
ಬೆಳ್ಳಾರೆ: ಅಕ್ರಮವಾಗಿ ಗೋವಧೆ ನಡೆಸಿ ಮಾಂಸ ತಯಾರಿಸುತ್ತಿದ್ದ ಆರೋಪದಡಿ ಮೂವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿರುವ ಘಟನೆ ಕಡಬ ತಾಲೂಕಿನ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕದಲ್ಲಿ ನಡೆದಿದೆ.ಮೇ 29ರ ಸಂಜೆ ಅಕ್ರಮ ಗೋವಧೆ ನಡೆಯುತ್ತಿರುವ ಕುರಿತು ಮಾಹಿತಿ ಪಡೆದ ಬೆಳ್ಳಾರೆ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ. ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿದೆ.




ತೋಟವೊಂದರಲ್ಲಿ ಜಾನುವಾರನ್ನು ವಧೆ ಮಾಡಿ ಮಾಂಸ ತಯಾರಿಸುತ್ತಿರುವುದು ಪತ್ತೆಯಾಗಿದೆ.ಸ್ಥಳದಲ್ಲಿದ್ದ ಕೆ. ಅಬ್ದುಲ್ ರಫೀಕ್ (37), ಅದ್ರಾಮ ಮಂತೂರು (41) ಹಾಗೂ ಅಬ್ದುಲ್ ಖಾದರ್ ಪಣೆಮಜಲು (57) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗೋವಧೆ ನಡೆಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ
.ಪೊಲೀಸರು ಸ್ಥಳದಿಂದ ಜಾನುವಾರು ಮಾಂಸ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ–2023ರ ಕಲಂ 4, 7 ಮತ್ತು 12ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.








