Monday, April 29, 2024
spot_imgspot_img
spot_imgspot_img

ಸ್ವಾತಂತ್ರ್ಯದ ಸವಿಯಲ್ಲಿ ಯೋಧರಿಗಿರಲಿ ನಮನ; ರಾಧಾಕೃಷ್ಣ ಎರುಂಬು

- Advertisement -G L Acharya panikkar
- Advertisement -

ಇಂದು ಸಂತಸದ ದಿನ. 76ಕಳೆದು, 77ನೇ ಸ್ವಾತಂತ್ರ್ಯಚಾರಣೆಯ ಸಂಭ್ರಮದ ಸುದಿನ.ಸ್ವತಂತ್ರತೆಯ ಕನಸು ಕಂಡು ದೈಹಿಕ, ಮಾನಸಿಕ ಹಿಂಸೆಯ ಅನುಭವಿಸಿ ಕಡೆಗೂ ಹೆಮ್ಮೆಯಿಂದ “ನನ್ನ ಭಾರತ” ಎಂದು ಕೂಗಿದ ಹುತಾತ್ಮರ ಸ್ಮರಣೆಯ ದಿನ.ಅಂದು ನಾಯಕರ ದಂಡು, ಚಳುವಳಿಗಳ ಹಿಂಡು, ಕವಿ ಕೋವಿದರ ಬರವಣಿಗೆಗಳು, ನಿಗೂಢವಾಗಿ ಮುದ್ರಣವಾಗುತಿದ್ದ ಪತ್ರಿಕೆಗಳು, ಸ್ವಾತಂತ್ರ್ಯದ ಕಿಚ್ಚು ಎಲ್ಲವೂ ಒಂದೇ ಗುರಿ ಹೊಂದಿತ್ತು, ನಾವು ಸ್ವತಂತ್ರರಾಗೋಣ ಎಂಬುದು.

ಅಲ್ಲೋ ಇಲ್ಲೋ ಆಮಿಷಕ್ಕೊಳಗಾಗಿ ಪರಕೀಯರ ಕೋವಿಗೆ ಬೆಣ್ಣೆ ಸವರುವವರಿದ್ದ ನಮ್ಮವರಿದ್ದರೂ 1947 ಆಗಸ್ಟ್ 14ರ ಮಧ್ಯ ರಾತ್ರಿ ಅವರದ್ದೂ ಸೋಲಾಯಿತು. ಗೆದ್ದ ಸ್ವಚ್ಛ ಭಾರತೀಯ ಜನತೆಯೊಂದಿಗೆ ಅವರೂ ಕೇಕೆ ಹಾಕಿ ಕುಣಿದರು. ಅಂದು ಸರಿಯಾದ ಮಾಧ್ಯಮ, ಸಾರಿಗೆ ಇಲ್ಲದಿದ್ದರೂ ಸರ್ವರ ಮನ ಮನೆಗಳಲ್ಲಿ ಮುಕ್ತವಾಗುವ ವಾಂಛೆ ಇತ್ತು. ಮುಂದಿನ ಜನಾಂಗದ ಸ್ವತಂತ್ರ ಬದುಕಿನ ದೃಷ್ಟಿಕೋನವಿತ್ತು.

ನಾವಿಂದು ಬದಲಾಗಿದ್ದೇವೆ, ಅತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಗೀಳು ಬದುಕಿನ ಸಂಬoಧಗಳನ್ನು ಕಸಿಯುತಿದೆ ಎಂದೆಣಿಸುವುದಿಲ್ಲವೇ? ಪ್ರತಿಯೊಂದರಲ್ಲೂ ದ್ವಂದ್ವತೆಯ ಸೋಗು ಅಭಿವೃದ್ಧಿಯ ಹಾದಿಯಲ್ಲಿ ವೈಷಮ್ಯತೆಯ ಧೂಳೆಬ್ಬಿಸುತ್ತಿದೆ. ಹಿಂದಿನ ನಾಗರಿಕತೆಗಳ ಅವನತಿಯ ಅಂಶಗಳಿಗೆ ಈಗಿನ ನಮ್ಮ ವ್ಯವಸ್ಥೆಗಳು ತಾಳೆಯಾಗುತ್ತಿದೆ. ಮತೀಯ ಸಾಮರಸ್ಯ, ರಾಜಕೀಯ ಬೆಳವಣಿಗೆಗಳಲ್ಲಿ ವ್ಯತಿರಿಕ್ತತೆ, ಸಾಮಾಜಿಕ ಬದುಕಿನಲ್ಲಿ ತಾರತಮ್ಯತೆ, ಧಾರ್ಮಿಕ ಕ್ಷೇತ್ರಗಳಲ್ಲಿ ಅಪವಿತ್ರತೆ, ಪರದೇಶಗಳ ಅವಲಂಬನೆ, ಇವೆಲ್ಲವುಗಳ ಅಟ್ಟಹಾಸ ಮತ್ತೆ ಎದ್ದು ಕಾಣುತ್ತಿದೆ. ನಾವಿಂದು ನೆಮ್ಮದಿಯಿಂದಿದ್ದೇವೆ, ಆದರೆ ನಾಳೆ ನಮ್ಮವರ ಸ್ಥಿತಿ ಏನೆಂಬ ಚಿಂತನೆ ಮರೆತಿದ್ದೇವೆ. ಇವಕ್ಕೆಲ್ಲ ಸರಿಯಾಗಿ ಪ್ರಾಕೃತಿಕ ಬದಲಾವಣೆಗಳು ಪುಷ್ಟಿ ಕೊಡುತ್ತಿದೆಯೆಂಬ ಭಯವು ಕಾಡುತ್ತಿಲ್ಲವೇ?

ಸ್ವತಂತ್ರರಾಗಿ ವರ್ಷ 76 ಕಳೆದಿದ್ದರೆ ಅಂದು ಒಗ್ಗಟ್ಟಿಗೆ ಹೋರಾಡಿದ ಧೀರರು ಕಣ್ಮರೆಯಾಗಿದ್ದಾರೆ. ಇದ್ದರೂ ಅಲ್ಪ ಸ್ವಲ್ಪ ವಾಸ್ತವಿಕತೆ ಅವರಲ್ಲಿದ್ದೀತು. ಹಾಗಿದ್ದರೆ ಈ ಸಂಭ್ರಮದ ನಿಜವಾದ ತಿರುಳನ್ನು ಅರಿತು ಹೇಳುವವರಿಲ್ಲದೆ, ಸಾಂಕೇತಿಕ ಆಚರಣೆಯನ್ನು ಸರಕಾರದ ದೋರಣೆಗಾಗಿ ಚಾಚು ತಪ್ಪದೆ ಸಂಭ್ರಮಿಸುತ್ತಿದ್ದೇವೆ ಅನಿಸುತ್ತಿಲ್ಲವೇ? ಇದನ್ನೇ ನಂಬಿದ ಪುಟಾಣಿಗಳು, ನಮ್ಮಂತಹ ಯುವ ಪೀಳಿಗೆ ಪುಸ್ತಕದ ಬದನೆಕಾಯಿ ರುಚಿಯನ್ನಷ್ಟೇ ಸವಿಯಬೇಕಾಗಿದೆ. ಒಟ್ಟಿನಲ್ಲಿ ಇಂದು ಪುಟಾಣಿಗಳಿಗೆ ಹೊಸ ಸಮವಸ್ತ್ರ ಧರಿಸಿ ಭಾರತದ ಭಾವುಟದ ನವಿರುಗಾಳಿ ಕೆನ್ನೆ ಸವರಿಸಿ,ಸಿಹಿ ತಿನ್ನುತ್ತಾ ಮನರಂಜನೆಯ ಸವಿ ನಿಮಿಷ, ನೌಕರರಿಗೆ ವಾರದ ಮದ್ಯೆ ರಜೆ ದೊರೆತು ಹಾಗೇ ಸುಮ್ಮನೆ ತಿರುಗಾಡುವ ಸಂಭ್ರಮ, ರಾಷ್ಟ್ರದ ರಾಜ್ಯದ ನಾಯಕರಿಗೆ ಧ್ವಜ ಅರಳಿಸುವ ಬಿಡುವಿಲ್ಲದ ದಿನ, ಆದರೆ ನಮ್ಮನ್ನು ರಾತ್ರಿ ಹಗಲು ಸುರಕ್ಷತೆಯಿಂದ ಕಾಪಾಡುವ ಗಡಿ ಸೈನಿಕರಿಗೆ ರಣ ಕ್ಷಣದ ಆತಂಕ, ಹಾಗಿದ್ದರೆ ನಮಗೆಲ್ಲಿದೆ ಸ್ವಾತಂತ್ರ್ಯ. ಒಂದು ಕ್ಷಣ ನಿಮ್ಮ ಮನ ದೇಶ ಕಾಯುವ ಯೋಧರ ಬಳಿ ತೆರಳಿ ಒಂದು ಗೌರವ ಸಲ್ಲಿಸಲಿ, ಸ್ವಾತಂತ್ರ್ಯ ಉತ್ಸವ ಹರುಷ ತರಲಿ.

✒️ರಾಧಾಕೃಷ್ಣ ಎರುಂಬು

- Advertisement -

Related news

error: Content is protected !!