Saturday, May 4, 2024
spot_imgspot_img
spot_imgspot_img

ಸುಬ್ರಮಣ್ಯ: ಭಾರೀ ಮಳೆಯಿಂದ ತುಂಬಲಾರದ ನಷ್ಟ; ಮಣ್ಣಿನಡಿ ಕೈ ಕೈ ಹಿಡಿದ ಸ್ಥಿತಿಯಲ್ಲಿತ್ತು ಮಕ್ಕಳ ಶವ.!

- Advertisement -G L Acharya panikkar
- Advertisement -

ಕರಾವಳಿ ಭಾಗದಲ್ಲಿ ಸುರಿದ ಭಾರೀ ಮಳೆಗೆ ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಎರಡು ಎಳೆ ಜೀವಗಳು ಅಸು ನೀಗಿದ ಘಟನೆ ನಡೆದಿದ್ದು, ಹಲವು ಕಡೆ ಮಳೆಯಿಂದ ಭಾರೀ ನಷ್ಟ ಉಂಟಾಗಿದೆ.

ಸೋಮವಾರ ಸಂಜೆ ಸುರಿದ ಮಹಾ ಮಳೆಗೆ ಸುಬ್ರಹ್ಮಣ್ಯ, ಕೊಲ್ಲಮೊಗರು,ಕಲ್ಮಕಾರು,ಬಾಳುಗೋಡು ಭಾಗದ ಜನರಲ್ಲಿ ಆತಂಕ ಸೃಷ್ಠಿಯಾಗಿದೆ. ಮಳೆಯ ಕಾರಣದಿಂದಾಗಿ ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವಿಗೀಡಾಗಿದ್ದು, ಪರ್ವತಮುಖಿ ನಿವಾಸಿ ಕುಶಾಲಪ್ಪ ಎನ್ನುವವರ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಧಾರುಣ ಸಾವು ಕಂಡಿದ್ದಾರೆ. ಶ್ರುತಿ (11) ಮತ್ತು ಗಾನ (6) ಸಾವಿಗೀಡಾದ ಮಕ್ಕಳಾಗಿದ್ದಾರೆ. ದೀರ್ಘ‌ ಕಾರ್ಯಾಚರಣೆಯ ಬಳಿಕ ಮೇಲಕ್ಕೆತ್ತುವ ಸಂದರ್ಭ ಇಬ್ಬರೂ ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡ ಸ್ಥಿತಿಯಲ್ಲಿದ್ದರು ಎಂದು ತಿಳಿದು ಬಂದಿದೆ.

ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದ ದರ್ಪಣತೀರ್ಥ ನದಿ ಮೈ ತುಂಬಿ ಹರಿದಿದ್ದು,ನದಿ ದಡದಲ್ಲಿರುವ ಆದಿ ಸುಬ್ರಹ್ಮಣ್ಯ ದೇವಳದ ಒಳಗೆ ನೀರು ನುಗ್ಗಿದೆ. ಅನೇಕ ವರ್ಷಗಳ ನಂತರ ಆದಿ ದೇವಳದ ಒಳಗೆ ದರ್ಪಣ ತೀರ್ಥವು ಪ್ರವೇಶಿಸಿದ್ದು,ಶ್ರೀ ದೇವಳದ ಒಳಾಂಗಣ, ಹೊರಾಂಗಣವು ಸಂಪೂರ್ಣವಾಗಿ ಜಲಾವೃತ್ತಗೊಂಡಿದೆ. ಮಳೆಯ ಹಿನ್ನಲೆ ಯಲ್ಲಿ ಭಕ್ತರು ಮುಂದಿನ ಎರಡು ದಿನ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬರದಂತೇ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಭಕ್ತರಿಗೆ ಮನವಿ ಮಾಡಿದ್ದಾರೆ.

ದರ್ಪಣತೀರ್ಥ ನದಿಯು ತುಂಬಿ ಹರಿದ ಕಾರಣ ರುದ್ರಪಾದ ಸೇತುವೆಯು ಜಲಾವೃತಗೊಂಡಿದೆ.ಅಲ್ಲದೆ ದರ್ಪಣ ತೀರ್ಥದಲ್ಲಿನ ಪ್ರವಾಹದಿಂದ ಸುಬ್ರಹ್ಮಣ್ಯ-ಪುತ್ತೂರು- ಮಂಜೇಶ್ವರ ಅಂತರ್ ರಾಜ್ಯ ಸಂಪರ್ಕ ರಸ್ತೆಯ ಸೇತುವೆಯೂ ಮುಳುಗಡೆಯಾಗಿದೆ..ಕುಕ್ಕೆಯಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ತುಂಬಿ ಹರಿಯುತ್ತಿರುವ ದರ್ಪಣ ತೀರ್ಥದಿಂದ ನದಿ ತಟದಲ್ಲಿನ ಸುಮಾರು 12 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ನದಿ ತಟದ ಮನೆಯವರು ದರ್ಪಣ ತೀರ್ಥ ಗಂಗಾಮಾತೆಗೆ ತನ್ನ ರುದ್ರಪ್ರವಾಹವನ್ನು ಕಡಿಮೆ ಮಾಡುವಂತೆ ಪ್ರಾರ್ಥಿಸಿ ಭಾಗಿನ ಸಮರ್ಪಣೆ ಮಾಡಿದ್ದಾರೆ.

ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡ ಹರಿಹರ ಬಾಳುಗೋಡು, ಕೊಲ್ಲಮೊಗ್ರು ಕಲ್ಮಕಾರು,ಬಾಳುಗೋಡು ಐನಕಿದು ಗ್ರಾಮಗಳಲ್ಲಿ ಭಾರಿ ಮಳೆಯಾಗಿದ್ದು, ಜಲಪ್ರಳಯವೇ ಸಂಭವಿಸಿದೆ. ಮಳೆಯ ಭೀಕರತೆಗೆ ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಈ ನಾಲ್ಕು ಗ್ರಾಮಗಳು ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ನಡುಗಲ್ಲು ಮೂಲಕ ಈ ನಾಲ್ಕು ಗ್ರಾಮಗಳ ತಲುಪುವ ನಡುಗಲ್ಲು ಹರಿಹರ ಮಾರ್ಗದ ಮಲ್ಲಾರ ಬಳಿ ದೊಡ್ಡ ಶಂಖ ಎಂಬಲ್ಲಿ ಸೇತುವೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.ಇದೇ ಮಾರ್ಗದ ಮುಳುಗಡೆಗೊಂಡ ಸೇತುವೆ ಮೇಲೆ ಬೈಕ್ ನಲ್ಲಿ ತೆರಳುತಿದ್ದ ಕೊಲ್ಲಮೊಗ್ರು ಗ್ರಾಮದ ಸವಾರನ ಬೈಕ್ ನೀರು ಪಾಲಾಗಿದೆ. ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಳೆಯಿಂದಾಗಿ ಕಲ್ಲುಗುಂಡಿ ಪೇಟೆ ಸಂಪೂರ್ಣ ಜಲಾವೃತವಾಗಿದ್ದು, ಪೇಟೆಯ ಅಂಗಡಿ ಒಳಗೆಲ್ಲಾ ನೀರು ನುಗ್ಗಿ ಅಂಗಡಿ ವಸ್ತುಗಳೆಲ್ಲಾ ನೀರಲ್ಲಿ ತೇಲಾಡಿದೆ. ಪಯಸ್ವಿನಿ ನದಿ ರಸ್ತೆಯಲ್ಲಿ ಹರಿದ ಹಿನ್ನಲೆಯಲ್ಲಿ ಮಂಗಳೂರು- ಮೈಸೂರು ರಸ್ತೆ ಮುಂಜಾನೆ 4 ಗಂಟೆವರೆಗೆ ಬಂದ್ ಆಗಿದೆ. ದ.ಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅದರಲ್ಲೂ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು,ಹರಿಹರ,ಬಾಳುಗೋಡು ಆಸುಪಾಸಿನ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.ಈ ಭಾಗದಲ್ಲಿ ಮುಂಜಾಗ್ರತ ಕ್ರಮವಹಿಸಲು ಎಸ್ ಡಿಆರ್ ಎಪ್ ಹಾಗೂ ಎನ್ ಡಿಆರ್ ಎಪ್ ತಂಡವನ್ನು ಆ ಭಾಗಕ್ಕೆ ಈಗಾಗಲೇ ಕಳುಹಿಸಿಕೊಡಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಿಗೂ ಕಟ್ಟೆಚ್ಚರ ವಹಿಸಿ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.ನೆರೆ ಸಂದರ್ಭ ಸಾರ್ವಜನಿಕರು ಸಹಕರಿಸಿ, ಸುರಕ್ಷತೆ ಕಡೆ ಹೆಚ್ಚಿನ ಗಮನಹರಿಸಬೇಕು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಒಂದೆರಡು ದಿನಗಳು ಕಾದು ಮಳೆ ಕಡಿಮೆಯಾದ ಬಳಿಕ ಕ್ಷೇತ್ರ ಸಂದರ್ಶಿಸುವಂತೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!