
ಮಂಗಳೂರು, ಜೂ.13: ಜೋಕಟ್ಟೆ ಅರಿಕೆರೆ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದು ಮೃತದೇಹವನ್ನು ತೋಡಿನಲ್ಲಿ ಎಸೆದ ಪ್ರಕರಣವನ್ನು ಪಣಂಬೂರು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಜೂನ್ 10ರಂದು ಬೆಳಿಗ್ಗೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ 62ನೇ ತೋಕೂರು ಗ್ರಾಮದ ಜೋಕಟ್ಟೆ ಅರಿಕೆರೆ ಸಮೀಪದ ಎಂಎಸ್‌ಇಝಡ್‌ಗೆ ಸೇರಿದ ನೀರು ಹರಿಯುವ ತೋಡಿನಲ್ಲಿ ಸುಮಾರು 35-40 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.ತನಿಖೆ ವೇಳೆ ಮೃತನನ್ನು ಬಿಹಾರ ಮೂಲದ ಚಂದನ್ ಚೌಹಾನ್ (39) ಎಂದು ಗುರುತಿಸಲಾಗಿದೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಪ್ರಮುಖ ಆರೋಪಿ ಪ್ರಶಾಂತ್ ಕುಮಾರ್ (36)ನನ್ನು ಗೋವಾ ರಾಜ್ಯದ ಮಡಗಾಂವ್ ರೈಲು ನಿಲ್ದಾಣದಲ್ಲಿ ಬಂಧಿಸಿದ್ದು, ಮತ್ತೋರ್ವ ಆರೋಪಿ ಪಿಂಕೂ ಮಹ್ತೋ (33)ನನ್ನು ಜೋಕಟ್ಟೆಯ ವಿಜಯ ವಿಠಲ ಭಜನಾ ಮಂದಿರದ ಸಮೀಪದಿಂದ ವಶಕ್ಕೆ ಪಡೆದಿದ್ದಾರೆ.ಬಂಧಿತರು ಮೂಲತಃ ಬಿಹಾರ ರಾಜ್ಯದವರಾಗಿದ್ದು, ಜೋಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು.
ಪ್ರಶಾಂತ್ ಕುಮಾರ್ ಎಂಆರ್‌ಪಿಎಲ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೆ, ಪಿಂಕೂ ಮಹ್ತೋ ಬಾರ್ ಬೈಂಡಿಂಗ್ ಕೆಲಸ ಮಾಡುತ್ತಿದ್ದನು.ಪೊಲೀಸರ ತನಿಖೆಯಲ್ಲಿ, ಆರೋಪಿ ಪ್ರಶಾಂತ್ ಕುಮಾರ್ ಅವರ ಪತ್ನಿ ಕಳೆದ ಏಪ್ರಿಲ್ ತಿಂಗಳಲ್ಲಿ ಮತ್ತೋರ್ವ ಯುವಕನೊಂದಿಗೆ ಮನೆ ಬಿಟ್ಟು ತೆರಳಿದ್ದಳು. ಆಕೆಗೆ ಚಂದನ್ ಚೌಹಾನ್ ಸಹಾಯ ಮಾಡಿದ್ದಾನೆ ಎಂಬ ಅನುಮಾನ ಹಾಗೂ ತನ್ನ ಬಗ್ಗೆ ಅಪಪ್ರಚಾರ ನಡೆಸಿದ್ದಾನೆ ಎಂಬ ಸಿಟ್ಟಿನಿಂದ ಪ್ರಶಾಂತ್ ಕುಮಾರ್ ತನ್ನ ಸ್ನೇಹಿತ ಪಿಂಕೂ ಮಹ್ತೋ ಜೊತೆ ಸೇರಿ ಜೂನ್ 9ರಂದು ಸಂಜೆ ಚಂದನ್‌ನ ತಲೆ ಮತ್ತು ಮುಖಕ್ಕೆ ದೊಣ್ಣೆಯಿಂದ ಹಲ್ಲೆ ನಡೆಸಿ ಬಳಿಕ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆಗೈದಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಹತ್ಯೆಯ ಬಳಿಕ ಮೃತದೇಹವನ್ನು ಜೋಕಟ್ಟೆಯಲ್ಲಿರುವ ತನ್ನ ಬಾಡಿಗೆ ಮನೆಯ ಪಕ್ಕದ ತೋಡಿನಲ್ಲಿ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದ ತಂಡ ಪ್ರಕರಣವನ್ನು ಅತಿ ಶೀಘ್ರದಲ್ಲಿ ಭೇದಿಸಿದೆ. ಉಪನಿರೀಕ್ಷಕರಾದ ಶ್ರೀಕಲಾ ಕೆ.ಟಿ., ಜ್ಞಾನಶೇಖರ್ ಹಾಗೂ ಸಿಬ್ಬಂದಿಗಳಾದ ಇಮ್ತಿಯಾಝ್, ಸುರೇಂದ್ರ, ಚೆರಿಯನ್, ದೀಪಕ್, ಫಕ್ಕಿರೇಶ್, ರಾಕೇಶ್ ಮತ್ತು ಮಂಜುನಾಥ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.







