





ಮಂಗಳೂರು: ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಎಂಟು ತಂಡಗಳಲ್ಲಿ ಒಂದಾದ ಮಂಗಳೂರು ಇಂಡಿಯನ್ಸ್‌ನ ಲಾಂಛನವನ್ನು ನಗರದಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಯಿತು.
ಮೊಹಿಯುದ್ದೀನ್ ಬಾವ ಮಾಲೀಕತ್ವದ ತಂಡಕ್ಕೆ ಪುತ್ತೂರು ಸೇಂಟ್ ಫಿಲೋಮಿನ ಕಾಲೇಜಿನ ಹಬೀಬ್ ಮಾಣಿ ಅವರನ್ನು ಕೋಚ್ ಆಗಿಯೂ ದಿವೀಶ್ ಅವರನ್ನು ಸಹಾಯಕ ಕೋಚ್ ಆಗಿಯೂ ನೇಮಕ ಮಾಡಲಾಗಿದೆ. ತಂಡದ ಬ್ರಾಂಡ್ ಅಂಬಾಸಿಡರ್ ಆಗಿ ಚಲನಚಿತ್ರ ನಟ ದೇವದಾಸ್ ಕಾಪಿಕಾಡ್ ಮತ್ತು ಭೋಜರಾಜ್ ವಾಮಂಜೂರು ಗುರುತಿಸಿಕೊಳ್ಳಲಿದ್ದಾರೆ.
ತುಳು ಸಿನಿಮಾ ನಟ ಭೋಜರಾಜ್ ವಾಮಂಜೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಸಂಸ್ಥೆಯ ಸಲಹೆಗಾರ ಪುರುಷೋತ್ತಮ ಪೂಜಾರಿ ಅವರು ಲಾಂಛನ ಬಿಡುಗಡೆ ಮಾಡಿದರು. ‘ಕಬಡ್ಡಿ ಈಚೆಗೆ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶಗಳು ಒದಗಿ ಬರಲಿ’ ಎಂದು ಬೋಜರಾಜ್ ಆಶಿಸಿದರು.
ಟೂರ್ನಿ ಆಯೋಜಿಸುತ್ತಿರುವ ಫೈನ್ ಸ್ಪೋರ್ಟ್ಸ್ ಪ್ರೈವೆಟ್ ಲಿಮಿಟೆಡ್‌ನ ಸುದೇಶ್ ಭಂಡಾರಿ, ‘ವಿಜಯಪುರ ತಂಡದ ಹೆಸರು ಮತ್ತು ಲಾಂಛನ ಬಿಡುಗಡೆ ಈಗಾಗಲೇ ನಡೆದಿದೆ. ಟೂರ್ನಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದೆ’ ಎಂದರು. ಮೊಹಿಯುದ್ದೀನ್ ಬಾವ, ಹಬೀಬ್ ಮಾಣಿ, ದಿವೀಶ್, ಇಶಾಂತ್ ಮತ್ತು ಇಮ್ಮಿಯಾಜ್ ಪಾಲ್ಗೊಂಡಿದ್ದರು.








