆ ಹೋಗಿ 2016ರ ಆಗಸ್ಟ್ 6ರಂದು ತಾಯಿ ಮನೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಅಶ್ವಿನಿ ಅದೇ ಊರಿನ ಹಳೆ ಪರಿಚಯದ ಆನಂದ ಮೇರನೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಜಯರಾಜ್ ಮತ್ತು ಅಶ್ವಿನಿ ನಡುವೆ ವೈಮನಸ್ಸು ಉಂಟಾಗಿತ್ತು. ತಾಯಿ ಮನೆಯಲ್ಲಿದ್ದ ಅಶ್ವಿನಿ 2016ರ ಸೆಪ್ಟಂಬರ್ 13ರಂದು ಪತಿ ಜಯರಾಜ್‌ನನ್ನು ಸಂಚು ರೂಪಿಸಿ, ಮನೆಗೆ ಕರೆಯಿಸಿ ಪ್ರಿಯಕರ ಆನಂದ ಮೇರನ ಜೊತೆ ಸೇರಿಕೊಂಡು ಜಯರಾಜ್‌ನನ್ನು ಬರ್ಬರವಾಗಿ ಕೊಲೆ ಮಾಡಲು ಪ್ಲ್ಯಾನ್ ಮಾಡುತ್ತಾರೆ.

ಜಯರಾಜ್‌ಗೆ ಹಣ ನೀಡುವುದಾಗಿ ನಂಬಿಸಿ ಆತನನ್ನು ಮನೆಗೆ ಕರೆದುಕೊಳ್ಳುತ್ತಾಳೆ ಪತ್ನಿ ಆಸ್ವಿನಿ. ಈ ಬಗ್ಗೆ ಆನಂದ ಮೇರನಿಗೂ ಮಾಹಿತಿ ನೀಡಿದ್ದಳು.ಜಯರಾಜ್ ಅಂದು ಬೆಳಗ್ಗೆ 11:30ರ ವೇಳೆಗೆ ಮನೆಗೆ ಆಗಮಿಸಿದ. ಆಕೆ ಜಯರಾಜ್‌ನೊಂದಿಗೆ ಹಣದ ಬಗ್ಗೆ ವಿಚಾರಿಸುತ್ತಿದ್ದಳು. ಆಗ ಆನಂದ ಮೇರ ಕಬ್ಬಿಣದ ರಾಡ್‌ನಿಂದ ಜಯರಾಜ್‌ನ ತಲೆಗೆ ಬಲವಾಗಿ ಹೊಡೆದು, ದೇಹದ ಇತರೆ ಭಾಗಗಳಿಗೆ ಹಲ್ಲೆ ಮಾಡಿ ಹೊಟ್ಟೆಗೆ ತಿವಿದು ಅಶ್ವಿನಿ ಜೊತೆ ಸೇರಿಕೊಂಡು ಕೊಲೆ ಮಾಡಿದ್ದ ಎಂಬ ಆರೋಪ ಇದೆ. ನಂತರ ಜಯರಾಜ್‌ನ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಮನೆಯ ಹಿಂಬದಿಯಲ್ಲಿರುವ ಶಾಲೆಯ ಕಂಪೌಂಡ್‌ನ ಬಳಿ ಅಡಗಿಸಿಟ್ಟಿದ್ದರು.

ಜಯರಾಜ್‌ನ ಮೃತದೇಹದ ಕಿಸೆಯಲ್ಲಿದ್ದ ಮೊಬೈಲ್ ಪೋನ್, ಎಟಿಎಂ ಕಾರ್ಡ್ ಇತ್ಯಾದಿ ವಸ್ತುಗಳನ್ನು ತೆಗೆದಿಟ್ಟುಕೊಂಡು ಗೋಣಿಚೀಲವನ್ನು ಸೊಪ್ಪುಗಳಿಂದ ಮುಚ್ಚಿದ್ದರು. ಬಳಿಕ ಪಾಳುಬಾವಿಗೆ ಹಾಕಿದ್ದರು. ಮೃತದೇಹ ಕೊಳೆತಾಗ ವಾಸನೆ ಬಾರದ ಹಾಗೆ ರಾಸಾಯನಿಕ ವಸ್ತುವನ್ನು ಕೂಡ ಹಾಕಿದ್ದರು ಎನ್ನುವುದು ಬೆಳಕಿಗೆ ಬಂದಿತ್ತು.

ಪೊಲೀಸರ ದಿಕ್ಕು ತಪ್ಪಿಸಲು ಸುಳ್ಳು ದೂರು ದಾಖಲಿಸಿದ್ದ ಪತ್ನಿ: ಕೊಲೆಯನ್ನು ಮರೆಮಾಚುವ ಉದ್ದೇಶದಿಂದ ಹಾಗೂ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಅಶ್ವಿನಿ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಸೆಪ್ಟೆಂಬರ್16ರಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಕಿಡ್ನ್ಯಾಪ್ ಡ್ರಾಮಾ ಮಾಡಿದ್ದ ಆರೋಪಿಗಳು: ಕೊಲೆ ನಡೆಸಿದ ನಂತರ ಆರೋಪಿ ಆನಂದ ಮೇರನು ಜಯರಾಜ್‌ನನ್ನು ಅಪಹರಿಸಿರುವುದಾಗಿ ನಾಟಕ ಮಾಡುತ್ತಾನೆ. ಇದಕ್ಕೆ ಶ್ರೀಪತಿ ಮತ್ತು ಧನಪತಿ ಎಂಬವರು ಕೂಡ ಸಹಕರಿಸುತ್ತಾರೆ. ಜಯರಾಜ್‌ನ ಮೊಬೈಲ್‌ನ ಸಿಮ್ ಬಳಸಿ ಜಯರಾಜ್‌ನ ತಾಯಿಗೆ ಕರೆ ಮಾಡಿದ್ದ ಆರೋಪಿಗಳು, ಜಯರಾಜ್ ನಮಗೆ 62,000 ರೂ. ನೀಡಬೇಕಿತ್ತು. ಅದಕ್ಕಾಗಿ ಅವನನ್ನು ಕರೆದುಕೊಂಡು ಬಂದಿದ್ದೇವೆ. ಆತನಿಂದ ಬರಬೇಕಾದ ಹಣ ಬರುವವರೆಗೆ ಆತನನ್ನು ನಮ್ಮ ಜೊತೆ ದುಡಿಸಿ ಹಣ ವಸೂಲಿ ಮಾಡಿ ಬಳಿಕ ಕಳುಹಿಸುತ್ತೇವೆ’ ಎಂದು ಹೇಳುತ್ತಾರೆ.

ಆರೋಪಿಗಳು ಮಾಡಿದ ಪೋನ್ ಕರೆಯಿಂದ ಅನುಮಾನಗೊಂಡ ಜಯರಾಜ್ ಅವರ ಅಣ್ಣ ಗಿರೀಶ್ ಸೆಪ್ಟೆಂಬರ್ 22ರಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ತನ್ನ ತಮ್ಮನ ಅಪಹರಣದ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ಅದು ಕೊಲೆ ಪ್ರಕರಣವೆಂದು ತಿಳಿಯುತ್ತದೆ.

ಚಾರ್ಜ್‌ಶೀಟ್ ಸಲ್ಲಿಸಿದ ಇನ್‌ಸ್ಪೆಕ್ಟರ್: ಮೂಡುಬಿದಿರೆ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಅಭಿಯೋಜನಾ ಪರವಾಗಿ ಒಟ್ಟು 36 ಮಂದಿ ಸಾಕ್ಷಿದಾರರನ್ನು ವಿಚಾರಿಸಿದರು.

ಜೀವಾವಧಿ ಶಿಕ್ಷೆ ಪ್ರಕಟ: ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಾದ ಆನಂದ ಮೇರ ಮತ್ತು ಅಶ್ವಿನಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5,000 ರೂ. ದಂಡ, ದಂಡದ ಹಣ ಪಾವತಿಸಲು ತಪ್ಪಿದರೆ ಜೈಲು ಶಿಕ್ಷೆ, ಸಾಕ್ಷನಾಶ ಪ್ರಕರಣಕ್ಕೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

ದಂಡದ ಮೊತ್ತದಲ್ಲಿ 10,000 ರೂ.ನ್ನು ಜಯರಾಜ್ ಅವರ ತಾಯಿಗೆ ನೀಡುವಂತೆ ಹಾಗೂ ಜಯರಾಜ್ ಅವರ ಮಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿ, ನ್ಯಾಯಾಧೀಶರು ತೀರ್ಪು ನೀಡಿದರು.

driving
- Advertisement -

Related news

error: Content is protected !!