


ಧಾರವಾಡ: ಸಾಲ ಮರುಪಾವತಿಸಲಾಗದೇ ಮೂವರು ಮಕ್ಕಳಿಗೆ ವಿಷ ಕೊಟ್ಟು ತಾಯಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಓರ್ವ ಬಾಲಕಿ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ.
ನಿವೇದಿತಾ ಅಲಿಯಾಸ್ ಗದಿಗೆವ್ವ (8) ಮೃತ ಬಾಲಕಿ. ಭಾಗ್ಯಶ್ರೀ (06), ಹರ್ಷಿತಾ (9) ಮತ್ತು ಸವಿತಾಗೆ (42) ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಣಕಾಸು ವಿಚಾರಕ್ಕೆ ವಿಷಯ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಸವಿತಾ ಗ್ರಾಮದ ವಿವಿಧ ಸಂಘಗಳಲ್ಲಿ ಸುಮಾರು 3 ಲಕ್ಷ ರೂ. ಸಾಲ ಮಾಡಿದ್ದರು. ಸಾಲ ಮರುಪಾವತಿಸಲಾಗದೆ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಮೂರು ಲಕ್ಷಕ್ಕೆ ಹೊಲ ಒತ್ತೆ ಇಟ್ಟಿದ್ದರು ಎನ್ನಲಾಗಿದೆ. ಇದರ ಜೊತೆ ಖಾಸಗಿಯಾಗಿ ಎರಡು ಲಕ್ಷ ಸಾಲ ಕೂಡ ಮಾಡಿದ್ದರು. ಸಾಲಗಾರರ ಕಾಟ ತಾಳದೆ ವಿಷ ಸೇವಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಮೊದಲಿಗೆ ಸವಿತಾ ತನ್ನ ಮೂವರು ಮಕ್ಕಳಿಗೆ ವಿಷ ಕೊಟ್ಟು ನಂತರ ತಾನೂ ವಿಷ ಸೇವಿಸಿದ್ದಾರೆ. ವಿಷ ಸೇವಿಸಿದ ಪರಿಣಾಮ ಚಿಕಿತ್ಸೆ ಫಲಿಸದೇ ನಿವೇದಿತಾ ಮೃತಪಟ್ಟಿದ್ದಾಳೆ. ಉಳಿದವರ ಸ್ಥಿತಿ ಚಿಂತಾಜನಕವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದಿವರಿದಿದೆ.








