
ನವದೆಹಲಿ: ಮೂರು ದಿನಗಳ ಅಮೆರಿಕಾ ಪ್ರವಾಸ ಮುಗಿಸಿ ಬಂದ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮುಗಿಸಿ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆಯೇ ನರೇಂದ್ರ ಮೋದಿಗೆ ಬೃಹತ್ ಹೂವಿನ ಹಾರವನ್ನು ಹಾಕಿ ಬಿಜೆಪಿ ರಾಷ್ಟ್ರೀಯ ನಾಯಕರು ವೆಲ್ಕಮ್ ಮಾಡಿದ್ದಾರೆ. ಇನ್ನು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್, ತರುಣ್ ಚುಘ್, ಮಾಜಿ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್ ಮೋದಿಗೆ ಹಾರ ಹಾಕಿ ಸ್ವಾಗತಿಸಿದರು.

ಮಾರಕ ಕೊರೋನಾ ಮಹಾಮಾರಿ ಬಳಿಕ ಮೂರು ದಿನ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿ ಮಾಡಿದರು. ಯಶಸ್ವಿಯಾಗಿ ದ್ವೀಪಕ್ಷೀಯ ಮಾತುಕತೆ ನಡೆಸಿದ ಮೋದಿ ವಿಶ್ವಸಂಸ್ಥೆಯ 76ನೇ ಅಧಿವೇಶನದಲ್ಲಿ ಪಾಕಿಸ್ತಾನ ಹಾಗೂ ಚೀನಾ ಮಾನವನ್ನು ಹರಾಜಾಕಿಯೇ ಸ್ವದೇಶದ ವಿಮಾನ ಏರಿದ್ದಾರೆ.

ಮೂರು ದಿನಗಳ ಕಾಲ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಭಾರತ ಮೂಲದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಕ್ವಾಡ್ ಸಭೆ, ಅಂತರಾಷ್ಟ್ರೀಯ ಕಂಪೆನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸುವ ಮೂಲಕ ಭಾರತಕ್ಕೆ ವಾಪಸ್ಸಾಗ್ತಿದ್ದಾರೆ. ಇದಕ್ಕೂ ಮೊದಲು ವಿಶ್ವಸಂಸ್ಥೆಯ ಅಧಿವೇಶನದಲ್ಲಿ ವಿಶ್ವದ ನಾನಾ ಸಮಸ್ಯೆಗಳ ಬಗ್ಗೆ ಮಾತನಾಡುತ್ತಲೇ ಚೀನಾ ಪಾಕಿಸ್ತಾನದ ನರಿಬುದ್ದಿಯನ್ನ ಜರಿದರು.



