Wednesday, July 22, 2026
spot_imgspot_img
spot_imgspot_img

ತಾಯಿಯ ಪ್ರೀತಿ: ಇದು ಕಾಲ ಮೀರಿದ ಬಂಧ

- Advertisement -
- Advertisement -

“ತಾಯಿಯೇ ದೇವರು” ಎಂಬ ಮಾತು ನಮ್ಮ ಭಾರತೀಯ ಸಂಸ್ಕೃತಿಯ ಹೃದಯದಲ್ಲೇ ನೆಲೆಯಾಗಿದೆ. ಮಾನವನ ಬದುಕಿನ ಮೊದಲ ಗುರು, ಮೊದಲ ಸ್ನೇಹಿತೆ, ಮೊದಲ ಆಶ್ರಯದಾತೆ ಮತ್ತು ಮೊದಲ ಪ್ರೇರಣೆಯೆಂದರೆ ಅವಳು ತಾಯಿಯೇ. ತನ್ನ ಸುಖವನ್ನು ಬದಿಗಿಟ್ಟು ಮಕ್ಕಳ ಭವಿಷ್ಯಕ್ಕಾಗಿ ಬಾಳುವ ತಾಯಿಯ ಮಮತೆ, ತ್ಯಾಗ ಮತ್ತು ಸಹನೆಯನ್ನು ಸ್ಮರಿಸಲು ಆಚರಿಸುವ ವಿಶೇಷ ದಿನವೇ ಅಮ್ಮಂದಿರ ದಿನ. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. ಇದು ಕೇವಲ ಹೂಗುಚ್ಛ, ಉಡುಗೊರೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ವಿನಿಮಯಕ್ಕಷ್ಟೇ ಸೀಮಿತವಾದ ದಿನವಲ್ಲ; ತಾಯಿಯ ಮಹತ್ವವನ್ನು ಅರಿತು ಕೃತಜ್ಞತೆ ಸಲ್ಲಿಸುವ ದಿನವೂ ಹೌದು.

ಒಂದು ಮಗುವಿನ ಬದುಕು ತಾಯಿಯ ಗರ್ಭದಲ್ಲೇ ಆರಂಭವಾಗುತ್ತದೆ. ಅಕ್ಷರದ ಗುರು ಶಾಲೆಯ ಶಿಕ್ಷಕರಾದರೆ, ಬದುಕಿನ ಗುರು ತಾಯಿ ಎಂಬುದು ಸುಳ್ಳಲ್ಲ. ಇಂದಿನ ಯಾಂತ್ರಿಕ ಜೀವನದಲ್ಲಿ ಎಲ್ಲವೂ ವೇಗವಾಗಿ ಬದಲಾಗುತ್ತಿದ್ದರೂ ತಾಯಿಯ ಪ್ರೀತಿ ಮಾತ್ರ ಬದಲಾಗಿಲ್ಲ. ಮಕ್ಕಳು ದೊಡ್ಡವರಾದರೂ, ಉದ್ಯೋಗಕ್ಕಾಗಿ ದೂರದ ನಗರಗಳಿಗೆ ಹೋದರೂ ತಾಯಿಯ ಮನಸ್ಸು ಸದಾ ಅವರ ಚಿಂತೆಯಲ್ಲೇ ಇರುತ್ತದೆ. ತನ್ನ ಮಕ್ಕಳ ಯಶಸ್ಸಿನಲ್ಲಿ ಸಂಭ್ರಮಿಸಿ ಅವರ ನೋವಿನಲ್ಲಿ ತಾನೇ ಕಣ್ಣೀರು ಹಾಕುವ ಹೃದಯ ತಾಯಿಯದು.

ಅಮ್ಮಂದಿರ ದಿನದ ಆಚರಣೆಗೆ ಪಾಶ್ಚಾತ್ಯ ದೇಶಗಳಲ್ಲಿ ವಿಶೇಷ ಹಿನ್ನೆಲೆ ಇದೆ. ಅಮೆರಿಕದ ಅನ್ನಾ ಜಾರ್ವಿಸ್ ಎಂಬ ಮಹಿಳೆ ತನ್ನ ತಾಯಿಯ ಸೇವೆ ಮತ್ತು ಸಮಾಜಮುಖಿ ಚಿಂತನೆಗೆ ಗೌರವ ಸಲ್ಲಿಸಲು ವಿಶೇಷ ದಿನವನ್ನು ಆಚರಿಸಲು ಮುಂದಾದ ಪ್ರಯತ್ನದ ಫಲವಾಗಿ 1914ರಲ್ಲಿ ಅಮೆರಿಕ ಸರ್ಕಾರ ಮೇ ತಿಂಗಳ ಎರಡನೇ ಭಾನುವಾರವನ್ನು ಅಧಿಕೃತವಾಗಿ Mother’s Day ಎಂದು ಘೋಷಿಸಿತು. ನಂತರ ಈ ಆಚರಣೆ ಜಗತ್ತಿನ ಅನೇಕ ರಾಷ್ಟ್ರಗಳಿಗೆ ವ್ಯಾಪಿಸಿತು.

ಭಾರತೀಯ ಸಂಸ್ಕೃತಿಯಲ್ಲಿ ತಾಯಿಯ ಸ್ಥಾನ ಮಹತ್ವದ್ದು. “ಮಾತೃ ದೇವೋ ಭವ” ಎಂದು ಉಪನಿಷತ್ತುಗಳು ಹೇಳಿವೆ. ದೇವರ ರೂಪವೇ ತಾಯಿ ಎಂಬ ಭಾವನೆ ನಮ್ಮ ಸಂಸ್ಕೃತಿಯ ಆತ್ಮವಾಗಿರುವುದರಿಂದ ನಮ್ಮ ಪಾಲಿಗೆ ಅಮ್ಮಂದಿರ ದಿನವು ಕೇವಲ ಪಾಶ್ಚಾತ್ಯ ಆಚರಣೆ ಅಲ್ಲ; ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಪುನಃ ನೆನಪಿಸುವ ಅವಕಾಶವಾಗಿದೆ. ಹಾಗೆಂದು ಅದು ಒಂದು ದಿನಕ್ಕಷ್ಟೇ ಮೀಸಲು ಅಲ್ಲ.

ಆಧುನಿಕ ಸಮಾಜದಲ್ಲಿ ತಾಯಿಯ ಸವಾಲುಗಳು ಹೆಚ್ಚಾಗಿವೆ. ಹಿಂದೆ ಕೂಡು ಕುಟುಂಬಗಳಿದ್ದರೆ ಇಂದು ಮರೆಯಾಗಿ ವಿಭಕ್ತ ಕುಟುಂಬಗಳಿವೆ. ಉದ್ಯೋಗ, ಮನೆ ಕೆಲಸ, ಮಕ್ಕಳ ಶಿಕ್ಷಣ, ವೃದ್ಧರ ಆರೈಕೆ ಹೀಗೆ ಎಲ್ಲ ಹೊಣೆಗಾರಿಕೆಗಳನ್ನು ಒಂದೇ ಸಮಯದಲ್ಲಿ ನಿರ್ವಹಿಸುವ ಸವಾಲು ಅನೇಕ ಮಹಿಳೆಯರ ಮೇಲಿದೆ. ಅದರಲ್ಲೂ ಉದ್ಯೋಗದಲ್ಲಿರುವ ತಾಯಂದಿರು ಕಛೇರಿಯ ಒತ್ತಡ ಮತ್ತು ಮನೆಯ ಜವಾಬ್ದಾರಿಗಳ ನಡುವೆ ಸಮತೋಲನ ಸಾಧಿಸಲು ಹೋರಾಡುತ್ತಿರುತ್ತಾರೆ. ಬೆಳಿಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ದುಡಿಯುವ ಅವರ ಶ್ರಮಕ್ಕೆ ಸಾಕಷ್ಟು ಮಾನ್ಯತೆ ಸಿಗುತ್ತಿದೆಯೇ ಎಂಬ ಪ್ರಶ್ನೆಯೂ ಕೆಲವೊಮ್ಮೆ ಉದ್ಭವಿಸುತ್ತದೆ. ಹಲವಾರು ಮನೆಗಳಲ್ಲಿ ಮಹಿಳೆಯರ ದುಡಿಮೆ “ಕರ್ತವ್ಯ”ವೆಂದು ಮಾತ್ರ ಪರಿಗಣಿಸಲಾಗುತ್ತದೆ; ಆದರೆ ಅದುವೇ ಕುಟುಂಬವನ್ನು ಕಟ್ಟಿಹಾಕುವ ದೊಡ್ಡ ಶಕ್ತಿ ಎಂಬುದೇ ಅರಿವಿಗೆ ನಿಲುಕದೇ ಹೋಗುತ್ತಿದೆ.

ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಮಕ್ಕಳ ಮತ್ತು ತಾಯಿಯ ನಡುವಿನ ಭಾವನಾತ್ಮಕ ಅಂತರ ಹೆಚ್ಚುತ್ತಿದೆ. ಒಂದೇ ಮನೆಯಲ್ಲಿದ್ದರೂ ಮಾತುಕತೆ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಸಮಯ ಕೊಡಲು ಬಯಸುವ ತಾಯಂದಿರಿಗೆ ತಂತ್ರಜ್ಞಾನ ದೊಡ್ಡ ಅಡ್ಡಿಯಾಗಿದೆ. ಮೊಬೈಲ್ ಮತ್ತು ಡಿಜಿಟಲ್ ಜಗತ್ತು ಸಂಬಂಧಗಳ ಆತ್ಮೀಯತೆಯನ್ನು ನಿಧಾನವಾಗಿ ಕಮರಿಸುತ್ತಿದೆ.

ಅಮ್ಮಂದಿರ ದಿನವನ್ನು ಸಂಭ್ರಮದಿಂದ ಆಚರಿಸುವ ಸಮಾಜದಲ್ಲೇ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ವಿಷಾದಕರ ಸಂಗತಿ. ತಮ್ಮ ಜೀವನವನ್ನೇ ಮಕ್ಕಳಿಗಾಗಿ ಮೀಸಲಿಟ್ಟ ತಾಯಂದಿರು ವೃದ್ಧಾಪ್ಯದಲ್ಲಿ ಏಕಾಂಗಿತನ ಅನುಭವಿಸುವುದು ನಮ್ಮ ಸಾಮಾಜಿಕ ಮೌಲ್ಯಗಳ ಕುಸಿತಕ್ಕೆ ಹಿಡಿದ ಕೈಗನ್ನಡಿಯೂ ಹೌದು. ಮಾನವೀಯತೆಯ ಸೋಲೂ ಹೌದು.

ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ “Happy Mother’s Day” ಎಂದು ಹಾಕಿಕೊಳ್ಳುತ್ತಾರೆ. ಆದರೆ ಅವರು ತಮ್ಮ ತಾಯಿಯ ಜೊತೆ ಕೆಲವೇ ಕೆಲವು ನಿಮಿಷ ಮಾತಾಡಲು ಕೂಡಾ ಸಮಯವನ್ನು ಕೊಡಲಾರರು. ತಾಯಿಯ ಬಗೆಗಿನ ನಿಜವಾದ ಗೌರವ, ಅಭಿಮಾನವು ಒಂದು ದಿನದ ಆಚರಣೆಯಲ್ಲಿ ಅಲ್ಲ, ಪ್ರತಿದಿನದ ವರ್ತನೆಯಲ್ಲಿ ಇರಬೇಕು. ತಾಯಿಯ ಆರೋಗ್ಯ, ಮನಸ್ಸು ಮತ್ತು ಭಾವನೆಗಳಿಗೆ ಗೌರವ ನೀಡುವುದೇ ಅಮ್ಮಂದಿರ ದಿನದ ನಿಜವಾದ ಸಾರ್ಥಕತೆ.

ಮಗು ಏನೇ ತಪ್ಪು ಮಾಡಿದರೂ ಕ್ಷಮಿಸುವ ಹೃದಯ ತಾಯಿಯದು. ಮಕ್ಕಳ ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸಿ, ಅವರ ನೋವನ್ನು ತನ್ನೊಳಗೆ ಮರೆಮಾಚಿಕೊಳ್ಳುವ ತಾಯಿ ಸಹನೆಯ ಪ್ರತೀಕ. ಇಂಥ ತಾಯಿಯನ್ನು, ತಾಯಿಯ ಮಹತ್ವವನ್ನು ಕನ್ನಡ ಸಾಹಿತ್ಯದಲ್ಲಿಯೂ ಅನೇಕ ಕವಿಗಳು ವರ್ಣಿಸಿದ್ದಾರೆ. ಕುವೆಂಪು, ಬೇಂದ್ರೆ, ಪುತಿನ, ಕಣವಿ ಸೇರಿದಂತೆ ಹಲವಾರು ಕವಿಗಳು ತಾಯಿಯ ಮಮತೆಯನ್ನು ತಮ್ಮ ಕೃತಿಗಳಲ್ಲಿ ಅಮರಗೊಳಿಸಿದ್ದಾರೆ. ಜನಪದ ಹಾಡುಗಳಲ್ಲಿಯೂ ತಾಯಿಯ ತೊಟ್ಟಿಲು ಹಾಡುಗಳು ಜೀವಂತವಾಗಿವೆ. “ಜೋಗುಳ” ಎಂಬ ಪದವೇ ಕನ್ನಡ ಸಂಸ್ಕೃತಿಯಲ್ಲಿ ಮಮತೆಯ ಸಂಕೇತವಾಗಿದೆ.

ಇಂದಿನ ಮಹಿಳೆಯರು ಶಿಕ್ಷಣ, ವಿಜ್ಞಾನ, ಕ್ರೀಡೆ, ರಾಜಕೀಯ, ಸಾಹಿತ್ಯ, ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆಗಳನ್ನು ಮಾಡುತ್ತಿದ್ದಾರೆ. ಆದರೂ ಅವರು ತಮ್ಮ ಮಾತೃತ್ವದ ಹೊಣೆಗಾರಿಕೆಯನ್ನು ಮರೆತಿಲ್ಲ. ಹೀಗೆ ಮನೆಯಲ್ಲೂ, ಸಮಾಜದಲ್ಲೂ ಸಮಾನವಾಗಿ ದುಡಿಯುವ ಮಹಿಳೆಯರಿಗೆ ಅಗತ್ಯವಾದ ಗೌರವ ಮತ್ತು ಬೆಂಬಲ ನೀಡುವುದು ಸಮಾಜದ ಆದ್ಯ ಕರ್ತವ್ಯವಾಗಿದೆ.

ಮಾತೃತ್ವ ಎನ್ನುವುದು ಕೇವಲ ಜೀವ ನೀಡುವ ಪ್ರಕ್ರಿಯೆಯಲ್ಲ; ಉತ್ತಮ ನಾಗರಿಕರನ್ನು ರೂಪಿಸುವ ಮಹತ್ತರ ಜವಾಬ್ದಾರಿಯೂ ಹೌದು. ಮಕ್ಕಳಲ್ಲಿ ಮಾನವೀಯತೆ, ಪ್ರೀತಿ, ಸಹಾನುಭೂತಿ, ಶಿಸ್ತು, ದೇಶಪ್ರೇಮ ಮೊದಲಾದ ಮೌಲ್ಯಗಳನ್ನು ಬಿತ್ತುವ ಶಕ್ತಿ ತಾಯಿಯಲ್ಲಿದೆ. ಆದ್ದರಿಂದ ಒಂದು ಉತ್ತಮ ಸಮಾಜ ನಿರ್ಮಾಣದಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಅಮ್ಮಂದಿರ ದಿನದಂದು ದುಬಾರಿ ಉಡುಗೊರೆ ಕೊಡುವುದಕ್ಕಿಂತ ತಾಯಿಯ ಜೊತೆ ಸಮಯ ಕಳೆಯುವುದೇ ನಾವು ನೀಡಬಹುದಾದ ಬಹುದೊಡ್ಡ ಕಾಣಿಕೆ. ಅವಳ ಕಷ್ಟಗಳನ್ನು ಅರ್ಥಮಾಡಿಕೊಳ್ಳುವುದು, ಮನೆಯ ಕೆಲಸಗಳಲ್ಲಿ ಸಹಾಯ ಮಾಡುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ಪ್ರೀತಿಯಿಂದ ಮಾತನಾಡುವುದು ಇವೇ ನಾವು ಅವಳಿಗೆ ಸಲ್ಲಿಸಬಹುದಾದ ನಿಜವಾದ ಗೌರವ.

ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆಕೆಯೇ ಕುಟುಂಬದ ಆಧಾರಸ್ತಂಭ, ಸಮಾಜದ ಮೊದಲ ಶಿಕ್ಷಕಿ, ಮಾನವೀಯತೆಯ ಜೀವಂತ ರೂಪ. ಹೀಗಿರುವಾಗ ಅಮ್ಮಂದಿರ ದಿನವು ಕೇವಲ ಒಂದು ದಿನದ ಆಚರಣೆಯಲ್ಲ; ತಾಯಿಯ ಮೌಲ್ಯವನ್ನು ಜೀವನಪೂರ್ತಿ ನೆನಪಿಸಿಕೊಳ್ಳುವ ಸಂಕೇತ.

ಇಂದಿನ ಧಾವಂತದ ಬದುಕಿನಲ್ಲಿ ನಾವು ಸಾಧನೆಗಳ ಹಿಂದೆ ಓಡುತ್ತಿದ್ದೇವೆ; ಅದೇನೇ ಆದರೂ ನಮ್ಮ ಮೊದಲ ಯಶಸ್ಸಿನ ಕಾರಣವಾದ ತಾಯಿಯನ್ನು ಮರೆಯಬಾರದು. ತಾಯಿಯ ಕಣ್ಣೀರು ಯಾವ ಮಗುವಿನ ಯಶಸ್ಸಿಗಿಂತಲೂ ದೊಡ್ಡ ಸೋಲು. ಆದ್ದರಿಂದ ಅಮ್ಮಂದಿರ ದಿನದ ಸಂದೇಶ ಒಂದೇ: ನಿಮ್ಮ ನಿಮ್ಮ ತಾಯಿಯನ್ನು ಪ್ರೀತಿಸಿ, ಗೌರವಿಸಿ, ಕಾಪಾಡಿ. ಏಕೆಂದರೆ ಜಗತ್ತಿನಲ್ಲಿ ಏನೇ ಬದಲಾದರೂ ತಾಯಿಯ ಮಮತೆ ಮಾತ್ರ ಶಾಶ್ವತ.

ಡಾ. ಮೈತ್ರಿ ಭಟ್, ವಿಟ್ಲ

- Advertisement -

Related news

error: Content is protected !!