Tuesday, August 11, 2026
spot_imgspot_img
spot_imgspot_img

ಬಂಟ್ವಾಳ ನ್ಯಾಯಾಲಯದ ನ್ಯಾಯಾಂಗ ಬಂಧನ ಆದೇಶಕ್ಕೆ ಮಧ್ಯಂತರ ತಡೆ: ಆರೋಪಿಗೆ ಬಿಡುಗಡೆ ಭಾಗ್ಯ-ಏನಿದು ಪ್ರಕರಣ?

- Advertisement -
- Advertisement -

ಬಂಟ್ವಾಳ: ಆರೋಪಿಯೊಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬಂಟ್ವಾಳ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ತಡೆ ನೀಡಿದ್ದು, ಆರೋಪಿಯನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದೆ.

2025ರ ಸೆಪ್ಟೆಂಬರ್‌ನಲ್ಲಿ ಆಲಡ್ಕ–ಪಾಣೆಮಂಗಳೂರು ರಸ್ತೆಯಲ್ಲಿ ಬಂಟ್ವಾಳ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿತ್ತು. ಆಲಡ್ಕ ಕಡೆಯಿಂದ ಪಾಣೆಮಂಗಳೂರಿನತ್ತ ಸಮವಸ್ತ್ರ ಧರಿಸದೆ ಆಟೋ ರಿಕ್ಷಾ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕನಿಗೆ ಪೊಲೀಸರು ರಿಕ್ಷಾ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ಚಾಲಕ ನಿಧಾನವಾಗಿ ರಿಕ್ಷಾ ನಿಲ್ಲಿಸುವಂತೆ ಮಾಡಿ, ಬಳಿಕ ಅಪಾಯಕಾರಿ ರೀತಿಯಲ್ಲಿ ಆಟೋವನ್ನು ತಿರುಗಿಸಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಕಾಲು ಹಾಗೂ ಭುಜಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 103/2025ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 110, 281 ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ 184, 177, 179, 134(a), 134(b) r/w 187ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ಆರೋಪಿಯಾಗಿದ್ದ ಮೊಹಮ್ಮದ್ ಜಾಫರ್ ಅವರನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಆ ಸಂದರ್ಭದಲ್ಲಿ ನ್ಯಾಯಾಧೀಶರಾಗಿದ್ದ ರಾಜೇಂದ್ರ ಪ್ರಸಾದ್ ಅವರು ಆರೋಪಿಯ ಬಂಧನ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಪಾಲಿಸಲಾಗಿಲ್ಲ ಎಂಬ ಕಾರಣಕ್ಕೆ ಆರೋಪಿಯನ್ನು ಬಿಡುಗಡೆಗೊಳಿಸಿದ್ದರು ಎಂದು ತಿಳಿದುಬಂದಿದೆ.ನಂತರ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದೋಷಾರೋಪಣಾ ಪಟ್ಟಿಯನ್ನು ಸ್ವೀಕರಿಸಿದ ನ್ಯಾಯಾಲಯ ಆರೋಪದ ಕುರಿತು ಸಂಜ್ಞೇಯತೆ ಸ್ವೀಕರಿಸಿ, ಆರೋಪಿಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಆ.5, 2026ರಂದು ಆರೋಪಿ ಮೊಹಮ್ಮದ್ ಜಾಫರ್ ಅವರು ಬಂಟ್ವಾಳ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಧೀಶರಾದ ಸೌಂದರ್ಯ ಎಂ. ಅವರು ಆರೋಪವು ಜಾಮೀನು ರಹಿತ ಪ್ರಕರಣವಾಗಿದ್ದು, ಸೆಷನ್ಸ್ ನ್ಯಾಯಾಲಯದ ವಿಚಾರಣಾ ವ್ಯಾಪ್ತಿಗೆ ಒಳಪಡುವುದಾಗಿ ಪರಿಗಣಿಸಿ, ಆರೋಪಿಯನ್ನು ಆ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದರು.

ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಪುನರ್ ಪರಿಶೀಲನಾ ಅರ್ಜಿ ಸಂಖ್ಯೆ 109/2026ರ ವಿಚಾರಣೆ ನಡೆಸಿದ ನ್ಯಾಯಾಲಯವು ಬಂಟ್ವಾಳ ನ್ಯಾಯಾಲಯ ನೀಡಿದ್ದ ನ್ಯಾಯಾಂಗ ಬಂಧನದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.ಅಲ್ಲದೆ, ಆರೋಪಿಯನ್ನು ಬಿಡುಗಡೆಗೊಳಿಸುವಂತೆ ಮಧ್ಯಂತರ ಆದೇಶ ಹೊರಡಿಸಿರುವ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 11, 2026ಕ್ಕೆ ಮುಂದೂಡಿದೆ.

ಆರೋಪಿ ಪರವಾಗಿ ವಿಟ್ಲದ ವಕೀಲರಾದ ಶಿವಾನಂದ ಎಂ. ವಕ್ಕೆತ್ತಿರಿ ಹಾಗೂ ಉಮೇಶ್ ಕುಮಾರ್ ವೈ. ಅವರು ವಾದ ಮಂಡಿಸಿದ್ದರು.

- Advertisement -

Related news

error: Content is protected !!