Saturday, April 20, 2024
spot_imgspot_img
spot_imgspot_img

ಸ್ವಸ್ಥ ಸಮಾಜ ಹೊಂದಲು ಆರೋಗ್ಯಪೂರ್ಣ ಚಿಂತನೆಯ ಅಗತ್ಯವಿದೆ..! – ಮಲ್ಲಿಕಾ ಜೆ ರೈ

- Advertisement -G L Acharya panikkar
- Advertisement -

ಜೀವನದಲ್ಲಿ ಒದಗಿ ಬರುವ ಅದೆಷ್ಟೋ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಬರುತ್ತೇವೆ. ಅವಕಾಶಗಳು ಎಂದೂ ಯಾರಿಗೂ ಕಾಯುವುದಿಲ್ಲ. ಅವು ಮನಸ್ಸಿನ ಹೆಜ್ಜೆಗಳಿಗೆ ಗೆಜ್ಜೆಗಳಂತೆ ಧ್ವನಿಯಾಗುತ್ತವೆ. ಕಾಲಿನಲ್ಲಿ ಗೆಜ್ಜೆಯಿದ್ದರೆ ಚಲನೆ ಕಿವಿಗೆ ಕೇಳುತ್ತದೆ. ಹಾಗೆಂದು ಗೆಜ್ಜೆಯಿಲ್ಲದಿದ್ದರೆ ಚಲನೆ ಇಲ್ಲವೆಂದಲ್ಲ. ಅದು ಸುಪ್ತ ಸ್ಥಿತಿಯ ಧ್ಯಾನಕ್ಕೆ ಸಮನಾಗಬಲ್ಲದು.

ಹೀಗೆಯೇ ಮಾಡಬೇಕೆಂಬ ಪಟ್ಟಿಯಲ್ಲಿ ಬದಲಾವಣೆಗಳು ತೋರುತ್ತವೆ. ಪ್ರತೀ ದಿನದ ಗಂಟೆಗಳಲ್ಲಿ ಒಂದಿನಿತೂ ವ್ಯತ್ಯಾಸವಿಲ್ಲ. ಆದರೂ ಭೌತಿಕ ವ್ಯತ್ಯಾಸಗಳು ಯಾಕಾಗಿ ಉದ್ಭವವಾಗುತ್ತವೆ? ಎಂದು ಆಲೋಚಿಸಿದಾಗ ಜೀವನ ಕಾಲದ ಸಮಯವು ಕ್ಷೀಣಿಸುತ್ತಿರುತ್ತದೆ. ಆಯುಷ್ಯ ಕಡಿಮೆಯಾಗುವ ಸೂಚನೆಯೇ ಕಾಲದ ಓಟ ಎನ್ನಬಹುದು. ಅಂತರಂಗದೊಳಗೆ ಇಣುಕಿ ನೋಡುವ ವ್ಯವಧಾನ ಯಾರಿಗೂ ಇರುವುದಿಲ್ಲ. ಎಲ್ಲರೂ ಬಾಹ್ಯ ಓಟಗಳಲ್ಲೇ ತಲ್ಲೀನರಾಗಿದ್ದಾರೆ. ಭವಿಷ್ಯದ ಸುಂದರವಾದ ಕಲ್ಪನೆಯ ಸಾಮ್ರಾಜ್ಯದೊಂದಿಗೆ ಕನಸಿನ ಗೋಪುರ ಕಟ್ಟುವ ಕೆಲಸ ನಡೆಯುತ್ತದೆ. ಈ ಕ್ಷಣದ ನಮಗರಿವು ಇಲ್ಲದೇ ಅವ್ಯಕ್ತ ರೀತಿಯ ವ್ಯವಸ್ಥೆಯೊಳಗೆ ಇರುವ ಮಾನವ ಜೀವನ ಈ ಬ್ರಹ್ಮಾಂಡದೊಳಗೆ ಒಂದು ಧೂಳಿನ ಕಣದಂತೆ ಎಂಬುದು ನಿತ್ಯ ಸತ್ಯ. ಅಗೋಚರ ಶಕ್ತಿಯ ಮುಂದೆ ಹುಲು ಮಾನವ ತಾನು ತನ್ನಿಂದಲೇ ಎಂಬ ರೀತಿಯಲ್ಲಿ ಬಾಳುತ್ತಿರುವುದು ನಿಜಕ್ಕೂ ವಿಪರ್ಯಾಸ. ಹಣ, ಐಶ್ವರ್ಯದ ಪ್ರಾಬಲ್ಯದ ಮುಂದೆ ಯಾವ ಮಡಿವಂತಿಕೆಯು ತಲೆ ತಗ್ಗಿಸಿದರೂ ಮಣ್ಣಿಗೆ ಕರೆ ತಂದ ಭಾವದ ನಂಟು ಅದು ಮಣ್ಣಲ್ಲೇ ಕೊನೆಗೆ ಸೇರುವುದೆoಬ ಸತ್ಯ ಯಾವತ್ತೂ ಕಹಿಯಾಗಿರುತ್ತದೆ.

ಎಷ್ಟೇ ಮೇಲಕ್ಕೆ ಹಾರಾಡಿದರೂ ಹದ್ದು ವಿಶ್ರಮಿಸಲು ತಾನು ಮರದ ಕೊಂಬೆಗೆ ಇಳಿಯಲೇಬೇಕು. ಅಂತೆಯೇ ಮನುಷ್ಯತ್ವ ಮರೆತು ಅಹಂಕಾರದಿಂದ ಹಾರಾಡುವವರು ನಮಸ್ಕರಿಸಲು ಭೂಮಿಗೆ ಬಾಗಲೇಬೇಕು. ಅದುವೇ ಜೀವನ ಚಕ್ರ. ಈ ಲೋಕದೊಂದಿಗೆ ನಮಗಿರುವ ನಂಟು ಬಿಗಿಯಾಗಿರಬಾರದು. ಕ್ರಮೇಣ ಅದು ಗಂಟಾಗಿ ಬಿಡುವುದು. ಆಮೇಲೆ ಅದುವೇ ಬ್ರಹ್ಮ ಗಂಟಾಗಿ ಬಿಡಿಸಲಾರದ ಕಗ್ಗಂಟಾಗುವುದು. ಆ ಕಗ್ಗಂಟು ಮೋಹ, ಮದ, ಮಾತ್ಸರ್ಯಗಳನ್ನೂ ಮೀರಿ ಕೊನೆಗೆ ಬೆನ್ನು ಬಿಡದ ನಕ್ಷತ್ರಿಕನಂತೆ ವರ್ತಿಸುವುದು.

ಬಾಳಿಗೆ ಬೆಳಕು ಕೊಡುವ ಮೂಲಕ ತಾಯಿ ತಂದೆ ಮಕ್ಕಳಿಗೆ ದೇವರಾಗುತ್ತಾರೆ. ಮಕ್ಕಳೂ ತಾಯಿ ತಂದೆಗೆ ದೇವರೇ ಆಗಿಬಿಡುತ್ತಾರೆ. ಈ ನಂಟು ಕೊನೇ ಕ್ಷಣದವರೆಗೂ ಇದ್ದರೆ ಬಹಳ ಚಂದ. ಮಕ್ಕಳ ಬಾಳಿನ ದಾರಿಯು ಒಂದು ರೀತಿಯಲ್ಲಿ ಗಿಡವನ್ನು ನೆಟ್ಟು ಪ್ರೀತಿಯಿಂದ ಬೆಳೆಸಿ ಪೋಷಿಸಿದಂತೆ. ಅಲ್ಲಿ ಕೆಲವೊಮ್ಮೆ ಮುದ್ದು ಇರುವಂತೆ ಗುದ್ದೂ ಇರಬೇಕಾಗುತ್ತದೆ. ಹಾಗಾದಾಗ ಮಾತ್ರ ಒಬ್ಬ ಉತ್ತಮ ಪ್ರಜೆಯಾಗಿ ಮುಂದೆ ಬಾಳಲು ಶಕ್ತರಾಗುತ್ತಾರೆ. ಬರಿಯ ಮುದ್ದು ದೊರಕಿ ಗುದ್ದಿಗೆ ಬಾಗದೆ ಇದ್ದರೆ ಕಳೆಗಿಡದಂತೆ ಕಂಟಕ ಆಗುವ ಸಾಧ್ಯತೆಯೇ ಹೆಚ್ಚು. ಕಳೆಗಿಡಗಳನ್ನು ಎಳವೆಯಲ್ಲಿಯೇ ಚಿವುಟಿಹಾಕಲು ತುಂಬಾ ಸುಲಭ.

ಒಮ್ಮೆ ಅದು ಬೆಳೆಯಿತೋ ಮುಂದೆ ಮತ್ತೆ ಚಿವುಟಿದಾಗ ಅಳಿಸುವುದು ಬಿಡಿ ಕತ್ತಿಯಿಂದಲೂ ಸಾಧ್ಯವಾಗದೇ ಹೋಗಬಹುದು. ಕೊನೆಗೆ ಕೊಡಲಿ ಪ್ರವೇಶವಾಗುವ ಸ್ಥಿತಿ ಬರಬಹುದು. ಹಾಗಾಗಿ ಕಳೆ ಬೆಳೆದು ಬರುವ ಮುನ್ನ ಎಚ್ಚರವಿರಬೇಕು. ಕೆಲವರು ಕನಸು ಕಾಣುತ್ತ ನಿದ್ದೆಗೆ ಜಾರುತ್ತಾರೆ. ಇದು ಸಾಮಾನ್ಯ ಸಂಗತಿ. ಇನ್ನು ಕೆಲವರು ಎಚ್ಚರದಲ್ಲಿ ಇದ್ದುಕೊಂಡು ಕನಸು ಕಾಣುತ್ತಿರುತ್ತಾರೆ. ಆ ಕನಸಿನ ನನಸಾಗುವಿಕೆಗೆ ಒಳಿತಿನ ದಾರಿಯನ್ನು ಹುಡುಕುತ್ತಿರುತ್ತಾರೆ.

ಪ್ರತಿ ಎಲ್ಲಾ ಬೆಳಗು ಒಂದೇ ರೀತಿಯಲ್ಲಿ ಇರುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಅರಿವಿಗೆ ಬರುತ್ತದೆ. ಪ್ರತಿಯೊಂದೊಂದು ಸಣ್ಣ ವ್ಯತ್ಯಾಸಗಳ ಅರಿವು ತಿಳಿಯುತ್ತ ಹೋದಂತೆ ಆ ವೈವಿಧ್ಯಕ್ಕೆ ಮಾರುಹೋಗಿ ಅಂತರಂಗದ ವ್ಯತ್ಯಾಸಗಳನ್ನು ಕೂಡಾ ಗಮನಿಸುವಂತೆ ಮಾಡುತ್ತವೆ. ಬಾಹ್ಯವಾಗಿ ನೋಡುವಾಗ ಎಲ್ಲರೂ ಒಂದೇ ರೀತಿ ಕಾಣುತ್ತಾರೆ. ಆದರೆ ಗಮನವಿಟ್ಟಾಗ ಮಾತ್ರ ಅಗೋಚರ ಶಕ್ತಿಯ ಅರಿವು ಗೋಚರವಾಗುತ್ತದೆ. ಎಲ್ಲವೂ ದೊರೆಯಿತು, ಬಯಸಿದ್ದೂ ದಕ್ಕಿತು ಮುಂದೇನು ಎಂಬ ಪ್ರಶ್ನೆ ಯಾರಲ್ಲಾದರೂ ಉದ್ಭವವಾಗುವುದು ಸಹಜ. ಆದರೆ ಆಸೆಯ ಗಿಡವು ಇನ್ನಷ್ಟು ಬೆಳೆಯುವುದೇ ವಿನಃ ಸಾಕೆಂಬ ತೃಪ್ತಿಯ ಭಾವ ಬರುವುದಿಲ್ಲ.

ಹುಟ್ಟಿನ ಬಗ್ಗೆ ಅರಿವಿಲ್ಲ. ಬೆಳೆದಾಗ ಸಂತೋಷದಿಂದ ಬೆಳೆಯುತ್ತ ಇತರರ ನೋವಿಗೆ ಸ್ಪಂದಿಸೋ ಮಾನವೀಯತೆಯ ಗುಣ ಬೆಳೆದಾಗ ಏನೋ ಅಚ್ಚರಿ ಅವ್ಯಕ್ತ ಆನಂದ ದೊರೆಯುತ್ತದೆ. ಸಾಧನೆಯ ಹಾದಿಗೆ ಈ ಆನಂದ ನಂದಾದೀಪವಾಗಿ ಉರಿಯಲು ಮನಸ್ಸನ್ನು ಕ್ರಿಯಾತ್ಮಕ ಕಾರ್ಯಗಳಲ್ಲಿ ಬಳಸಬೇಕು. ಏನೂ ಕ್ರಿಯೆ ಇಲ್ಲದ ಮನಸ್ಸು ನಿಂತ ನೀರಿನಂತೆ ಉಪಯೋಗಕ್ಕೆ ಬಾರದಾಗುತ್ತದೆ. ಒಬ್ಬಂಟಿಯಾಗಿ ಕುಳಿತ ಮನಸ್ಸು ಎಲ್ಲವನ್ನೂ ಚಿಂತಿಸುತ್ತ ಏನೂ ತೀರ್ಮಾನ ಮಾಡಲಾಗದೆ ಸುಮ್ಮನೆ ಕಾಲ ಹರಣ ಮಾಡಲು ಪ್ರೇರೇಪಿಸುತ್ತದೆ. ನಮ್ಮ ಶಕ್ತಿಯನ್ನು ಉಪಯೋಗಿಸಿದರೆ ತಾನೇ ನಮ್ಮ ದೇಹ ಹಗುರವಾಗುವುದು. ಹಾಗೂ ಮನಸ್ಸು ಹಕ್ಕಿಯಂತೆ ಹಾರಾಡಲು ಆಗುವುದು. ಇಲ್ಲವಾದರೆ ಪಂಜರದಲ್ಲಿ ಇರಿಸಿದ ಗಿಳಿಯಂತೆ ಬಂಧಿಯಾಗುವುದು.

ಅಂತರಂಗ ಶುದ್ದಿಯಾಗಲು ಬಾಹ್ಯದ ಕ್ರಿಯೆಗಳು ನೇರ ಹಾಗೂ ನಯವಾಗಿರಬೇಕು. ಶುದ್ಧಾಚಾರ ಯಾವತ್ತೂ ಒಳ್ಳೆಯ ಅಭಿಪ್ರಾಯಕ್ಕೆ ಬದ್ಧವಾಗಿರುತ್ತದೆ. ಅರೋಗ್ಯ ಪೂರ್ಣ ಆಲೋಚನೆಗಳಿಂದ ಸ್ವಸ್ಥ ಸಮಾಜ ನಮ್ಮದಾಗುತ್ತದೆ. ಎಲ್ಲಿ ಧನಾತ್ಮಕ ಕಾರ್ಯಗಳು ಜರುಗುತ್ತವೋ ಅಲ್ಲಿ ಸ್ನೇಹ ನಂಬಿಕೆಗಳು ನೆಲೆಗೊಳ್ಳುತ್ತವೆ. ಹಾಗಾಗಿ ಅದರ ಬಗ್ಗೆ ಚಿಂತನೆಗೆ ಗಮನ ಹರಿಸಬೇಕಿದೆ.

✍️ ಮಲ್ಲಿಕಾ ಜೆ ರೈ ಪುತ್ತೂರು ದ ಕ.
ಅಂಕಣಕಾರರು, ಕವಯಿತ್ರಿ

- Advertisement -

Related news

error: Content is protected !!