
ಹಾಸನ : ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಭಾವಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ, ಅದು ಸಹಜ ಸಾವಲ್ಲ, ಮಾರಕಾಸ್ತ್ರಗಳಿಂದ ನಡೆಸಿದ ಹತ್ಯೆ ಎಂಬ ಆಘಾತಕಾರಿ ಸಂಗತಿ ಹಾಸನ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಪರಿಶೀಲನೆಯ ವೇಳೆ ವ್ಯಕ್ತಿಯ ಕುತ್ತಿಗೆಗೆ ಚೂಪಾದ ಆಯುಧದಿಂದ ಇರಿದು, ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿರುವುದು ಪತ್ತೆಯಾಗಿದೆ.ಕಲ್ಲಹಳ್ಳಿ ಗ್ರಾಮದ ನಿವಾಸಿ ಮಂಜುನಾಥಸ್ವಾಮಿ (58) ಹತ್ಯೆಯಾದವರು. ಅವಿವಾಹಿತರಾಗಿದ್ದ ಇವರು ಗ್ರಾಮದ ತಮ್ಮ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಘಟನೆಯ ದಿನ ಬೆಳಗ್ಗೆ ಮಂಜುನಾಥಸ್ವಾಮಿ ಅವರ ಮನೆಗೆ ಸ್ನೇಹಿತ ನಾಗಣ್ಣ ಬಂದಿದ್ದರು. ಆದರೆ ಮನೆಯ ಹೊರಗಿನಿಂದ ಬಾಗಿಲಿಗೆ ಚಿಲಕ ಹಾಕಿದ್ದರಿಂದ ಅವರಿಗೆ ಒಳಗೆ ಪ್ರವೇಶಿಸಲು ಸಾಧ್ಯವಾಗದೆ ವಾಪಸ್ ತೆರಳಿದ್ದರು.
ಇದೇ ಸಂದರ್ಭದಲ್ಲಿ ಮನೆಯೊಳಗಿನಿಂದ ಟಿವಿ ಜೋರಾಗಿ ಸದ್ದು ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿ ಜಗದೀಶ್ ಅವರಿಗೆ ಅನುಮಾನ ಮೂಡಿದೆ. ಬಳಿಕ ನಾಗಣ್ಣ ಮತ್ತು ಜಗದೀಶ್ ಇಬ್ಬರೂ ಸೇರಿ ಮನೆಯ ಬಾಗಿಲಿನ ಚಿಲಕ ತೆಗೆದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಮಂಜುನಾಥಸ್ವಾಮಿ ಕುಳಿತ ಸ್ಥಿತಿಯಲ್ಲೇ ಬಿದ್ದಿರುವುದು ಕಂಡುಬಂದಿದೆ.ಆರಂಭದಲ್ಲಿ ಮಂಜುನಾಥಸ್ವಾಮಿ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಭಾವಿಸಿದ್ದರು. ಹೀಗಾಗಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳನ್ನು ಆರಂಭಿಸಿದ್ದರು. ಆದರೆ ಸಾವಿನ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಕುತ್ತಿಗೆಗೆ ಚೂಪಾದ ಮಾರಕಾಸ್ತ್ರದಿಂದ ಇರಿದು ಹಾಗೂ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಸಹಜ ಸಾವು ಎಂದು ಭಾವಿಸಲಾಗಿದ್ದ ಪ್ರಕರಣ ಕೊಲೆ ಪ್ರಕರಣವಾಗಿ ಬದಲಾಗಿದೆ.ಮೃತ ಮಂಜುನಾಥಸ್ವಾಮಿ ಸುಮಾರು 15 ಎಕರೆ ಜಮೀನು ಹೊಂದಿದ್ದು, ಅದರಲ್ಲಿ ಬಿದಿರು ಬೆಳೆದಿದ್ದರು ಎನ್ನಲಾಗಿದೆ. ಸುಮಾರು 30 ವರ್ಷಗಳ ಹಿಂದೆ ಅಪಹರಣ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ, ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಗೊರೂರು ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಗೆ ಕಾರಣವೇನು ಮತ್ತು ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.







