Wednesday, July 1, 2026
spot_imgspot_img
spot_imgspot_img

ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಪ್ರಶ್ನಿಸಿ ಅರ್ಜಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

- Advertisement -
- Advertisement -

ಬೆಂಗಳೂರು: ರಾಜ್ಯದ 80ಕ್ಕೂ ಹೆಚ್ಚು ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.

ದೆಹಲಿ ಮೂಲದ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (FADA) ಹಾಗೂ ಅದರ ಬೆಂಗಳೂರಿನ ನಾಲ್ಕು ಸದಸ್ಯ ಸಂಸ್ಥೆಗಳು, 2026ರ ಮೇ 22ರಂದು ರಾಜ್ಯ ಸರ್ಕಾರ ಹೊರಡಿಸಿದ ಕನಿಷ್ಠ ವೇತನ ಪರಿಷ್ಕರಣೆ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿವೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ನಡೆಸಿತು.ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಪೀಠವು ಕೇಂದ್ರ ಕಾರ್ಮಿಕ ಸಚಿವಾಲಯ, ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ, ಎಐಸಿಸಿಟಿಯು, ಕರ್ನಾಟಕ ಜನರಲ್ ಲೇಬರ್ ಯೂನಿಯನ್ ಮತ್ತು ಸಿಐಟಿಯುಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿದೆ.

ಅರ್ಜಿಯಲ್ಲಿರುವ ಪ್ರಮುಖ ಅಂಶಗಳು:

ಅರ್ಜಿದಾರರ ಪ್ರಕಾರ, ಎಫ್‌ಎಡಿಎ ರಾಜ್ಯದಲ್ಲಿ 1,998 ವಾಹನ ಮಾರಾಟಗಾರರನ್ನು ಪ್ರತಿನಿಧಿಸುತ್ತಿದ್ದು, ಸುಮಾರು 2 ಲಕ್ಷ ಮಂದಿಗೆ ನೇರ ಉದ್ಯೋಗ ಒದಗಿಸಿದೆ. ಹೊಸ ವೇತನ ಪರಿಷ್ಕರಣೆಯಿಂದ ಆಟೋಮೊಬೈಲ್ ವಲಯದ ಉದ್ದಿಮೆಗಳು ಹಾಗೂ ಡೀಲರ್‌ಗಳಿಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಿ, ಉದ್ಯಮಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇದಲ್ಲದೆ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ಸಂಹಿತೆ–2019ರ ಹಿನ್ನೆಲೆಯಲ್ಲಿ ಕನಿಷ್ಠ ವೇತನ ಕಾಯ್ದೆ–1948 ರದ್ದುಗೊಂಡಿರುವುದನ್ನು ಉಲ್ಲೇಖಿಸಿರುವ ಅರ್ಜಿದಾರರು, ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ಈಗಾಗಲೇ ಕನಿಷ್ಠ ವೇತನ ಹೆಚ್ಚಿದೆ ಎಂದು ವಾದಿಸಿದ್ದಾರೆ. ಹೀಗಾಗಿ, ಮೇ 22ರ ಅಧಿಸೂಚನೆ ಕಾನೂನುಬದ್ಧ ನ್ಯೂನತೆಗಳನ್ನು ಹೊಂದಿದ್ದು, ಅದನ್ನು ರದ್ದುಪಡಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!