ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರ ಬರ್ಬರ ಹತ್ಯೆ ಆಗಿದೆ. ಕಾವಲ್ಭೈರಸಂದ್ರದ ಅಂಬೇಡ್ಕರ್ ಕಾಲೇಜು ಬಳಿ ದುಷ್ಕೃತ್ಯ ನಡೆದಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೃಷ್ಣಮೂರ್ತಿ(30) ಎನ್ನುವವರನ್ನು ನಿರ್ದಯವಾಗಿ ಕೊಲೆ ಮಾಡಲಾಗಿದೆ.

ಟೈಲ್ಸ್ ಕೆಲಸ ಮಾಡುತ್ತಿದ್ದ ಕೃಷ್ಣಮೂರ್ತಿ ಮೊದಲ ಹೆಂಡತಿಯನ್ನು ತೊರೆದು ಮತ್ತೊಂದು ಮದುವೆಯಾಗಿದ್ದರು. ಆದರೆ, ಮದ್ಯದ ಅಮಲಲ್ಲಿ ಎರಡನೇ ಹೆಂಡತಿಯ ಜತೆಗೂ ಕಿರಿಕಿರಿ ಮಾಡಿಕೊಂಡಿದ್ದರು. ನಿತ್ಯವೂ ಮದ್ಯ ಸೇವಿಸಿ ಮನೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದ ಕಾರಣ ಅದರಿಂದ ಬೇಸತ್ತ ಎರಡನೇ ಹೆಂಡತಿಯೇ ಕೊಲೆ ಮಾಡಿಸಿದರಾ ಎಂಬ ಶಂಕೆ ಇದೀಗ ವ್ಯಕ್ತವಾಗುತ್ತಿದೆ.

ನಿತ್ಯವೂ ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದ ಕೃಷ್ಣಮೂರ್ತಿ, ಎರಡನೇ ಹೆಂಡತಿ ಜತೆಗೆ ಅಷ್ಟೇನು ಉತ್ತಮ ಸಂಬಂಧ ಹೊಂದಿರಲಿಲ್ಲ. ಎರಡು ತಿಂಗಳಿನಿಂದ ಇಬ್ಬರ ನಡುವೆ ಪ್ರತಿನಿತ್ಯ ಗಲಾಟೆಗಳಾಗುತ್ತಿದ್ದವು. ಎಷ್ಟೋ ಬಾರಿ ಗಲಾಟೆ ತಾರಕಕ್ಕೆ ಹೋಗುತ್ತಿದ್ದ ಕಾರಣ ಎರಡು, ಮೂರು ಸಲ ಇಬ್ಬರಿಗೂ ಪೊಲೀಸರೇ ಎಚ್ಚರಿಕೆ ನೀಡಿದ್ದರು. ಆದರೂ, ಮನೆ ಬಳಿ ಗಲಾಟೆ ಆಗುತ್ತಿತ್ತು. ಇದರಿಂದಾಗಿ ಬೇಸತ್ತ ಎರಡನೇ ಹೆಂಡತಿ ಸುಪಾರಿ ನೀಡಿ ಕೊಲೆ ಮಾಡಿಸಿರಬಹುದು ಎಂದು ಅನುಮಾನಿಸಲಾಗುತ್ತಿದೆ.

ಕೃಷ್ಣಮೂರ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈಯಲಾಗಿದ್ದು, ಕಾವಲ್ಭೈರಸಂದ್ರದ ಅಂಬೇಡ್ಕರ್ ಕಾಲೇಜು ಮುಂಭಾಗದಲ್ಲಿಯೇ ದುರ್ಘಟನೆ ಸಂಭವಿಸಿದೆ. 2-3 ಜನ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ ಎನ್ನಲಾಗಿದ್ದು, ಡಿ.ಜೆ.ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡನೇ ಹೆಂಡತಿ ಮೇಲೆಯೇ ಅನುಮಾನ ದಟ್ಟವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


