

ಕೇರಳ: ತಿರುವನಂತಪುರಂ ಜಿಲ್ಲೆಯ ನೆಡುಮಂಗಾಡಿನಲ್ಲಿ ನಡೆದ ಹೃದಯವಿದ್ರಾವಕ ಘಟನೆ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಒಂದೂವರೆ ವರ್ಷದ ಗಂಡು ಮಗು ಅರ್ಶಿದ್ ಸಾವಿನ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ತಿರುಗಿದ್ದು, ಮಗುವಿನ ತಾಯಿ ಅಖಿಲಾ ಹಾಗೂ ಆಕೆಯ ಲಿವ್-ಇನ್ ಸಂಗಾತಿ ಅಶ್ಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಆರಂಭದಲ್ಲಿ ಮಗು ಆಹಾರ ಸೇವಿಸಿದ ಬಳಿಕ ಉಸಿರುಗಟ್ಟಿ ಮೃತಪಟ್ಟಿದೆ ಎಂದು ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ದೇಹದ ಮೇಲೆ 50ಕ್ಕೂ ಹೆಚ್ಚು ಹಳೆಯ ಹಾಗೂ ಹೊಸ ಗಾಯಗಳ ಗುರುತುಗಳು ಪತ್ತೆಯಾಗಿವೆ.

ತಲೆ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಆಂತರಿಕ ರಕ್ತಸ್ರಾವ ಕಂಡುಬಂದಿದ್ದು, ನಿರಂತರ ಹಲ್ಲೆಯಿಂದಲೇ ಮಗು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಗುವಿನ ದೇಹದಲ್ಲಿ ಸುಟ್ಟ ಗಾಯಗಳ ಗುರುತುಗಳೂ ಕಂಡುಬಂದಿದ್ದು, ಸಿಗರೇಟ್ ಅಥವಾ ಲೈಟರ್‌ನಿಂದ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಮಗುವಿನ ಎರಡೂ ಕೈಗಳು ಮುರಿದಿದ್ದರೂ ಅದನ್ನು ಸಾಮಾನ್ಯ ಅಪಘಾತ ಎಂದು ಆರೋಪಿಗಳು ಹೇಳಿದ್ದರು. ಆದರೆ ಮಗುವಿನ ಅಜ್ಜ-ಅಜ್ಜಿಯರು ಹಿಂಸೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ.


ಪ್ರಕರಣ ಬಹಿರಂಗವಾಗುತ್ತಿದ್ದಂತೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾಕ್ಷ್ಯ ಸಂಗ್ರಹಕ್ಕಾಗಿ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ಯುವ ವೇಳೆ ಜನರು ಹಲ್ಲೆಗೆ ಯತ್ನಿಸಿದ ಘಟನೆ ಕೂಡ ನಡೆದಿದೆ.

ಮಗುವಿನ ತಂದೆ ಅಖಿಲ್, ಅರ್ಶಿದ್ ತಾಯಿಯ ಗರ್ಭದಲ್ಲಿ ಮೂರು ತಿಂಗಳಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಅಖಿಲ್ ಸಾವಿನ ಹಿಂದೆ ಅಖಿಲಾ ಮತ್ತು ಅಶ್ಕರ್ ನಡುವಿನ ಸಂಬಂಧವೇ ಅಖಿಲ್ ಆತ್ಮಹತ್ಯೆಗೆ ಕಾರಣವೆಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯ ವಲಯಗಳಲ್ಲಿ ಕೇಳಿಬರುತ್ತಿವೆ. ಆದರೆ ಈ ಕುರಿತು ಯಾವುದೇ ಅಧಿಕೃತ ದೃಢೀಕರಣ ಅಥವಾ ಪೊಲೀಸ್ ಮಾಹಿತಿ ಇದುವರೆಗೆ ಹೊರಬಂದಿಲ್ಲ.

ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.








