
ಮಂಗಳೂರು: ಸ್ಟಿಂಗ್ ಪ್ರಕರಣದಲ್ಲಿ ಪುತ್ತೂರಿನ ಹೆಸರು ಪ್ರಸ್ತಾಪವಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಮುಜುಗರ ತಂದಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಜನರ ಮುಂದಿಡಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಸ್ಟಿಂಗ್ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ. ತಮ್ಮ ತಂದೆಯ ಹೆಸರಿಗೆ ಕಳಂಕ ತರಲು ಸ್ಟಿಂಗ್ ನಡೆಸಲಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿರುವ ಹಿನ್ನೆಲೆಯಲ್ಲಿ, ಪ್ರಕರಣದ ಹಿಂದಿನ ಉದ್ದೇಶ ಹಾಗೂ ಇದರಲ್ಲಿ ಭಾಗಿಯಾಗಿರುವವರ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಸತೀಶ್ ಕುಂಪಲ ಒತ್ತಾಯಿಸಿದ್ದಾರೆ.

2011ರಲ್ಲಿ ನಡೆದಿದೆ ಎನ್ನಲಾದ ಈ ಪ್ರಕರಣವನ್ನು 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಪಡೆಯಲು ಬಳಸಿಕೊಳ್ಳಲಾಗಿದೆ ಎಂಬ ಆರೋಪಗಳಿವೆ. ಹಾಗಾದರೆ ಟಿಕೆಟ್ ಪಡೆಯುವ ಉದ್ದೇಶದಿಂದ ಈ ಪ್ರಕರಣವನ್ನು ಬಳಸಿಕೊಂಡವರು ಯಾರು? ಸ್ಟಿಂಗ್ ಕಾರ್ಯಾಚರಣೆಯಲ್ಲಿ ಯಾರ್ಯಾರು ಭಾಗಿಯಾಗಿದ್ದರು? ಯಾರ ವಿರುದ್ಧ ಸ್ಟಿಂಗ್ ನಡೆಸಲಾಗಿತ್ತು? ಎಂಬ ಪ್ರಶ್ನೆಗಳಿಗೆ ತನಿಖೆಯ ಮೂಲಕ ಸ್ಪಷ್ಟ ಉತ್ತರ ದೊರೆಯಬೇಕು ಎಂದು ಅವರು ಹೇಳಿದ್ದಾರೆ.ಪ್ರಕರಣದಲ್ಲಿ ಪುತ್ತೂರಿನ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಪುತ್ತೂರಿನ ಹಾಲಿ ಶಾಸಕರೂ ಇದೇ ರೀತಿಯ ಪ್ರಯತ್ನದ ಮೂಲಕ ಚುನಾವಣಾ ಟಿಕೆಟ್ ಪಡೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಸತೀಶ್ ಕುಂಪಲ ಮುಂದಿಟ್ಟಿದ್ದಾರೆ.


ಈ ಕುರಿತು ಉಂಟಾಗಿರುವ ಅನುಮಾನಗಳಿಗೆ ತೆರೆ ಎಳೆಯಲು ಪ್ರಕರಣದ ಸಂಪೂರ್ಣ ತನಿಖೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಪುತ್ತೂರು ಮಾತ್ರವಲ್ಲದೆ ರಾಜ್ಯದ ಇತರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇಂತಹ ಘಟನೆಗಳು ನಡೆದಿವೆಯೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗದಿದ್ದರೆ ಅನಗತ್ಯ ಗೊಂದಲಗಳಿಗೆ ಅವಕಾಶವಾಗಬಹುದು. ಹೀಗಾಗಿ ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಸಮಗ್ರ ತನಿಖೆ ನಡೆಸಿ, ಸತ್ಯಾಂಶಗಳನ್ನು ಜನರ ಮುಂದಿಡಬೇಕು ಎಂದು ಸತೀಶ್ ಕುಂಪಲ ಆಗ್ರಹಿಸಿದ್ದಾರೆ.








