
ದೆಹಲಿ: ಅಮೆರಿಕ ಮತ್ತು ಭಾರತ ಸರ್ಕಾರಗಳು ರಷ್ಯಾ-ಉಕ್ರೇನ್ ಸಂಘರ್ಷದ ಪರಿಣಾಮದ ಬಗ್ಗೆ ನಿರಂತರ ಸಮಾಲೋಚನೆ ನಡೆಸುತ್ತಿವೆ. ಮುಂದಿನ ದಿನಗಳಲ್ಲಿಯೂ ಇದು ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವರ್ಚುವಲ್ ಸಭೆಯಲ್ಲಿ ಹಲವು ವಿಚಾರಗಳನ್ನು ಬೈಡೆನ್ ಚರ್ಚಿಸಿದರು. ಈ ವೇಳೆ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ನಡುವೆ ನೇರ ಮಾತುಕತೆ ನಡೆಯುವುದರಿಂದ ಮಾತ್ರ ಬಿಕ್ಕಟ್ಟು ಶಮನಗೊಳ್ಳಬಹುದು ಎಂದು ತಮ್ಮಅಭಿಪ್ರಾಯ ವ್ಯಕ್ತಪಡಿಸಿದರು.
ಉಕ್ರೇನ್‌ನ ಬುಚಾ ನಗರದಲ್ಲಿ ರಷ್ಯಾ ಪಡೆಗಳು ನಾಗರಿಕರ ಮೇಲೆ ನಡೆಸಿರುವ ದೌರ್ಜನ್ಯವನ್ನು ‘ಆತಂಕಕಾರಿ’ ಎಂದು ಹೇಳಿದ ನರೇಂದ್ರ ಮೋದಿ, ‘ಈ ಘಟನೆ ಬೆಳಕಿಗೆ ಬಂತ ತಕ್ಷಣವೇ ಭಾರತ ಖಂಡಿಸಿತ್ತು. ಈ ಬಗ್ಗೆ ತನಿಖೆ ನಡೆಯಬೇಕೆಂದು ಒತ್ತಾಯಿಸಿತ್ತು ಎಂದು ನರೇಂದ್ರ ಮೋದಿ ಹೇಳಿದರು.ರಷ್ಯಾ ಪರವಾಗಿದೆ ಭಾರತ ಎನ್ನುವ ಅಮೆರಿಕದ ಆರೋಪದ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ರಷ್ಯಾ ಮತ್ತು ಉಕ್ರೇನ್ ನಿಯೋಗಗಳ ನಡುವೆ ನಡೆಯುತ್ತಿರುವ ಮಾತುಕತೆಯು ಸಂಘರ್ಷ ಅಂತ್ಯಗೊಳಿಸಬಹುದು ಎಂದು ಮೋದಿ ಆಶಯ ವ್ಯಕ್ತಪಡಿಸಿದರು. ಉಕ್ರೇನ್‌ನಲ್ಲಿ ಭಾರತದ ವಿದ್ಯಾರ್ಥಿ ಮೃತಪಟ್ಟ ವಿಚಾರ ಪ್ರಸ್ತಾಪಿಸಿದ ಮೋದಿ, ಸಂಘರ್ಷದಲ್ಲಿ ಸಿಲುಕಿದ್ದ 20,000 ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಮನೆಗೆ ಕರೆತರಲು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಈ ಸಂದರ್ಭದಲ್ಲಿ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೆ ಎಂದು ಮೋದಿ ಹೇಳಿದರು.
ಉಕ್ರೇನ್‌ಗೆ ಭಾರತ ಒದಗಿಸುತ್ತಿರುವ ಮಾನವೀಯ ನೆರವನ್ನು ಬೈಡೆನ್ ಶ್ಲಾಘಿಸಿದರು.’ಎರಡೂ ದೇಶಗಳ ಹಲವು ಕುಟುಂಬಗಳು ಕೌಟುಂಬಿಕವಾಗಿ ಬೆಸೆದುಕೊಂಡಿವೆ.ವಿಶ್ವಾಸ ಮತ್ತು ಮೌಲ್ಯಗಳು ಭಾರತ ಮತ್ತು ಅಮೆರಿಕದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿವೆ’ ಎಂದು ಬೈಡೆನ್ ಹೇಳಿದರು.ಉಕ್ರೇನ್ ಮೇಲಿನ ರಷ್ಯಾ ದಾಳಿಯ ವಿಚಾರದಲ್ಲಿ ಭಾರತ ತಳೆದಿರುವ ನಿಲುವಿನ ಬಗ್ಗೆ ಅಮೆರಿಕ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದೆ. ರಷ್ಯಾದಿಂದ ಕಡಿಮೆ ದರದಲ್ಲಿ ಇಂದನ ಖರೀದಿಸುವ ಭಾರತದ ನಿರ್ಧಾರದ ಬಗ್ಗೆಯೂ ಅಮೆರಿಕ ಕೆಂಗಣ್ಣು ಬೀರಿದೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಾಯಕರ ನೇರ ಮಾತುಕತೆ ಮಹತ್ವ ಪಡೆದುಕೊಂಡಿತ್ತು.’ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಾಗಿರುವ ಭಾರತ ಮತ್ತು ಅಮೆರಿಕ ಸಹಜವಾಗಿಯೇ ಶಾಂತಿ ಸ್ಥಾಪನೆ ವಿಚಾರದಲ್ಲಿ ಪಾಲುದಾರ ದೇಶಗಳಾಗಿವೆ’ ಎಂದು ಮೋದಿ ಹೇಳಿದ್ದರು.