
ಬೆಂಗಳೂರು: ಕುರಿ ಮಾಂಸದ ಹೆಸರಿನಲ್ಲಿ ದನದಮಾಂಸದ ಖಾದ್ಯ ನೀಡಿ ಗ್ರಾಹಕರನ್ನು ವಂಚಿಸುತ್ತಿದ್ದ ರೆಸ್ಟೋರೆಂಟ್ ಮಾಲೀಕರಿಬ್ಬರನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೇರಳದ ಬಿಜು(45),ಶಿಬು (44) ಬಂಧಿತರು. ಮತ್ತೊಬ್ಬ ಆರೋಪಿ ಅಭಿಲಾಷ್ ತಲೆ ಮರೆಸಿಕೊಂಡಿದ್ದು, ಇವರ ವಿರುದ್ಧ ಆವಲಹಳ್ಳಿ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಆರೋಪಿಗಳು,ಬೊಮ್ಮೇನಹಳ್ಳಿಯ ಐಸಿರಿ ಹಬ್‌ನಲ್ಲಿರುವ ಕಾಯಲೋರಂ ರೆಸ್ಟೋರೆಂಟ್‌ನಲ್ಲಿ ದನದ ಮಾಂಸ ಖಾದ್ಯವನ್ನು ಗ್ರಾಹಕರಿಗೆ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.ಈಚೆಗೆ ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗಿದ್ದ ಯುವಕರ ಗುಂಪಿಗೆ ಕುರಿ ಮಾಂಸದ ಖಾದ್ಯದ ಬದಲಿಗೆ ದನದ ಮಾಂಸ ನೀಡಲಾಗಿತ್ತು. ಇದನ್ನು ಸೇವಿಸಿದ ಯುವಕರಿಗೆ ಅನುಮಾನ ಬಂದು ಮಾಲೀಕರನ್ನು ಪ್ರಶ್ನಿಸಿದ್ದಲ್ಲದೇ, ಪೊಲೀಸರಿಗೂ ಮಾಹಿತಿ ನೀಡಿದ್ದರು.
ಮೇ 19ರಂದು ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ, ಬಂದ್ ಮಾಡಿಸಿದ್ದಾರೆ. ತನಿಖೆ ವೇಳೆ ಕೊತ್ತನೂರು ಕಡೆಯಿಂದ ದನದ ಮಾಂಸ ಸರಬರಾಜು ಆಗುತ್ತಿದ್ದ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅಲ್ಲಿಯೂ ದಾಳಿ ನಡೆಸಲಾಗಿತ್ತು.ವಿಚಾರಣೆ ವೇಳೆ ಆರೋಪಿಗಳು ಗ್ರಾಹಕರಿಗೆ ದನದ ಮಾಂಸ ಖಾದ್ಯ ನೀಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.








