

ಪುತ್ತೂರು: ಮುಂಡೂರು ಗ್ರಾಮದ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ.ಲೋಕಪ್ಪ ಗೌಡರವರು ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಖಾಸಗಿ ಕೇಸು ದಾಖಲಿಸಿದ ಘಟನೆ ವರದಿಯಾಗಿದೆ.
ಪುತ್ತೂರಿನ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರ ಆದೇಶದಂತೆ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ. ಉದಯರವಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಐಪಿಸಿ 352 ಮತ್ತು 504ರಂತೆ ಪ್ರ ಕರಣ ದಾಖಲಿಸಿದ್ದಾರೆ.
2022ರ ಎಪ್ರಿಲ್ 4ರಂದು ಸಂಜೆ ದೇವಸ್ಥಾನದ ವಠಾರದಲ್ಲಿ ನಡೆದ ಜಾತ್ರೋತ್ಸವದ ಲೆಕ್ಕ ಪತ್ರ ಮಂಡನೆಯ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಅನುಚಿತವಾಗಿ ವರ್ತಿಸಿ ಕುರ್ಚಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ದೇವಸ್ಥಾನದ ನಿಯಮಗಳನ್ನು ಗಾಳಿಗೆ ತೂರಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಲೋಕಪ್ಪ ಗೌಡ ದೂರಿನಲ್ಲಿ ತಿಳಿಸಿದ್ದರು. ಅದರಂತೆ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಕೇಸು ದಾಖಲಾಗಿದೆ.










